ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಸಾವಿರ ಗಡಿ ದಾಟಿದ ಕೋವಿಡ್‌–19

ಭಾನುವಾರ ಒಂದೇ ದಿನ ಸೋಂಕಿತರ ಪಟ್ಟಿಗೆ 106 ಮಂದಿ ಸೇರ್ಪಡೆ
Last Updated 29 ಮಾರ್ಚ್ 2020, 20:15 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ‘ಭಾನುವಾರ ಒಂದೇ ದಿನ ದೇಶದಲ್ಲಿ ಕೊರೊನಾ ಸೋಂಕಿತರ ಪಟ್ಟಿಗೆ 106 ಮಂದಿ ಸೇರ್ಪಡೆಯಾಗಿದ್ದಾರೆ. ಸೋಂಕು ದೃಢಪಟ್ಟವರ ಸಂಖ್ಯೆ 1024ಕ್ಕೆ ತಲುಪಿದ್ದು, ಇದುವರೆಗೆ ಒಟ್ಟು 28 ಮಂದಿ ಸಾವನ್ನಪ್ಪಿದ್ದಾರೆ’ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ತಿಳಿಸಿದೆ.

ಈವರೆಗೆ 96 ಮಂದಿ ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ್ದಾರೆ.

ವಲಸೆ ಕಾರ್ಮಿಕರು ಗುಂಪಾಗಿ ತಮ್ಮ ಊರಿಗೆ ಮರಳುವುದನ್ನು ತಡೆಯುವ ಸಲುವಾಗಿ ಜಿಲ್ಲಾ ಮತ್ತು ರಾಜ್ಯ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ತಾಕೀತು ಮಾಡಿದೆ. ಇಂಥ ಕಾರ್ಮಿಕರಿಗಾಗಿ ಆಶ್ರಯ ಕೇಂದ್ರಗಳನ್ನು ಆರಂಭಿಸಿ, ಅವರಿಗೆ ಆಹಾರ ಹಾಗೂ ಇತರ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದೆ.

ಲಾಕ್‌ಡೌನ್‌ ನಿಯಮಗಳನ್ನು ಮುರಿದು ಪ್ರಯಾಣ ಮಾಡುವವರನ್ನು ಕಡ್ಡಾಯವಾಗಿ 14 ದಿನಗಳ ಪ್ರತ್ಯೇಕ ವಾಸಕ್ಕೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸಹಾಯವಾಣಿ: ‘ಲಾಕ್‌ಡೌನ್‌ನಿಂದಾಗಿ ಮಾನಸಿಕ ಒತ್ತಡ ಅನುಭವಿಸುತ್ತಿರುವವರಿಗಾಗಿ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ಸಹಯೋಗದಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಟೋಲ್‌ ಫ್ರೀ ಸಂಖ್ಯೆ 08046110007ಗೆ ಕರೆ ಮಾಡಿದರೆ ಅಗತ್ಯ ನೆರವು ಒದಗಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಪಿಎಂ ಕೇರ್ಸ್‌ಗೆ ನೆರವಿನ ಹರಿವು: ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವಾಗಲು ಪ್ರಧಾನಮಂತ್ರಿ ನಾಗರಿಕ ಸಹಕಾರ ಮತ್ತು ತುರ್ತು ಸಂದರ್ಭ ಪರಿಹಾರ ನಿಧಿಗೆ (ಪಿಎಂ– ಕೇರ್ಸ್‌) ನೆರವು ಹರಿದುಬರುತ್ತಿದೆ.

ಭಾರತೀಯ ಸೇನೆಯ ಮೂರೂ ವಿಭಾಗಗಳ (ಭೂಸೇನೆ, ವಾಯುದಳ ಹಾಗೂ ನೌಕಾದಳ) ಸಿಬ್ಬಂದಿಯು ಒಂದು ದಿನದ ವೇತನವನ್ನು ನೀಡುವುದಾಗಿ ತಿಳಿಸಿದ್ದಾರೆ. ಆ ಮೂಲಕ ಸುಮಾರು ₹ 500 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ರೈಲ್ವೆ ಸಚಿವಾಲಯವು ₹ 151 ಕೋಟಿ ನೀಡಲಿದೆ ಎಂದುಕೇಂದ್ರರೈಲ್ವೆ ಸಚಿವಪೀಯೂಷ್‌ ಗೋಯಲ್‌ ತಿಳಿಸಿದ್ದಾರೆ.

ಸಿಬಿಐ ನೆರವು: ಪಿಎಂ– ಕೇರ್ಸ್‌ಗೆ ದೇಶದ ಪ್ರಮುಖ ತನಿಖಾ ಸಂಸ್ಥೆಯಾಗಿರುವ ಸಿಬಿಐನ ಸಿಬ್ಬಂದಿ ತಮ್ಮ ಒಂದು ದಿನದ ವೇತನ ನೀಡಲು ನಿರ್ಧರಿಸಿದ್ದಾರೆ. ಕೇಂದ್ರ ತನಿಖಾ ದಳ(ಸಿಬಿಐ)ದಲ್ಲಿ ಸುಮಾರು 6 ಸಾವಿರ ಸಿಬ್ಬಂದಿ ಇದ್ದಾರೆ.

ಜೆಎಸ್‌ಡಬ್ಲ್ಯೂ ದೇಣಿಗೆ (ಹೊಸಪೇಟೆ): ‘ಜೆ.ಎಸ್‌.ಡಬ್ಲ್ಯೂ. ಸಮೂಹ ಸಂಸ್ಥೆಯಿಂದ ‘ಪಿ.ಎಂ. ಕೇರ್ಸ್‌’ ನಿಧಿಗೆ ₹100 ಕೋಟಿ ದೇಣಿಗೆ ನೀಡಲು ತೀರ್ಮಾನಿಸಲಾಗಿದೆ’ ಎಂದು ಸಂಸ್ಥೆ ಅಧ್ಯಕ್ಷ ಸಜ್ಜನ್‌ ಜಿಂದಾಲ್‌ ತಿಳಿಸಿದ್ದಾರೆ.

‘ಸಂಸ್ಥೆಯ ಎಲ್ಲಾ ಉದ್ಯೋಗಿಗಳು ಒಂದು ದಿನದ ವೇತನ ನೀಡಲು ಮುಂದೆ ಬಂದಿದ್ದಾರೆ. ಸಂಸ್ಥೆಯ ಸುತ್ತಮುತ್ತ ವಾಸಿಸುವ ಸಮುದಾಯದವರಿಗೆ ಆಹಾರ ಪೂರೈಸಲಾಗುವುದು. ಸಮುದಾಯ ಆಸ್ಪತ್ರೆಗಳ ಮೇಲಿನ ಒತ್ತಡ ತಗ್ಗಿಸಲು ಸಂಸ್ಥೆಯ ಜಾಗದಲ್ಲಿ ಅಧಿಕ ವೈದ್ಯಕೀಯ ಸೌಲಭ್ಯ ಒದಗಿಸಲಾಗುವುದು. ಈ ಬಿಕ್ಕಟ್ಟಿನಿಂದ ಹೊರಬರುವವರೆಗೆ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ಅದಾನಿ ಫೌಂಡೇಷನ್: ಅದಾನಿ ಫೌಂಡೇಷನ್‌ ₹ 100 ಕೋಟಿ ನೀಡಿದೆ.

ನರೇಂದ್ರ ಮೋದಿ

ಕ್ಷಮೆ ಕೇಳಿದ ಪ್ರಧಾನಿ‌
ನವದೆಹಲಿ (ಪಿಟಿಐ): ದೇಶದಾದ್ಯಂತ ಲಾಕ್‌ಡೌನ್‌ ಹೇರಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜನರ ಕ್ಷಮೆ ಯಾಚಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಆಕಾಶವಾಣಿಯ ‘ಮನದ ಮಾತು’ ಕಾರ್ಯಕ್ರಮ

ದಲ್ಲಿ ಉಲ್ಲೇಖಿಸಿದ ಅವರು, ‘ಸೋಂಕು ತಡೆಯಲು ಈ ಕ್ರಮ ಅನಿವಾರ್ಯವಾಗಿತ್ತು’ ಎಂದಿದ್ದಾರೆ.

‘ನಮ್ಮನ್ನು ಕಷ್ಟಕ್ಕೆ ಸಿಲುಕಿಸಿದ ಇವರೆಂಥ ಪ್ರಧಾನಿ ಎಂದು ನನ್ನ ಬಡ ಸಹೋದರರು ಶಪಿಸುತ್ತಿರಬಹುದು. ಲಾಕ್‌ಡೌನ್‌ ಹೇರಿದ್ದಕ್ಕಾಗಿ ನಾನು ವಿಶೇಷವಾಗಿ ಇಂಥವರ ಕ್ಷಮೆ ಯಾಚಿಸುತ್ತೇನೆ. ನಿಮಗೆ ತುಂಬಾ

ಸಮಸ್ಯೆಯಾಗುತ್ತದೆ ಎಂಬುದನ್ನು ಬಲ್ಲೆ. ಆದರೆ, ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಬೇರೆ ದಾರಿಯೇ ಇಲ್ಲದಾಗಿದೆ. ಇದು ಜೀವನ್ಮರಣದ ಪ್ರಶ್ನೆ, ಜಗತ್ತಿನ ಇತರ ರಾಷ್ಟ್ರಗಳನ್ನು ನೋಡಿದಾಗ ಲಾಕ್‌ಡೌನ್‌ ಅಲ್ಲದೆ ಬೇರೆ ದಾರಿಯೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ವೈರಸ್‌ ಮಾನವಕುಲಕ್ಕೇ ಮಾರಕವಾಗಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಅದರ ನಾಶಕ್ಕೆ ಶ್ರಮಿಸಬೇಕು. ಈ ಯುದ್ಧವನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎಂದರು.

ಕೊರೊನಾ ಸೋಂಕು ಇರಬಹುದೆಂಬ ಶಂಕೆಯಿಂದ ಮನೆಯಲ್ಲೇ ಪ್ರತ್ಯೇಕವಾಸದಲ್ಲಿ ಇಟ್ಟಿರುವವರನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿರುವ ಬಗ್ಗೆ ಮೋದಿ ಅವರು ಬೇಸರ ವ್ಯಕ್ತಪಡಿಸಿದರು.

ನಿತ್ಯ 200 ಜನರೊಂದಿಗೆ ಸಂವಾದ
‘ಕೊರೊನಾ ವೈರಸ್‌ ವಿರುದ್ಧದ ಹೋರಾಟದ ಬಗ್ಗೆ ನೇರ ಮಾಹಿತಿ ಪಡೆಯುವ ಉದ್ದೇಶದಿಂದ ಮೋದಿ ಪ್ರತಿನಿತ್ಯ 200ಕ್ಕೂ ಹೆಚ್ಚು ಜನರ ಜೊತೆಗೆ ನೇರ ಸಂವಾದ ನಡೆಸುತ್ತಿದ್ದಾರೆ’ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.

‘ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ಆರೋಗ್ಯ ಸಚಿವರ ಜತೆ ನೇರವಾಗಿ ದೂರವಾಣಿ ಸಂಭಾಷಣೆ ನಡೆಸುತ್ತಾರೆ. ಇದಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ಗಳು, ಆರೋಗ್ಯಸೇವಾ ಕ್ಷೇತ್ರದ ಇತರ ಸಿಬ್ಬಂದಿಯ ಜತೆಗೂ ಮೋದಿ ಸಂಭಾಷಣೆ ನಡೆಸಿ ಅವರಲ್ಲಿ ಸ್ಫೂರ್ತಿ ತುಂಬುತ್ತಿದ್ದಾರೆ. ಸಮಾಜದ ಬೇರೆಬೇರೆ ವರ್ಗದ ಜನರ ಜತೆಗೆ ವಿಡಿಯೊ ಸಂವಾದವನ್ನೂ ನಡೆಸುತ್ತಾರೆ’ ಎಂದು ಸಚಿವಾಲಯ ಹೇಳಿದೆ.

ಸೋಂಕಿತರ ಆರೋಗ್ಯ ಸ್ಥಿತಿಯ ಮಾಹಿತಿ ಪಡೆಯಲು ಕೆಲವು ಸೋಂಕಿತರು ಮತ್ತು ಸೋಂಕಿಗೊಳಗಾಗಿ ಚೇತರಿಸಿಕೊಂಡವರ ಜತೆಗೂ ಪ್ರಧಾನಿ ದೂರವಾಣಿ ಸಂಭಾಷಣೆ ನಡೆಸುತ್ತಾರೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT