ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್ ಡ್ಯಾಂ ಕಾಮಗಾರಿ ಕಳಪೆ: ಆರೋಪ

ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೂಗೊಳ್ಳಲು ಆಗ್ರಹ
Last Updated 14 ಜುಲೈ 2020, 17:40 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನ ಕೋಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಠಾಣ ದೊಡ್ಡ ತಾಂಡಾ ಸಮೀಪದ ಸರ್ವೆ ನಂಬರ್ 16/2ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಅಂದಾಜು ₹1ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ಅವೈಜ್ಞಾನಿಕವಾಗಿದೆ ಮತ್ತು ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಚೆಕ್ ಡ್ಯಾಂನಲ್ಲಿ ನಿಲ್ಲಬೇಕಾದ ನೀರು ಪಕ್ಕದ ಹೊಲಕ್ಕೆ ಹರಿಯುತ್ತಿದೆ. ಇದರಿಂದಾಗಿ ಎರಡು ಎಕರೆ ಬೆಳೆ ನಷ್ಟವಾಗುತ್ತಿದೆ. ಕಳೆದ ವರ್ಷ ಮುಂಗಾರು ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ. ಅದರಂತೆ ಈ ವರ್ಷ ಮೊದಲ ಮಳೆಗೆ ಚೆಕ್ ಡ್ಯಾಂನ ಗೇಟುಗಳು ಮುಚ್ಚಿಬಿಟ್ಟಿವೆ. ಈ ಪರಿಣಾಮ ನೀರು ಹೊಲಕ್ಕೆ ನುಗ್ಗಿ ಎರಡು ಎಕರೆಯಲ್ಲಿ ಮಾಡಿದ್ದ ಮುಂಗಾರು ಬಿತ್ತನೆ ನಷ್ಟವಾಗಿ ಪುನಃ ಬಿತ್ತನೆ ಮಾಡುವ ಪ್ರಸಂಗ ತಲೆದೋರಿದೆ ಎಂದು ಹೊಲದ ಮಾಲೀಕರು ತಿಳಿಸಿದ್ದಾರೆ.

ಡ್ಯಾಂನ ಬಲದಂಡೆಗೆ ಮಾಡಿದ ಪಿಚ್ಚಿಂಗ್ ಕೆಲಸ ಕಳಪೆಯಾಗಿರುವುದೇ ಈ ಅವಾಂತರಕ್ಕೆ ಮುಖ್ಯ ಕಾರಣ. ಈ ಕಾಮಗಾರಿಯನ್ನು 2019ನೇ ಸಾಲಿನ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಯಾವುದೇ ಮೇಲಧಿಕಾರಿಗಳ ನಿಯಮಿತ ಭೇಟಿ ಇಲ್ಲದೆ ಕೇವಲ ಒಬ್ಬ ವರ್ಕ್ ಇನ್‌ಸ್ಪೆಕ್ಟರ್‌ ನಿಗರಾಣಿಯಲ್ಲಿ ತರಾತುರಿಯಲ್ಲಿ ಮಾಡಿ ಮುಗಿಸಿದ್ದಾರೆ ಎಂದು ರೈತರು ದೂರಿದ್ದಾರೆ.

ಡ್ಯಾಂ ನಿರ್ಮಾಣ ಸಮಯದಲ್ಲಿ ಎರಡು ಎಕರೆಯಷ್ಟು ಸಾಗುವಳಿ ಜಮೀನನ್ನು ಪೂರ್ತಿ ಬಗೆದು ಕಳೆದ ವರ್ಷ ಬಿತ್ತನೆಗೆ ಅಡಚಣೆ ಮಾಡಿರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಚೆಕ್ ಡ್ಯಾಂ ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಇತ್ತ ಹೊಲದವರಿಗೂ ನಷ್ಟವಾಗುತ್ತಿದ್ದು, ಅತ್ತ ಬೇರೆಯವರಿಗೂ ಉಪಯೋಗವಾಗದೆ ಕೇವಲ ಬಿಲ್ ಮಂಜೂರು ಮಾಡಿಸಿಕೊಳ್ಳಲು ನಿರ್ಮಿಸಿದಂತಾಗಿದೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.

ಈ ಕಾಮಗಾರಿ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಡೀ ಕಾಮಗಾರಿಯ ಪ್ರತ್ಯಕ್ಷದರ್ಶಿ ಹಾಗೂ ರೈತ ವಿಶ್ವನಾಥ ಪಾಟೀಲ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT