ಶನಿವಾರ, ಸೆಪ್ಟೆಂಬರ್ 18, 2021
28 °C
ಔಷಧ, ವೈದ್ಯಕೀಯ ಉಪಕರಣಗಳ ಉತ್ಪಾದನಾ ಪಾರ್ಕ್‌ಗಾಗಿ ಪೈಪೋಟಿ

ಎರಡೂ ಕಡೆ ಬಿಜೆಪಿ ಸರ್ಕಾರಗಳಿದ್ದರೂ ‘ಕತ್ತಲಲ್ಲಿ’ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಬೃಹತ್‌ ಪ್ರಮಾಣದ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನಾ ಪಾರ್ಕ್‌ ಸ್ಥಾಪಿಸುವ ಸಂಬಂಧ ಹತ್ತು ರಾಜ್ಯಗಳ ಜತೆಗೆ ಕರ್ನಾಟಕ ಈಗ ಸ್ಪರ್ಧೆಗೆ ಇಳಿದಿದೆ. ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುವ ಈ ಯೋಜನೆ ಬಗ್ಗೆ ರಾಜ್ಯಕ್ಕೆ ತಡವಾಗಿ ಮಾಹಿತಿ ಸಿಕ್ಕಿದೆ.

ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರಗಳಿವೆ. ಈ ಯೋಜನೆ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದಗೌಡ ಅವರ ಇಲಾಖೆಗೆ ಒಳಪಟ್ಟಿದ್ದರೂ ರಾಜ್ಯಕ್ಕೆ ಇದರ ಸುಳಿವು ಸಿಗಲಿಲ್ಲ ಎಂಬುದು ಬಿಜೆಪಿಯಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ. 

ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಇಂತಹ ಯಾವುದೇ ಯೋಜನೆ ಇದ್ದರೂ ಅಂದಿನ ಕೇಂದ್ರ ಸಚಿವ ಅನಂತಕುಮಾರ್‌ ರಾಜ್ಯಕ್ಕೆ ತರಲು ತುದಿಗಾಲಲ್ಲಿ ನಿಲ್ಲುತ್ತಿದ್ದರು. ಕೇಂದ್ರದ ಯಾವುದೇ ಸಚಿವರಾಗಲಿ, ಸಂಸದರಾಗಲಿ ಆ ಉತ್ಸಾಹ ತೋರಿಸುತ್ತಿಲ್ಲ. ಕರ್ನಾಟಕದಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪಿಸುವ ಯೋಜನೆಯನ್ನು ತಂದರು ಎಂದು ಬಿಜೆಪಿ ಮೂಲಗಳು ಹೇಳಿವೆ.

ದೇಶದಲ್ಲಿ ಮೂರು ಔಷಧ ತಯಾರಿಕಾ ಪಾರ್ಕ್‌ ಮತ್ತು ನಾಲ್ಕು ವೈದ್ಯಕೀಯ ಉಪಕರಣಗಳ ತಯಾರಿಕಾ ಪಾರ್ಕ್‌ಗಳ ಆರಂಭಿಸುವ ಯೋಜನೆಯನ್ನು ಘೋಷಿಸಿದೆ. ಪ್ರತಿಯೊಂದು ಔಷಧದ ಪಾರ್ಕ್‌ಗೆ ತಲಾ ₹1,000 ಕೋಟಿ ಮತ್ತು ವೈದ್ಯಕೀಯ ಪಾರ್ಕ್‌ಗಳ ಸ್ಥಾಪನೆಗೆ ತಲಾ ₹100 ಕೋಟಿಯನ್ನು ಕೇಂದ್ರ ರಾಜ್ಯಗಳಿಗೆ ನೀಡಲಿದೆ.

ದೇಶದಲ್ಲಿ ಸಗಟು ಔಷಧ, ಫಾರ್ಮಾಸ್ಯುಟಿಕಲ್ಸ್‌ ಸಾಮಗ್ರಿ ಮತ್ತು ವೈದ್ಯಕೀಯ ಉಪಕರಣಗಳನ್ನು ತಯಾರಿಕೆಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ₹13,760 ಕೋಟಿ ರಾಷ್ಟ್ರೀಯ ಪ್ಯಾಕೇಜ್‌ ಅನ್ನು ‘ಆತ್ಮನಿರ್ಭರ್‌ ಭಾರತ್’ ಅಡಿ ಪ್ರಕಟಿಸಿದೆ. 

‘ಖಂಡಿತಾವಾಗಿಯೂ ಈ ಅವಕಾಶವನ್ನು ಬಳಸಿಕೊಳ್ಳಲಿದ್ದೇವೆ. ರಾಜ್ಯದಲ್ಲಿ ಈ ಪಾರ್ಕ್‌ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಸಂಬಂಧ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರ ಜತೆಗೆ ಮಾತುಕತೆ ನಡೆಸುತ್ತೇನೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಔಷಧ ಮತ್ತು ವೈದ್ಯಕೀಯ ಉಪಕರಣಗಳ ಪಾರ್ಕ್‌ ಅನ್ನು ರಾಜ್ಯ ಪಡೆಯುವ ವಿಶ್ವಾಸವಿದೆ. ಈ ಹಿಂದೆ ಧಾರವಾಡಕ್ಕೆ ಐಐಟಿಯನ್ನು ತಂದ ಮಾದರಿಯಲ್ಲೇ ಔಷಧ ಅಥವಾ ವೈದ್ಯಕೀಯ ಉಪಕರಣಗಳ ತಯಾರಿಕಾ ಪಾರ್ಕ್‌ ಯೋಜನೆ ರಾಜ್ಯಕ್ಕೆ ತರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಚೀನಾದಲ್ಲಿ ಕೊರೊನಾ ಸೋಂಕು ಭಾರಿ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದ್ದಂತೆ ಅಲ್ಲಿಂದ ಔಷಧಗಳು ಮತ್ತು ಫಾರ್ಮಾಸ್ಯುಟಿಕಲ್ಸ್‌ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ, ನಮ್ಮ ದೇಶದಲ್ಲೇ ತಯಾರಿಕೆ ಮಾಡಲು ಉತ್ತೇಜನ ನೀಡುವ ಸಲುವಾಗಿ ₹13,760 ಕೋಟಿ ಪ್ಯಾಕೇಜ್‌ ಪ್ರಕಟಿಸಲಾಯಿತು. ಈಗಾಗಲೇ 10 ರಾಜ್ಯಗಳು ಕೇಂದ್ರದ ಪ್ರಸ್ತಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿವೆ. ರಾಜ್ಯಗಳು ಇದಕ್ಕಾಗಿ ಭೂಮಿ ನೀಡಬೇಕಾಗುತ್ತದೆ. ಯಾವ ರಾಜ್ಯ ಭೂಮಿ, ಮೂಲಸೌಕರ್ಯ ಮತ್ತಿತರ ಸೌಲಭ್ಯಗಳನ್ನು ನೀಡುತ್ತವೆಯೋ ಅವುಗಳನ್ನು ಪರಿಗಣಿಸಲಾಗುವುದು ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.

ಪಾರ್ಕ್‌ಗಳ ಸ್ಥಾಪನೆಗೆಗಾಗಿ ಸ್ಥಳ ಹೇಗಿರಬೇಕು ಎಂಬ ಬಗ್ಗೆ ಫಾರ್ಮಾಸ್ಯುಟಿಕಲ್ಸ್‌ ಇಲಾಖೆ ಮಾರ್ಗಸೂಚಿಯೊಂದನ್ನು ಅಂತಿಮಗೊಳಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ಸದಾನಂದಗೌಡ ತಿಳಿಸಿದರು.

ಪಂಜಾಬ್‌ ಸರ್ಕಾರ ಆ ರಾಜ್ಯದಲ್ಲಿ ಔಷಧ ಮತ್ತು ವೈದ್ಯಕೀಯ ಉಪಕರಣ ಪಾರ್ಕ್‌ ಸ್ಥಾಪಿಸಲು 1,350 ಎಕರೆ ಭೂಮಿಯನ್ನು ನೀಡಲು ಮುಂದಾಗಿದೆ. ಆದರೆ ಕರ್ನಾಟಕಕ್ಕೆ ಇದರ ಮಾಹಿತಿಯೂ ಇರಲಿಲ್ಲ, ಸ್ಪರ್ಧೆಗೆ ಇಳಿಯಲು ತಯಾರಿಯನ್ನೂ ಮಾಡಿಕೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು