ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇವಲ 19 ದಿನಗಳಲ್ಲಿ ಹೊಳ‍ಪು ಕಳೆದುಕೊಂಡ ಎಎಪಿ?

ಅರವಿಂದ ಕೇಜ್ರಿವಾಲ್‌ ನಿಲುವಿನ ಬಗ್ಗೆ ವಿರೋಧ ಪಕ್ಷಗಳಲ್ಲಿ ಅಸಮಾಧಾನ
Last Updated 1 ಮಾರ್ಚ್ 2020, 20:26 IST
ಅಕ್ಷರ ಗಾತ್ರ

ನವದೆಹಲಿ: ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ದೆಹಲಿಯಲ್ಲಿ ಮೂರನೇ ಬಾರಿ ಸರ್ಕಾರ ರಚಿಸಿರುವ ಎಎಪಿಯ ಹೊಳಪು ಮಾಸುತ್ತಿದೆ ಎಂಬ ಬೇಸರ ಪಕ್ಷದ ಬೆಂಬಲಿಗರಲ್ಲಿ ಹುಟ್ಟಿಕೊಂಡಿದೆ.ಒಂಬತ್ತು ತಿಂಗಳ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ಎಎಪಿ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿತ್ತು. ಬಿಜೆಪಿಗೆ ಭಾರಿ ಸೋಲುಣಿಸಿದ್ದ ಎಎಪಿಯ ಈ ಹೊಳಪು, ಚುನಾವಣಾ ಫಲಿತಾಂಶ ಪ್ರಕಟವಾದ 19 ದಿನಗಳಲ್ಲೇ ಮಸುಕಾಗಿದೆ.

ಚುನಾವಣೆ ವೇಳೆ ಶಾಹೀನ್ ಬಾಗ್ ಪ್ರತಿಭಟನೆ ಬಗ್ಗೆ ಎಎಪಿ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ಎಎಪಿಯ ಮುಖಂಡರಾಗಲೀ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗಲಿ ಪ್ರತಿಭಟನಾ ಸ್ಥಳದಲ್ಲಿ ಕಾಣಿಸಿಕೊಂಡಿರಲಿಲ್ಲ.

‘ಧರ್ಮದ ಆಧಾರದಲ್ಲಿ ಚುನಾವಣೆ ಗೆಲ್ಲುವುದು ಬಿಜೆಪಿಗೆ ಸುಲಭ, ಎಎಪಿಗೆ ಇದು ಸಾಧ್ಯವಿಲ್ಲ. ಹೀಗಾಗಿ ಕೇಜ್ರಿವಾಲ್ ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ, ಮೃದು ಹಿಂದುತ್ವದ ಮೊರೆ ಹೋಗಿದ್ದಾರೆ ಎಂದುಕೊಂಡಿದ್ದೆವು. ಆದರೆ, ಈಗ ಅವರ ನಿಲುವುಗಳ ಬಗ್ಗೆಯೇ ಪ್ರಶ್ನೆ ಏಳುತ್ತಿದೆ’ ಎಂದು ಎಎಪಿಯ ಬೆಂಬಲಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಅರವಿಂದ ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಎದುರಾಗಿ ನಿಲ್ಲಬಲ್ಲರು ಎಂಬುದು ಎಎಪಿಯ ಹಲವು ಬೆಂಬಲಿಗರ ಕನಸಾಗಿತ್ತು. ಆದರೆ, ಈಗ ಅದೇ ಬೆಂಬಲಿಗರು ಎಎಪಿಯನ್ನು ಬಿಜೆಪಿಯ ‘ಬಿ–ಟೀಮ್‌’ ಎಂದು ಕರೆಯಲೂ ಹಿಂಜರಿಯುತ್ತಿಲ್ಲ. ಶಾಹೀನ್ ಬಾಗ್ ಬಗೆಗಿನ ನಿಲುವು, ಮೃದು ಹಿಂದುತ್ವದೆಡೆಗಿನ ನಡೆ ಮತ್ತು ದೆಹಲಿ ಹಿಂಸಾಚಾರದ ನಿರ್ವಹಣೆ ರೀತಿ,ಎಎಪಿ ಬಗೆಗಿನ ಜನರ ಅನಿಸಿಕೆಯನ್ನು ಬದಲಿಸಿದೆ.

ಇದು ಎಎಪಿ ಬಗೆಗೆ ಇದ್ದ ನಿರೀಕ್ಷೆ ಯನ್ನು ಕುಗ್ಗಿಸಿದೆ. ಸಿಪಿಐ ಮುಖಂಡ ಮತ್ತು ಜವಾಹರ್‌ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿರುದ್ಧ ವಿಚಾರಣೆ ನಡೆಸಲು ಎಎಪಿ ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ಎಎಪಿ ತನ್ನ ಶವಪೆಟ್ಟಿಗೆಗೆ ತಾನೇ ಮೊಳೆ ಹೊಡೆದುಕೊಂಡಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಕನ್ಹಯ್ಯಾ ವಿರುದ್ಧದ ಈ ಪ್ರಕರಣ ದಾಖಲಾಗಿ ನಾಲ್ಕು ವರ್ಷಗಳೇ ಕಳೆದಿವೆ. ಕನ್ಹಯ್ಯಾ ವಿರುದ್ಧ ವಿಚಾರಣೆ ನಡೆಸಲು ದೆಹಲಿ ಪೊಲೀಸರು ಅನುಮತಿ ಕೇಳಿ ಒಂದು ವರ್ಷ ಸರಿದಿದೆ. ದೆಹಲಿ ಮ್ಯಾಜಿಸ್ಟ್ರೇಟ್‌ ಸಹ ಪ್ರಕರಣದಿಂದ ಕನ್ಹಯ್ಯಾ ಹೆಸರು ಕೈಬಿಟ್ಟಿದ್ದಾರೆ. ಸ್ವತಃ ಅರವಿಂದ ಕೇಜ್ರಿವಾಲ್ 2016ರಲ್ಲಿ (ದೇಶದ್ರೋಹ ಪ್ರಕರಣ ದಾಖಲಾದಾಗ) ಕನ್ಹಯ್ಯಾ ಪರವಾಗಿ ಟ್ವೀಟ್ ಮಾಡಿದ್ದರು. ಆದರೆ, ಕೇಜ್ರಿವಾಲ್ ಅವರ ಸರ್ಕಾರವೇ ಕನ್ಹಯ್ಯಾ ವಿರುದ್ಧ ವಿಚಾರಣೆಗೆ ಅನು
ಮತಿ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.

ಈ ನಡೆಯನ್ನು ಎಲ್ಲಾ ಪ್ರಮುಖ ವಿರೋಧ ಪಕ್ಷಗಳೂ ಖಂಡಿಸಿವೆ. ಜೆಎನ್‌ಯು ವಿದ್ಯಾರ್ಥಿ ಸಂಘಟನೆಯೂ ಖಂಡಿಸಿದೆ. ಆದರೆ, ಈ ಖಂಡನೆಗೆ ಎಎಪಿಯ ಯಾವುದೇ ಮುಖಂಡರು ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.

ಬಿಜೆಪಿ ವಿರುದ್ಧ ಮೈತ್ರಿಕೂಟ ರಚಿಸುಕೊಳ್ಳುವಲ್ಲಿ ಎಎಪಿ ನಂಬಿಕಾರ್ಹ ಮಿತ್ರಪಕ್ಷವಾಗಬಲ್ಲದು ಎಂಬುದು ಹಲವು ವಿರೋಧ ಪಕ್ಷಗಳ ನಿರೀಕ್ಷೆಯಾಗಿತ್ತು. ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ತೆಗೆದ ಕ್ರಮವನ್ನು, ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಎಎಪಿ ಬೆಂಬಲಿಸಿತು. ಇವೆರಡನ್ನೂ ವಿರೋಧಿಸಿದ್ದ ವಿಪಕ್ಷಗಳ ಜತೆ ಎಎಪಿ ಕಾಣಿಸಿಕೊಳ್ಳಲೇ ಇಲ್ಲ. ಇದು ಇತರ ವಿರೋಧ ಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ, ಚುನಾವಣೆ ಉದ್ದೇಶದಿಂದ ಕೇಜ್ರಿವಾಲ್ ಹೀಗೆ ಮಾಡುತ್ತಿದ್ದಾರೆ ಎಂಬ ಮಾತೂ ಕೇಳಿಬಂದಿತ್ತು.

ತಮ್ಮ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಿಂದ ಇತರ ವಿರೋಧ ಪಕ್ಷಗಳ ನಾಯಕರನ್ನು ಕೇಜ್ರಿವಾಲ್ ದೂರವಿಟ್ಟರು. ದೆಹಲಿಯ ನೂತನ ಸರ್ಕಾರದ ನಿಲುವು ಮತ್ತು ಕ್ರಮಗಳು ವಿಪಕ್ಷಗಳ ಈ ಅಸಮಾಧಾನವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.ಕೇಜ್ರಿವಾಲ್ ಅವರ ಮೃದು ಹಿಂದುತ್ವ ಮತ್ತು ಹನುಮಾನ್ ಚಾಳೀಸ ಪಠಣಕ್ಕೆ ಹೊಸ ಅರ್ಥ ಕಟ್ಟಲಾಗುತ್ತಿದೆ.

ಜೆಎನ್‌ಯು ವಿದ್ಯಾರ್ಥಿ ಸಂಘಟನೆಯು ಎಎಪಿಯ ಈ ಎಲ್ಲಾ ನಡೆಯನ್ನು ಬಹಳ ಕಟುವಾಗಿ ಖಂಡಿಸಿದೆ. ‘ಅಲ್ಪಾವಧಿಯ ರಾಜಕೀಯ ಲಾಭಕ್ಕಾಗಿ ಹೀಗೆಲ್ಲಾ ಮಾಡುವುದು ನಾಚಿಕೆಗೇಡು. ರಾಜಕೀಯ ಹೇಡಿತನ ಬಹಳ ದಿನ ಫಲಕೊಡುವುದಿಲ್ಲ’ ಎಂದು ಸಂಘಟನೆಯು ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT