ಶಬರಿಮಲೆ ದೇಗುಲ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಮಹಿಳೆಯರು

7
50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಿಂದು, ಕನಕದುರ್ಗಾರಿಂದ ದೇಗುಲ ಪ್ರವೇಶ

ಶಬರಿಮಲೆ ದೇಗುಲ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಮಹಿಳೆಯರು

Published:
Updated:

ತಿರುವನಂತಪುರ: 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಮಹಿಳೆಯರು ಬುಧವಾರ ನಸುಕಿನಲ್ಲಿ ಶಬರಿಮಲೆ ದೇಗುಲ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿವಾಹಿನಿಗಳು ವರದಿ ಮಾಡಿವೆ.

ಸುಮಾರು 40 ವರ್ಷ ವಯಸ್ಸಿನ ಬಿಂದು ಮತ್ತು ಕನಕದುರ್ಗಾ ಎಂಬುವವರು ಮುಂಜಾವ ದೇಗುಲ ಪ್ರವೇಶಿಸಿದ್ದಾರೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ ಎನ್ನಲಾಗಿದೆ.

ಇದನ್ನೂ ಓದಿ: ‘ಶಬರಿಮಲೆ ದೇಗುಲಕ್ಕೆ ಮಹಿಳೆಯರು ಹೋಗಬಹುದು’ ಸುಪ್ರೀಂಕೋರ್ಟ್

ಸೋಮವಾರ ಮಧ್ಯರಾತ್ರಿ ಶಬರಿಮಲೆ ಏರಲು ಆರಂಭಿಸಿದ್ದ ಭಕ್ತೆಯರು ನಸುಕಿನ ಜಾವ 3.45ಕ್ಕೆ ದೇಗುಲ ತಲುಪಿದ್ದು, ಅಯ್ಯಪ್ಪನಿಗೆ ಪ್ರಾರ್ಥನೆ ಸಲ್ಲಿಸಿ ವಾಪಸಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಮಫ್ತಿಯಲ್ಲಿದ್ದ ಹಾಗೂ ಸಮವಸ್ತ್ರದಲ್ಲಿದ್ದ ಪೊಲೀಸರ ತಂಡ ಮಹಿಳೆಯರಿಗೆ ಭದ್ರತೆ ಒದಗಿಸಿದೆ.

ಕನಕದುರ್ಗಾ ಮತ್ತು ಇತರರ ಜತೆಗೂಡಿ ಶಬರಿಮಲೆ ದೇಗುಲಕ್ಕೆ ತೆರಳಿ ದರ್ಶನ ಪಡೆದಿದ್ದೇವೆ ಎಂದು ಬಿಂದು ಅವರು ಏಷ್ಯಾನೆಟ್ ಸುದ್ದಿವಾಹಿನಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಎಂದು ದಿ ನ್ಯೂಸ್‌ ಮಿನಿಟ್ ವರದಿ ಮಾಡಿದೆ. ಪಂಪಾ ತಲುಪಿದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಭಕ್ತರಿಂದ ಯಾವುದೇ ರೀತಿಯ ಪ್ರತಿಭಟನೆ ವ್ಯಕ್ತವಾಗಲಿಲ್ಲ ಎಂದೂ ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಆದಾಗ್ಯೂ, ಮಹಿಳೆಯರು ಶಬರಿಮಲೆ ಪ್ರವೇಶಿಸಿದ ಬಗ್ಗೆ ಕೇರಳ ಸರ್ಕಾರವಾಗಲಿ, ಪೊಲೀಸರಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ.

ಶಬರಿಮಲೆ ದೇಗುಲ ಪ್ರವೇಶಿಸಲು ಡಿಸೆಂಬರ್‌ ಕೊನೆಯ ವಾರ ಇಬ್ಬರು ಮಹಿಳೆಯರು ಪ್ರಯತ್ನಿಸಿದ್ದರು. ಆದರೆ, ತೀವ್ರ ಪ್ರತಿಭಟನೆ ಎದುರಾಗಿದ್ದರಿಂದ ಅವರು ಅರ್ಧದಲ್ಲೇ ವಾಪಸಾಗಿದ್ದರು.

ಇದನ್ನೂ ಓದಿ: ಶಬರಿಮಲೆ ಪ್ರವೇಶಕ್ಕೆ ತಡೆ: ಅಯ್ಯಪ್ಪ ದರ್ಶನ ಪಡೆಯದೆ ಹಿಂತಿರುಗಿದ 'ಮನಿತಿ' ತಂಡ

ಋತುಮತಿಯಾಗುವ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ಇದ್ದ ಶತಮಾನಗಳ ನಿರ್ಬಂಧವನ್ನು ಇತ್ತೀಚೆಗೆ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಎಲ್ಲ ವಯಸ್ಸಿನ ಸ್ತ್ರೀಯರೂ ದೇಗುಲ ಪ್ರವೇಶಿಸಬಹುದು ಎಂದು ಆದೇಶಿಸಿತ್ತು. ಇದರ ವಿರುದ್ಧ ಹಲವು ಸಂಘಟನೆಗಳು ಸುಪ್ರೀಂ ಕೋರ್ಟ್‌ಗೆ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿದ್ದವು. ಈ ಮಧ್ಯೆ, ತೀರ್ಪಿನ ವಿರುದ್ಧ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸದ ಕೇರಳ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಿತ್ತು.

ಇದನ್ನೂ ಓದಿ: ಶಬರಿಮಲೆ ವಿವಾದ: ತೀವ್ರಗೊಂಡ ಪ್ರತಿಭಟನೆ

ಸ್ತ್ರೀಯರ ಪ್ರವೇಶ ವಿರೋಧಿಸಿ ಶಬರಿಮಲೆ, ಪಂಪಾ, ನಿಲಕ್ಕಲ್ ಮತ್ತಿತರೆಡೆಗಳಲ್ಲಿ ನಡೆದ ಪ್ರತಿಭಟನೆಗಳು ಹಿಂಸಾರೂಪ ತಾಳಿದ್ದವು. ಘಟನೆಗೆ ಸಂಬಂಧಿಸಿ ನೂರಾರು ಜನರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ತಡೆ ಪ್ರಕರಣ: 200 ಮಂದಿ ವಿರುದ್ಧ ಕೇಸು ದಾಖಲು

ಮತ್ತೊಂದೆಡೆ, ಸುಪ್ರೀಂ ಕೋರ್ಟ್‌ ತೀರ್ಪಿನ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿರುವುದಕ್ಕೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಅಡ್ಡಿ ಮಾಡುತ್ತಿರುವುದನ್ನು ಖಂಡಿಸಿ ಕೇರಳದ ಲಕ್ಷಾಂತರ ಮಹಿಳೆಯರು 620 ಕಿ.ಮೀ ಉದ್ದದ ‘ಮಹಿಳೆಯರ ಗೋಡೆ’ ನಿರ್ಮಿಸುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. 

ಇದನ್ನೂ ಓದಿ: ಕೇರಳದಲ್ಲಿ 620 ಕಿ.ಮೀ ‘ಮಹಿಳಾ ಗೋಡೆ’

ಇನ್ನಷ್ಟು...

ತ್ರಿವಳಿ ತಲಾಖ್ ನಿಷೇಧ ಲಿಂಗ ಸಮಾನತೆ, ಶಬರಿಮಲೆ ಸಂಪ್ರದಾಯದ ವಿಚಾರ: ಮೋದಿ

ವನಿತಾ ಮದಿಲ್: ಕಾಸರಗೋಡಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಾಟ

ಶಬರಿಮಲೆಗೆ ತೆರಳಲು ಮುಂದಾದ ಹಿಂದೂ ಐಕ್ಯ ವೇದಿಕೆ ನಾಯಕಿ ಬಂಧನ: ಪ್ರತಿಭಟನೆ

ಶಬರಿಮಲೆ: ಎಚ್ಚರವಿರಲು ಕರ್ನಾಟಕಕ್ಕೂ ಸೂಚನೆ

ಶಬರಿಮಲೆ ಪ್ರತಿಭಟನೆ ವೇಳೆ ಲಾಠಿಚಾರ್ಜ್‌ನಿಂದ ಭಕ್ತ ಮೃತಪಟ್ಟ ಸುದ್ದಿ ನಿಜವೇ?

ಬರಹ ಇಷ್ಟವಾಯಿತೆ?

 • 21

  Happy
 • 1

  Amused
 • 0

  Sad
 • 0

  Frustrated
 • 14

  Angry

Comments:

0 comments

Write the first review for this !