ಕೇರಳ ಸಾಕ್ಷರತಾ ಪರೀಕ್ಷೆ: 96 ವರ್ಷದ ಅಜ್ಜಿಗೆ 98 ಅಂಕ!

7

ಕೇರಳ ಸಾಕ್ಷರತಾ ಪರೀಕ್ಷೆ: 96 ವರ್ಷದ ಅಜ್ಜಿಗೆ 98 ಅಂಕ!

Published:
Updated:
Deccan Herald

ತಿರುವನಂತಪುರ: ಕೇರಳದ ಸಾಕ್ಷರತಾ ಅಭಿಯಾನದ ‘ಅಕ್ಷರಲಕ್ಷಂ’  ಯೋಜನೆಯಡಿಯಲ್ಲಿ ಪರೀಕ್ಷೆ ಬರೆದಿದ್ದ 96 ವರ್ಷದ ಕಾರ್ತ್ಯಾಯಿನಿ ಅಮ್ಮ ಅವರು ಅತಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

‘ಆಲಪ್ಪುಳ ಜಿಲ್ಲೆಯ ಚೆಪ್ಪಾಡ್‌ ಗ್ರಾಮದ ಕಾರ್ತ್ಯಾಯಿನಿ ಅವರು 4ನೇ ತರಗತಿ ತತ್ಸಮಾನ ಪರೀಕ್ಷೆಯಲ್ಲಿ100ರಲ್ಲಿ 98 ಅಂಕಗಳನ್ನು ಪಡೆದುಕೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸಣ್ಣ ಮಕ್ಕಳು ಕಲಿಯುತ್ತಿರುವುದನ್ನು ನೋಡುತ್ತಿದ್ದಾಗ ನನ್ನಲ್ಲೂ ಕಲಿಯಬೇಕೆಂಬ ಆಸೆ ಮೂಡಿತ್ತು. ಸಾಕ್ಷರತಾ ಅಭಿಯಾನದವರು ಕಲಿಯಲು ಬರುತ್ತೀರಾ ಎಂದು ಕೇಳಿದರು. ನಾನು ಒಪ್ಪಿಕೊಂಡೆ’ ಎಂದು ಕಾರ್ತ್ಯಾಯಿನಿ ಅಮ್ಮ ಎನ್‌ಡಿಟಿವಿಗೆ ತಿಳಿಸಿದ್ದಾರೆ.

‘ನಾನು 10ನೇ ತರಗತಿ ತತ್ಸಮಾನ ಪರೀಕ್ಷೆ ಬರೆಯಲು ಬಯಸಿದ್ದೇನೆ ಆದರೆ ಸದ್ಯ 4ನೇ ತರಗತಿ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ’ ಎಂದೂ ಆವರು ಹೇಳಿದ್ದಾರೆ.

ಮುಂದೆ ಕಂಪ್ಯೂಟರ್‌ ಕಲಿಯಲು ಬಯಸಿರುವುದಾಗಿ ಅವರು ಆಶಯ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗುರುವಾರ ಅಕ್ಷರಲಕ್ಷಂ ಪ್ರಮಾಣ ಪತ್ರ ನೀಡಿ ಕಾರ್ತ್ಯಾಯಿನಿ ಅವರನ್ನು ಗೌರವಿಸಿದ್ದಾರೆ.

‘ಸಾಕ್ಷರತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವವರಿಗೆ ಈ ಮಹಿಳೆ ಸ್ಫೂರ್ತಿಯಾಗಿದ್ದಾರೆ’ ಎಂದು ಸಾಕ್ಷರತಾ ಮಿಷನ್‌ನ ನಿರ್ದೇಶಕಿ ಪಿ.ಎಸ್. ಶ್ರೀಕಲಾ ತಿಳಿಸಿದ್ದಾರೆ.

ಮಗಳೇ ಪ್ರೇರಣೆ

ಕಾರ್ತ್ಯಾಯಿನಿ ಅವರಿಗೆ ಇಳಿವಯಸ್ಸಿನಲ್ಲಿ ಶಿಕ್ಷಣ ಪಡೆಯಲು ಪ್ರೇರಣೆಯಾಗಿದ್ದು ಅವರ 60 ವರ್ಷದ ಮಗಳು ಅಮ್ಮಿನಿ. ಇವರು ಇತ್ತೀಚೆಗೆ ಸಾಕ್ಷರತಾ ಅಭಿಯಾನಕ್ಕೆ ಸೇರಿಕೊಂಡಿದ್ದರು. ಕರ್ತ್ಯಾಯಿನಿ ಅವರೂ ಶಿಕ್ಷಣ ಕಲಿಯುವ ಹಂಬಲ ವ್ಯಕ್ತಪಡಿಸಿದಾಗ, ಇಡೀ ಕುಟುಂಬ ಅವರನ್ನು ಬೆಂಬಲಿಸಿತ್ತು.

ಮೊಮ್ಮಕ್ಕಳು, ಮರಿಮೊಕ್ಕಳು ಅವರಿಗೆ ಸಹಾಯ ಮಾಡಿದರು. ತಮ್ಮ ಮೊದಲ ಪರೀಕ್ಷೆ ಎದುರಿಸುವಾಗ ಅವರಲ್ಲಿ ಯಾವುದೇ ಉದ್ವೇಗ ಇರಲಿಲ್ಲ. ಅವರ ಸಾಧನೆ ಬಗ್ಗೆ ಕುಟುಂಬಕ್ಕೆ ಸಾಕಷ್ಟು ಹೆಮ್ಮೆ ಇದೆ. 

ದೊಡ್ಡ ಕುಟುಂಬ..

ಕಾರ್ತ್ಯಾಯಿನಿ ಅವರು ಆರು ಮಕ್ಕಳ ತಾಯಿ. ಈ ಪೈಕಿ ಬದುಕಿರುವವರು ಇಬ್ಬರು ಮಾತ್ರ. ಆರು ಮಂದಿ ಮೊಮ್ಮಕ್ಕಳು ಮತ್ತು ಏಳು ಮರಿಮೊಮ್ಮಕ್ಕಳ ದೊಡ್ಡ ಕುಟುಂಬ ಅವರದ್ದು. ಪತಿ ತೀರಿಕೊಂಡು 57 ವರ್ಷಗಳೇ ಸಂದಿವೆ. ಕುಟುಂಬ ನಿರ್ವಹಣೆಗೆ ದೇವಸ್ಥಾನಗಳಲ್ಲಿ ಕಸ ಗುಡಿಸುವಂತಹ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. 

ಗಣಿತ ಮತ್ತು ಓದುವಿಕೆಯಲ್ಲಿ ಇವರು ತಲಾ 30 ಅಂಕಗಳಿಗೆ ಅಷ್ಟೂ ಅಂಕಗಳನ್ನು ಗಳಿಸಿದ್ದಾರೆ. ಬರಹದಲ್ಲಿ 40ಕ್ಕೆ 38 ಅಂಕ ಪಡೆದಿದ್ದಾರೆ. 

ಅತಿಹೆಚ್ಚು ಅಂಕ ಪಡೆಯುವ ಮೂಲಕ ನೇರವಾಗಿ 4ನೇ ತರಗತಿ ತತ್ಸಮಾನ ಶ್ರೇಣಿಗೆ ಪ್ರವೇಶ ಪಡೆದಿದ್ದಾರೆ. ಆರು ತಿಂಗಳ ಈ ಕೋರ್ಸನ್ನು ಯಶಸ್ವಿಯಾಗಿ ಮುಗಿಸಿದರೆ 7ನೇ ತರಗತಿಗೆ ಮತ್ತು ಅಲ್ಲಿಂದ 10ನೇ ತತ್ಸಮಾನ ತರಗತಿಗೆ ಪ್ರವೇಶ ಪಡೆಯಲಿದ್ದಾರೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !