ಮಂಗಳವಾರ, ಆಗಸ್ಟ್ 3, 2021
21 °C

‘ಕಾಲ್ ಬಾಯ್’ ಆಗಲು ಹೋಗಿ ₹ 83 ಸಾವಿರ ಕಳೆದುಕೊಂಡ ಸಾಫ್ಟ್‌‌ವೇರ್ ಎಂಜಿನಿಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳೆಯರ ಜತೆ ಲೈಂಗಿಕ ಕ್ರಿಯೆ ನಡೆಸಿದರೆ ಪ್ರತಿ ತಿಂಗಳು ವೇತನ ನೀಡುವುದಾಗಿ ಹೇಳಿದ್ದ ಸೈಬರ್ ವಂಚಕರು, ನೋಂದಣಿ ನೆಪದಲ್ಲಿ ನಗರದ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರಿಂದ ₹ 83 ಸಾವಿರ ಪಡೆದುಕೊಂಡು ವಂಚಿಸಿದ್ದಾರೆ.

ಈ ಸಂಬಂಧ ಅಮೃತಹಳ್ಳಿ ನಿವಾಸಿಯಾದ 26 ವರ್ಷದ ಎಂಜಿನಿಯರ್, ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಅಪರಿಚಿರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ‘ನಗರದ ಕಂಪನಿಯೊಂದರಲ್ಲಿ ದೂರುದಾರ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವೈರಾಣು ಹರಡುವಿಕೆ ತಡೆಗಾಗಿ ಘೋಷಿಸಿದ್ದ ಲಾಕ್‌ಡೌನ್‌ನಿಂದಾಗಿ ಕಂಪನಿಯ ಕೆಲ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಮುಂಬರುವ ದಿನಗಳಲ್ಲಿ ತನ್ನನ್ನು ಕೆಲಸದಿಂದ ತೆಗೆಯಬಹುದೆಂದು ಆತಂಕಗೊಂಡಿದ್ದ ದೂರುದಾರ, ಬೇರೆ ಕಂಪನಿಯಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಜಾಲತಾಣವೊಂದರಲ್ಲಿ ಸಿಕ್ಕ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದ ಎಂಜಿನಿಯರ್, ಕೆಲಸ ಬೇಕೆಂದು ಕೋರಿದ್ದರು. ಅದಕ್ಕೆ ಉತ್ತರಿಸಿದ್ದ ಅಪರಿಚಿತ, ‘ಕಾಲ್‌ ಬಾಯ್ ಕೆಲಸ ಇದೆ. ಮಹಿಳೆಯರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ವೇತನ ನೀಡುತ್ತೇವೆ. ಕೆಲಸಕ್ಕೂ ಮುನ್ನ ನೋಂದಣಿ ಮಾಡಿಕೊಳ್ಳಬೇಕು. ಅದಕ್ಕೆ ಶುಲ್ಕ ಭರಿಸಬೇಕು’ ಎಂದಿದ್ದ. ಆತನ ಮಾತು ನಂಬಿದ್ದ ಎಂಜಿನಿಯರ್, ಹಂತ ಹಂತವಾಗಿ ₹83,500 ಪಾವತಿಸಿದ್ದರು. ಅದಾದ ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು