ಭಾರತೀಯರ ಬಲಿದಾನಕ್ಕೆ ಹೆಸರಾದ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡಕ್ಕೆ ನೂರು ವರ್ಷ

ಶನಿವಾರ, ಏಪ್ರಿಲ್ 20, 2019
32 °C

ಭಾರತೀಯರ ಬಲಿದಾನಕ್ಕೆ ಹೆಸರಾದ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡಕ್ಕೆ ನೂರು ವರ್ಷ

Published:
Updated:

ಅಮೃತಸರ: ಬ್ರಿಟಿಷ್‌ ಇಂಡಿಯಾ ಆಡಳಿತದ ಘೋರ ಹತ್ಯಾಕಾಂಡ ಎನಿಸಿರುವ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಕ್ಕೆ ಹೆಸರಾಗಿರುವ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡಕ್ಕೆ ಇಂದು ನೂರು ವರ್ಷಗಳಾಗಿವೆ. 

1919ರ ಏಪ್ರಿಲ್‌ 13ರಂದು ಅಮೃತಸರದ ಜಲಿಯನ್‌ ವಾಲಾ ಬಾಗ್‌ನಲ್ಲಿ ನಡೆದ ಬ್ರಿಟಿಷರ ಅಟ್ಟಹಾಸದಲ್ಲಿ ಮಡಿದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ರಾಹುಲ್‌ ಗಾಂಧಿ, ಭಾರತದಲ್ಲಿರುವ ಬ್ರಿಟನ್‌ ರಾಯಭಾರಿ ನಮನ ಸಲ್ಲಿಸಿದ್ದಾರೆ. 

ಬೃಹತ್‌ ಗೋಡೆಗಳಿಂದ ಆವೃತವಾಗಿದ್ದ ಜಲಿಯನ್‌ ವಾಲಾ ಬಾಗ್‌ನಲ್ಲಿ ಅಂದು ಸಭೆ ಸೇರಿದ್ದ ನಿರಾಯುಧ ಭಾರತೀಯ ಸ್ವಾತಂತ್ರ್ಯಹೋರಾಟಗಾರರ ಮೇಲೆ 50 ಶಸ್ತ್ರ ಸಜ್ಜಿತ ಬ್ರಿಟಿಷ್‌ ಸೈನಿಕರು ಗುಂಡಿನ ಮಳೆಗರೆದಿದ್ದರು. ಈ ಘಟನೆಯಲ್ಲಿ ಸಾವಿರಾರು ಮಂದಿ ಹುತಾತ್ಮರಾಗಿದ್ದರು. ಘೋರ ಘಟನೆ ಬ್ರಿಟಿಷ್‌ ಆಡಳಿತಕ್ಕೆ ಕಪ್ಪುಚುಕ್ಕೆಯಾಗಿಯೇ ಈವರೆಗೆ ಉಳಿದುಕೊಂಡಿದೆ. 

ಹತ್ಯಾಕಾಂಡಕ್ಕೆ ನೂರು ತುಂಬುತ್ತಿದ್ದ ಹಿನ್ನೆಲೆಯಲ್ಲೇ ವಾರದ ಹಿಂದಷ್ಟೇ ಬ್ರಿಟನ್‌ನ ಸಂಸತ್‌ನಲ್ಲಿ ಮಾತನಾಡಿದ್ದ ಅಲ್ಲಿನ ಪ್ರಧಾನಮಂತ್ರಿ ತೆರೆಸಾ ಮೇ ಅವರು, ‘ ಜಲಿಯನ್‌ ವಾಲಾ ಬಾಗ್‌ ಹತ್ಯಾಕಾಂಡವೂ ಬ್ರಿಟಿಷ್‌ ಇಂಡಿಯಾ ಆಡಳಿತಕ್ಕೆ ಅತ್ಯಂತ ನಾಚಿಕ್ಕೇಡಿನ ಕಪ್ಪು ಚುಕ್ಕೆ,’ ಎಂದು ವಿಷಾಧ ವ್ಯಕ್ತಪಡಿಸಿದ್ದರು. ಆದರೆ, ಅವರು ಅಧಿಕೃತ ಕ್ಷಮೆ ಕೋರಿರಲಿಲ್ಲ. ಈ ದುರಂತಕ್ಕೆ ಬ್ರಿಟನ್‌ ಅಧಿಕೃತ ಕ್ಷಮೆ ಕೋರಬೇಕು ಎಂದು ಅಲ್ಲಿನ ಸಂಸದರು ಒತ್ತಾಯಿಸಿದ್ದಾರೆ. 

ಇದನ್ನೂ ಓದಿ: ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ: ನೂರರ ಕರಾಳ ನೆನಪು

ಈ ನಡುವೆ ಭಾರತದಲ್ಲಿರುವ ಬ್ರಿಟಿಷ್‌ ಹೈಕಮಿಷನರ್‌ ಡೊಮಿನಿಕ್‌ ಅಸ್ಕ್ವಿತ್‌ ಶನಿವಾರ ಬೆಳಗ್ಗೆ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಪುಷ್ಪಾಂಜಲಿ ಸಮರ್ಪಿಸಿದರು. ‘ನೂರು ವರ್ಷಗಳ ಹಿಂದೆ ನಡೆದ ಈ ಘಟನೆ ಬ್ರಿಟಿಷ್‌ ಇಂಡಿಯಾದ ನಾಚಿಕ್ಕೇಡಿನ ಕೃತ್ಯ. ಅಂದಿನ ಘಟನೆಯ ಸಾವು ನೋವುಗಳಿಗೆ ನಾವು ತೀವ್ರ ದುಃಖಿತರಾಗಿದ್ದೇವೆ. ಅಭಿವೃದ್ಧಿಯ ವಿಷಯದಲ್ಲಿ ಭಾರತ ಮತ್ತು ಬ್ರಿಟನ್‌ ಈ 21ನೇ ಶತಮಾನದಲ್ಲಿ ಒಟ್ಟಿಗೆ ಹೆಜ್ಜೆ ಹಾಕುತ್ತಿರುವುದಕ್ಕೆ ನಾನು ಸಂತಸ ವ್ಯಕ್ತಪಡಿಸುತ್ತೇನೆ,’ ಎಂದು ಹೇಳಿದ್ದಾರೆ. 

ಇನ್ನು ಇಂದು ಹತ್ಯಾಕಾಂಡಕ್ಕೆ ನೂರು ವರ್ಷ ತುಂಬುತ್ತಲೇ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಟ್ವೀಟ್‌ ಮೂಲಕ ಹುತಾತ್ಮರಿಗೆ ನಮನ ಸಲ್ಲಿಸಿದ್ದಾರೆ. ‘ ಅಂದಿನ ಘೋರ ದುರಂತ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ನಾವು ಮರೆಯುವುದಿಲ್ಲ,‘ ಎಂದು ಅವರು ಹೇಳಿದ್ದಾರೆ. 

‌ಇದೇ ವೇಳೆ ಮೋದಿ ಅವರೂ ಕೂಡ ಟ್ವೀಟ್‌ ಮಾಡಿದ್ದು, ‘ನೂರು ವರ್ಷಗಳ ಹಿಂದೆ ನಡೆದ ಜಲಿಯನ್‌ ವಾಲಾ ಬಾಗ್‌ ಹತ್ಯಾಕಾಂಡದಲ್ಲಿ ಮಡಿದವರಿಗೆ ಭಾರತ ಶ್ರದ್ಧಾಂಜಲಿ ಅರ್ಪಿಸುತ್ತದೆ. ಅವರ ತ್ಯಾಗವನ್ನು ದೇಶ ಮರೆಯುವುದಿಲ್ಲ. ಅವರ ಸ್ಮರಣೆಯಲ್ಲೇ ಭಾರತ ಕಟ್ಟುವ ಕಾರ್ಯದತ್ತ ನಾವು ನಡೆಯುತ್ತೇವೆ,’ ಎಂದು ಹೇಳಿಕೊಂಡಿದ್ದಾರೆ. 

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸ್ಮಾರಕಕ್ಕೆ ಭೇಟಿ ನೀಡಿ, ನಮನ ಸಲ್ಲಿಸಿದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !