ಶುಕ್ರವಾರ, ಮೇ 29, 2020
27 °C

ಪ್ರತ್ಯೇಕ ಅಪಘಾತ: 16 ವಲಸೆ ಕಾರ್ಮಿಕರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಮುಂಬೈ/ಭಾಗಲ್ಪುರ, ಬಿಹಾರ/ಬಂಡಾ, ಉತ್ತರ ಪ್ರದೇಶ: ಮಹಾರಾಷ್ಡ್ರ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮಂಗಳವಾರ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 16 ವಲಸೆ ಕಾರ್ಮಿಕರು ಸೇರಿ 17 ಜನರು ಮೃತಪಟ್ಟು, 39 ಜನರು ಗಾಯಗೊಂಡಿದ್ದಾರೆ. 

ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ 9 ಕಾರ್ಮಿಕರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮಾಹುವಾ ಬಳಿಯ ಅಪಘಾತದಲ್ಲಿ ಮೂವರು ಮೃತಪಟ್ಟು, 17 ಜನರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಯವತ್ಮಾಳ್‌ ಜಿಲ್ಲೆಯ ಕೊಲ್ವಾನ್‌ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಹಾಗೂ ಬಸ್‌ ಚಾಲಕರೊಬ್ಬರು ಮೃತಪಟ್ಟು, 22 ಜನರು ಗಾಯಗೊಂಡಿದ್ದಾರೆ. 

9 ಜನ ವಲಸೆ ಕಾರ್ಮಿಕರು ಟ್ರಕ್‌ವೊಂದರಲ್ಲಿ ಪ್ರಯಾಣಿಸುತ್ತಿದ್ದರು. ಎದುರಿನಿಂದ ಬಂದ ಬಸ್‌‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಟ್ರಕ್‌ ಉರುಳಿ ಬಿದ್ದು, 9 ಜನ ಕಾರ್ಮಿಕರೂ ಮೃತಪಟ್ಟಿದ್ದಾರೆ. ಈ ಅಪಘಾತ ಅಂಭೋ ಚೌಕ್‌ ಸಮೀಪ ರಾಷ್ಟ್ರೀಯ ಹೆದ್ದಾರಿ–31ರಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ ಎಂದು ನೌಗಾಛಿಯಾ ಎಸ್ಪಿ ನಿಧಿ ರಾಣಿ ತಿಳಿಸಿದ್ದಾರೆ. 

 

ಕರ್ನಾಟಕದಿಂದ ದರ್ಭಾಂಗಕ್ಕೆ ತೆರಳಿದ್ದ 35 ಕಾರ್ಮಿಕರು ಈ ಬಸ್‌ನಲ್ಲಿದ್ದರು. ಬಸ್‌ ಬಂಕಾ ಎಂಬಲ್ಲಿಗೆ ಹೊರಟಿತ್ತು. ಈ ಕಾರ್ಮಿಕರಿಗೂ ಗಾಯಗಳಾಗಿವೆ.

ಆರು ದಿನದ ಹಿಂದೆ ಕೋಲ್ಕತ್ತದಿಂದ ಸೈಕಲ್‌ನಲ್ಲಿ ಬರುತ್ತಿದ್ದ ಈ ನತದೃಷ್ಟ ಕಾರ್ಮಿಕರು, ಮಾರ್ಗ ಮಧ್ಯೆ ಟ್ರಕ್‌ ಮೂಲಕ ತಮ್ಮ ಪ್ರಯಾಣ ಮುಂದುವರಿಸಿದ್ದರು ಎಂದೂ ಅವರು ತಿಳಿಸಿದ್ದಾರೆ. ಈ ಕಾರ್ಮಿಕರು ಪೂರ್ವ ಮತ್ತು ಪಶ್ಚಿಮ ಚಂಪಾರಣ್‌ ಜಿಲ್ಲೆಗೆ ಸೇರಿದವರಾಗಿದ್ದಾರೆ. 

ದೆಹಲಿಯಿಂದ ನಡೆದು ಹೋಗುತ್ತಿದ್ದ ಕಾರ್ಮಿಕರು ಉತ್ತರ ಪ್ರದೇಶ–ಮಧ್ಯಪ್ರದೇಶ ಗಡಿಯಲ್ಲಿರುವ ಹರ್ಪಾಲ್‌ಪುರ ಎಂಬಲ್ಲಿ ಟ್ರಕ್‌ ಏರಿದ್ದಾರೆ. ಮಹೋಬಾ ಬಳಿ ಝಾನ್ಸಿ–ಮಿರ್ಜಾಪುರ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಟೈರ್‌ ಸ್ಫೋಟಗೊಂಡು, ಬಸ್‌ ಉರುಳಿ ಬಿದ್ದ ಪರಿಣಾಮ ಕಾರ್ಮಿಕರ ಪೈಕಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು, 17 ಜನರು ಗಾಯಗೊಂಡಿದ್ದಾರೆ ಎಂದು ಮಹೋಬಾ ಎಸ್ಪಿ ಮಣಿಲಾಲ್‌ ಪಾಟಿದಾರ್ ತಿಳಿಸಿದ್ದಾರೆ. 

ಮಹಾರಾಷ್ಟ್ರದ ಯವತ್ಮಾಳ್‌ ಜಿಲ್ಲೆಯ ಕೋಲ್ವಾನ್‌ ಗ್ರಾಮದ ಬಳಿ ಕಾರ್ಮಿಕರಿದ್ದ ಬಸ್‌ನ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ, ನಿಂತಿದ್ದ ಲಾರಿಯೊಂದಕ್ಕೆ ಬಸ್‌ ಡಿಕ್ಕಿ ಹೊಡೆದಿದೆ. ಬಸ್‌ ಚಾಲಕ ಹಾಗೂ ಮೂವರು ಕಾರ್ಮಿಕರು ಸಾವನ್ನಪಿದರು. ಗಾಯಗೊಂಡಿದ್ದ 22 ಜನರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ನೂರುಲ್‌ ಹಸನ್‌ ತಿಳಿಸಿದ್ದಾರೆ.

ಈ ನತದೃಷ್ಟ ಬಸ್‌ ಸೊಲ್ಲಾಪುರದಿಂದ ನಾಗಪುರಕ್ಕೆ ಹೊರಟಿತ್ತು. ನಾಗಪುರ ರೈಲು ನಿಲ್ದಾಣದಿಂದ ಶ್ರಮಿಕ ರೈಲಿನ ಮೂಲಕ ಈ ಕಾರ್ಮಿಕರು ತಮ್ಮ ತವರು ರಾಜ್ಯ ಜಾರ್ಖಂಡ್‌ಗೆ ಹೋಗುವವರಿದ್ದರು.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು