ಮಂಗಳವಾರ, ಆಗಸ್ಟ್ 20, 2019
24 °C
ಟೆಕ್ಸಾಸ್, ಡೇಟನ್‌ ನಗರಗಳಲ್ಲಿ ಬಂದೂಕುಧಾರಿಗಳಿಂದ ಕೃತ್ಯ l ಒಟ್ಟು 42 ಜನರಿಗೆ ಗಾಯ

ಅಮೆರಿಕ: ಗುಂಡಿನ ದಾಳಿಗೆ 30 ಮಂದಿ ಬಲಿ

Published:
Updated:
Prajavani

ವಾಷಿಂಗ್ಟನ್/ಹ್ಯೂಸ್ಟನ್ (ಪಿಟಿಐ): ಅಮೆರಿಕದಲ್ಲಿ ಈ ವಾರಾಂತ್ಯ ಕರಾಳ ವಾಗಿ ಮಾರ್ಪಟ್ಟಿದ್ದು, ಶನಿವಾರ, ಭಾನುವಾರ ನಡೆದ ಎರಡು ಪ್ರತ್ಯೇಕ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ.

ಟೆಕ್ಸಾಸ್‌ನ ದಕ್ಷಿಣ ಗಡಿಭಾಗದಲ್ಲಿರುವ ಎಲ್‌ ಪಾಸೊ ನಗರದಲ್ಲಿ ಶನಿವಾರ ಮೊದಲ ದಾಳಿ ನಡೆದಿದ್ದು, ಜನ ನಿಬಿಡವಾಗಿದ್ದ ವಾಲ್‌ಮಾರ್ಟ್‌ ಸ್ಟೋರ್‌ನಲ್ಲಿ 21 ವರ್ಷದ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ. ಈ ಪ್ರಕರಣದಲ್ಲಿ 20 ಮಂದಿ ಮೃತಪಟ್ಟು, 26 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಒಂಬತ್ತು ಜನರ ಸ್ಥಿತಿ ಗಂಭೀರವಾಗಿದೆ. ‘ದಾಳಿಕೋರನನ್ನು ಪ್ಯಾಟ್ರಿಕ್ ಕ್ರುಸಿಯಸ್ ಎಂದು ಗುರುತಿಸಿದ್ದು, ಸ್ಟೋರ್‌ ಹೊರಭಾಗದಲ್ಲಿ ಆತ ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದಾನೆ. ಬಳಿಕ ಆತನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಕ್ಷ್ಯ ಸಂಗ್ರಹ: ‘ದಾಳಿ ವೇಳೆ ಸ್ಥಳದಲ್ಲಿದ್ದವರು ಸೆರೆಹಿಡಿದ ಚಿತ್ರಗಳು ಹಾಗೂ ವಿಡಿಯೊಗಳನ್ನು ಎಡಿಟ್ ಮಾಡದೆಯೇ ಮೂಲಸ್ವರೂಪದಲ್ಲಿಯೇ ತಮಗೆ ಸಲ್ಲಿಸಬೇಕು. ಇವುಗಳನ್ನು ಪರಿಶೀಲಿಸಲಾಗುತ್ತದೆ’ ಎಂದು ಎಫ್‌ಬಿಐ ಅಧಿಕಾರಿಗಳು ಹೇಳಿದ್ದಾರೆ.

ವಾರದಲ್ಲಿ ಎರಡನೇ ದಾಳಿ: ಅಮೆರಿಕದ ವಾಲ್‌ಮಾರ್ಟ್‌ ಸ್ಟೋರ್‌ನಲ್ಲಿ ಒಂದು ವಾರದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ಮಂಗಳವಾರ ಮಿಸಿಸಿಪ್ಪಿಯ ಸೌಥ್ಏವನ್‌ನ ವಾಲ್‌ಮಾರ್ಟ್‌ ಸ್ಟೋರ್‌ನಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು.

‘ಎಲ್‌ ಪಾಸೊ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ನನ್ನ ಸಂತಾಪವಿದೆ’ ಎಂದು ವಾಲ್‌ಮಾರ್ಟ್‌ ಸಿಇಒ ಡಗ್ ಮೆಕ್‌ಮಿಲನ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಓಹಿಯೊದ ಬಾರ್‌ನಲ್ಲಿ 2ನೇ ದಾಳಿ: ಡೇಟನ್‌ನ ಓರೆಗಾನ್ ಜಿಲ್ಲೆಯ ಓಹಿಯೊದ ಪ್ರಸಿದ್ಧ ಬಾರ್‌ನಲ್ಲಿ ಭಾನುವಾರ ಬೆಳಗಿನ ಜಾವ ಒಂದು ಗಂಟೆ ವೇಳೆಗೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, 9 ಜನರು ಸಾವನ್ನಪ್ಪಿದ್ದಾರೆ. 16 ಮಂದಿ ಗಾಯಗೊಂಡಿದ್ದಾರೆ.

ಘಟನೆ ನಡೆದ ಸ್ಥಳದ ಸಮೀಪವೇ ಇದ್ದ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿದ್ದು, ಅಧಿಕಾರಿಗಳ ಗುಂಡೇಟಿಗೆ ಬಂದೂಕುಧಾರಿ ಮೃತಪಟ್ಟಿದ್ದಾನೆ.

ಜನಾಂಗೀಯ ದ್ವೇಷ ಹಿನ್ನೆಲೆ

‘ಕ್ರುಸಿಯಸ್‌ಗೆ ಸೇರಿದ ಟ್ವಿಟರ್‌ ಖಾತೆ ಶನಿವಾರದಿಂದ ನಿಷ್ಕ್ರಿಯವಾಗಿದೆ. ಇದಕ್ಕೂ ಮೊದಲು ಈತ ಮಾಡಿರುವ ಪೋಸ್ಟ್‌ಗಳಲ್ಲಿ ಜನಾಂಗೀಯ ದ್ವೇಷದ ಸಂದೇಶಗಳಿವೆ. ವಲಸಿಗರು ಹಾಗೂ ಹಿಸ್ಪಾನಿಕ್ ಜನರು (ಕ್ಯೂಬಾ, ಮೆಕ್ಸಿಕನ್‌, ದಕ್ಷಿಣ ಅಥವಾ ಕೇಂದ್ರ ಅಮೆರಿಕ, ಸ್ಪೇನ್‌ ಮೂಲದವರು) ಟೆಕ್ಸಾಸ್‌ ಅನ್ನು ಆವರಿಸಿಕೊಂಡಿರುವುದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗುತ್ತಿದೆ ಎಂದು ಆತ ಬರೆದುಕೊಂಡಿದ್ದಾನೆ’ ಎಂದು ಪೊಲೀಸರು ವಿವರಿಸಿದ್ದಾರೆ.

ಟ್ರಂಪ್‌ಗೆ ಪ್ರಶಂಸೆ!: ಕ್ರುಸಿಯಸ್‌ ತನ್ನ ಹಳೆಯ ಟ್ವೀಟ್‌ಗಳಲ್ಲಿ, ಟ್ರಂಪ್ ಅವರನ್ನು ಹಾಗೂ ನಿರ್ದಿಷ್ಟವಾಗಿ ಅಮೆರಿಕ–ಮೆಕ್ಸಿಕೊ ಗಡಿಗೆ ಗೋಡೆ ನಿರ್ಮಿಸುವ ಅವರ ನಿರ್ಣಯವನ್ನು ಪ್ರಶಂಸಿಸಿದ್ದಾನೆ.

***

ಕರಾಳ ದಿನ

l ಎಲ್‌ ಪಾಸೊ, ಓರಿಯೊದ ಘಟನೆ ಈ ವರ್ಷದ 215ನೇ ದಿನ ನಡೆದ ದಾಳಿ

l 2019ರಲ್ಲಿ ಈ ತನಕ ನಡೆದಿರುವ ದಾಳಿಗಳು 251 

l ಸಾಮೂಹಿಕ ಗುಂಡಿನ ದಾಳಿಯಲ್ಲಿ ಈ ವರ್ಷ 522 ಸಾವು

Post Comments (+)