ಶನಿವಾರ, ಜನವರಿ 25, 2020
22 °C

ಸೇನಾ ಅಧಿಕಾರಿಗಳ ಸೋಗಿನಲ್ಲಿ ಬಂದು ಯೋಧರ ರೈಫಲ್ಸ್‌ ಕದ್ದ ಕಳ್ಳರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್‌: ಅಪರಿಚಿತರಿಬ್ಬರು ಸೇನಾ ಅಧಿಕಾರಿಗಳ ಸೋಗಿನಲ್ಲಿ ಬಂದು ಯೋಧರ ಬಳಿ ಇದ್ದ ಎರಡು ರೈಫಲ್ಸ್‌ ಮತ್ತು ಕಾಟ್ರಿಡ್ಜ್‌ಗಳನ್ನು ಕದ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 200 ಕಿ.ಮೀಟರ್ ದೂರದಲ್ಲಿರುವ ಪಚ್ಮರಿ ಪಟ್ಟಣದಲ್ಲಿರುವ ಸೇನಾ ಕಂಟೋನ್ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ತರಬೇತಿ ಶಾಲೆಗೆ ಸೇನಾ ಅಧಿಕಾರಿಗಳ ಸೋಗಿನಲ್ಲಿ ಬಂದ ಇಬ್ಬರು ತರಬೇತಿ ನಿರತ ಯೋಧರ ಬಳಿ ಇದ್ದ ಐಎಎನ್‌ಎಸ್‌ ರೈಫಲ್ಸ್‌ ಹಾಗೂ ಜೀವಂತ ಕಾಟ್ರಿಡ್ಜ್‌ಗಳನ್ನು ಪಡೆದು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. 

ಇಲ್ಲಿನ ಸ್ಥಳೀಯ ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದ ಆರೋಪಿಗಳು ರೈಫಲ್ಸ್‌ಗಳನ್ನು ಕದ್ದು ಅದೇ ಟ್ಯಾಕ್ಸಿಯಲ್ಲಿ ಮರಳಿ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾರೆ. ಟ್ಯಾಕ್ಸಿ ಚಾಲಕನನ್ನು ಬಂಧಿಸಿರುವ ಪೊಲೀಸರು ಆರೋಪಿಗಳ ಕುರಿತಂತೆ ಮಾಹಿತಿ ಪಡೆಯುತ್ತಿದ್ದಾರೆ. 

ಆರೋಪಿಗಳ ಗುರುತು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದ್ದು, ಮಧ್ಯಪ್ರದೇಶ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳ ರೈಲು ನಿಲ್ದಾಣಗಳಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿದೆ. ಇದು ಭಯೋತ್ಪಾದಕರ ಕೃತ್ಯ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಆರೋಪಿಗಳು ಪಂಜಾಬಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಒಬ್ಬ ವ್ಯಕ್ತಿ ಗಡ್ಡ ಬಿಟ್ಟಿದ್ದ ಎಂದು ಟ್ಯಾಕ್ಸಿ ಚಾಲಕ ಮಾಹಿತಿ ನೀಡಿದ್ದಾನೆ. ಅವರ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದ್ದು ಆ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು