ಶನಿವಾರ, ಜುಲೈ 31, 2021
25 °C

ಚಿಂಚೋಳಿಯಲ್ಲಿ ಪ್ರವಾಹ ಭೀತಿ, ಚಿಮ್ಮನಚೋಡ, ಕನಕಪುರದಲ್ಲಿ ಮನೆಗಳಿಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯ ಭರ್ತಿಯಾಗಿದ್ದರಿಂದ ಹೆಚ್ಚುವರಿ‌ ನೀರು ನದಿಗೆ ಬಿಡಲಾಗಿದೆ. ಇದರಿಂದ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಚಿಮ್ಮನಚೋಡ ಗ್ರಾಮದ ಭೋವಿ ಬಡಾವಣೆಯಲ್ಲಿ 25, ಕನಕಪುರದಲ್ಲಿ 10 ಮನೆಗಳಿಗೆ ನೀರು‌ ನುಗ್ಗಿದೆ.

ಜಲಾಶಯದಿಂದ ಒಟ್ಟು 5 ಗೇಟುಗಳು ಎತ್ತಿ ಸುಮಾರು 20 ಸಾವಿರ ಕ್ಯುಸೆಕ್ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗಿದೆ. ಎರಡು ಗೇಟುಗಳು ಐದು ಅಡಿ ಎತ್ತರ ಎತ್ತಿದ್ದರೆ, ಮೂರು ಗೇಟುಗಳು ಮೂರು ಅಡಿ ಎತ್ತರ ಎತ್ತಲಾಗಿದೆ. 

ಒಳ ಹರಿವು ಹೆಚ್ಚಾಗಿರುವುದರಿಂದ ಅಷ್ಟೇ ಪ್ರಮಾಣದ ನೀರು ನದಿಗೆ ಬಿಡಲಾಗಿದೆ ಎಂದು ಕೆಳದಂಡೆ ಮುಲ್ಲಾಮಾರಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಣಮಂತ ಪೂಜಾರಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ. 

ಚಿಮ್ಮನಚೋಡ ಭೊವಿ ಬಡಾವಣೆಯಲ್ಲಿ ಜನರ ಮನೆಗಳಿಗೆ ನೀರು‌ ನುಗ್ಗಿ ಜನ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ ಜತೆಗೆ ದವಸ ಧಾನ್ಯ ಬಟ್ಟೆ ಬರೆಗಳು ಪ್ರವಾಹದ‌ ನೀರಿಗೆ ಆಹುತಿಯಾಗಿವೆ. ಸಂಗಮೇಶ್ವರ ದೇವಾಲಯ ಮುಳುಗಿದ್ದು ಕೇವಲ ಗೋಪುರ ಹಾಗೂ ಛತ್ತು ಕೋಚರಿಸುತ್ತಿದೆ. 

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನೆರವಿನಿಂದ ನಿರ್ಮಿಸಿದ ಪ್ರವಾಹ ನಿಯಂತ್ರಣ ಗೋಡೆಯೂ ಮುಳುಗಿದ್ದು ಭಾಗಶ: ಗೋಚರಿಸುತ್ತಿದೆ ಎಂದು ಬಿಜೆಪಿ ಮುಖಂಡ ರಾಮರೆಡ್ಡಿ ಪಾಟೀಲ ತಿಳಿಸಿದರು. 

ಚಿಮ್ಮನಚೋಡ, ತಾಜಲಾಪುರ. ಗಾರಂಪಳ್ಳಿ ಹಾಗೂ ಚಂದಾಪುರ ಬ್ಯಾರೇಜು ಮುಳುಗಿದೆ. 

‘ನನ್ನ ಮನೆ ಸಹಿತ ಕನಕಪುರದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ಹೊಕ್ಕಿದೆ. ಇದರಿಂದ ಕಾಳುಕಡಿ ಹಾಳಾಗಿವೆ’ ಎಂದು ದಲಿತ ಸೇನೆಯ ತಾಲ್ಲೂಕು ಉಪಾಧ್ಯಕ್ಷ ಶ್ರಿಧರ ವಗ್ಗಿ ತಿಳಿಸಿದ್ದಾರೆ.


ಚಿಂಚೋಳಿ ತಾಲ್ಲೂಕು ಚಿಮ್ಮನಚೋಡ ಗ್ರಾಮದ ಸಂಗಮೇಶ್ವರ ದೇವಾಲಯ ಮುಳುಗಿರುವುದು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು