ಮಂಗಳವಾರ, ಸೆಪ್ಟೆಂಬರ್ 21, 2021
29 °C
ಆರನೇ ಹಂತದ 59 ಕ್ಷೇತ್ರಗಳಲ್ಲಿ 43 ಕಡೆ ಬಿಜೆಪಿ ಸಂಸದರು: ಆಡಳಿತ ಪಕ್ಷಕ್ಕೆ ಸ್ಥಾನ ಉಳಿಸಿಕೊಳ್ಳುವ ಸವಾಲು

ಉತ್ತರದಲ್ಲಿ ಬಿಜೆಪಿಗೆ ಇನ್ನೊಂದು ಸತ್ವಪರೀಕ್ಷೆ

ಶೆಮಿನ್ ಜಾಯ್ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಭಾನುವಾರ (ಮೇ 12) ನಡೆಯಲಿದೆ. ಐದನೇ ಹಂತದ ಚುನಾವಣೆಯಂತೆ ಬಿಜೆಪಿಗೆ ಇದು ಸಹ ಅತ್ಯಂತ ಸವಾಲಿನ ಹಂತವಾಗಲಿದೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆ.

ಆರನೇ ಹಂತದಲ್ಲಿ ಒಟ್ಟು 59 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಶೇ 72 ಅಥವಾ 43 ಸ್ಥಾನಗಳಲ್ಲಿ ಪ್ರಸಕ್ತ ಬಿಜೆಪಿಯ ಸಂಸದರು ಇದ್ದಾರೆ. ಇನ್ನೆರಡು ಕ್ಷೇತ್ರಗಳಲ್ಲಿ ಅವರ ಮಿತ್ರಪಕ್ಷದವರಿದ್ದಾರೆ. 2014ರಲ್ಲಿ ಈ 59 ಕ್ಷೇತ್ರಗಳಲ್ಲಿ 44 ಕಡೆ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಆದರೆ ಫೂಲ್‌ಪುರ ಕ್ಷೇತ್ರಕ್ಕೆ ಕಳೆದವರ್ಷ ನಡೆದ ಉಪ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

‘ಕಳೆದ ಬಾರಿಯ ಸಾಧನೆಯನ್ನು ಪುನರಾವರ್ತಿಸಲು ಬಿಜೆಪಿಗೆ ಈ ಬಾರಿ ಸಾಧ್ಯವಾಗಲಾರದು’ ಎಂದು ವಿರೋಧಪಕ್ಷಗಳು ವಿಶ್ವಾಸದಿಂದ ಹೇಳುತ್ತಿವೆ. ‘ಬಿಜೆಪಿಯ ಕೈಯಲ್ಲಿರುವ ಅನೇಕ ಕ್ಷೇತ್ರಗಳನ್ನು ನಾಲ್ಕು ಮತ್ತು ಐದನೇ ಹಂತದ ಮತದಾನಗಳಲ್ಲಿ ನಾವು ಕಸಿದುಕೊಂಡಿದ್ದೇವೆ. ಆರನೇ ಹಂತದಲ್ಲೂ ಅದು ಮುಂದುವರಿಯಲಿದೆ’ ಎಂದು ಅವರು ಹೇಳುತ್ತಿದ್ದಾರೆ.

‘ಮೊದಲ ಮೂರು ಹಂತಗಳಲ್ಲಿ 302 ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಬಿಜೆಪಿಗೆ ಸುಮಾರು 119 ಸ್ಥಾನಗಳು ಲಭಿಸಬಹುದು. ನಂತರದ ನಾಲ್ಕು ಹಂತಗಳಲ್ಲಿ 240 ಕ್ಷೇತ್ರಗಳಿಗೆ ನಡೆಯುವ ಚುನಾವಣೆಗಳಲ್ಲಿ ಗರಿಷ್ಠ ಎಂದರೂ 140 ಸ್ಥಾನಗಳು ಮಾತ್ರ ಬಿಜೆಪಿಗೆ ಲಭ್ಯವಾಗಬಹುದು’ ಎಂದು ಸಮೀಕ್ಷೆಯೊಂದು ಹೇಳಿದೆ.

ನಾಲ್ಕನೇ ಹಂತದಲ್ಲಿ ಮತದಾನ ನಡೆದ ಒಟ್ಟಾರೆ 71 ಕ್ಷೇತ್ರಗಳ ಪೈಕಿ 45 ಕ್ಷೇತ್ರಗಳಲ್ಲಿ ಪ್ರಸಕ್ತ ಬಿಜೆಪಿಯ ಸಂಸದರಿದ್ದಾರೆ. ಐದನೇ ಹಂತದಲ್ಲಿ ಮತದಾನವಾದ 51 ಕ್ಷೇತ್ರಗಳಲ್ಲಿ 38ರಲ್ಲಿ ಬಿಜೆಪಿಯವರಿದ್ದಾರೆ.

‘ನನ್ನ ಅನುಭವ ಮತ್ತು ತಿಳಿವಳಿಕೆಯ ಆಧಾರದಲ್ಲಿ ಹೇಳುವುದಾದರೆ, ರಾಜ್ಯಗಳಲ್ಲಿ ಚುನಾವಣಾ ಸಮೀಕರಣಗಳು ಪ್ರತಿಪಕ್ಷಗಳ ಹಾಗೂ ಮೈತ್ರಿ ಪಕ್ಷಗಳ ಪರವಾಗಿ ಬದಲಾಗಿದೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಇದಕ್ಕಿಂತ ಹೆಚ್ಚಿನ ಸ್ಥಾನಗಳು ಲಭಿಸುವ ಸಾಧ್ಯತೆ ಇಲ್ಲ’ ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆರನೇ ಹಂತದಲ್ಲಿ ಚುನಾವಣೆ ಎದುರಿಸುತ್ತಿರುವ ಕ್ಷೇತ್ರಗಳಲ್ಲಿ ಪ್ರಸಕ್ತ ಎರಡು ಕಡೆ ಮಾತ್ರ ಕಾಂಗ್ರೆಸ್‌ ಸಂಸದರಿದ್ದಾರೆ. ಮಧ್ಯಪ್ರದೇಶದ ಗುನಾ ಕ್ಷೇತ್ರದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಗೆದ್ದಿದ್ದರೆ, ಹರಿಯಾಣದ ರೋಹಟಕ್‌ ಕ್ಷೇತ್ರದಿಂದ ದೀಪೇಂದ್ರ ಹೂಡಾ ಸಂಸದರಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿರುವ ಎಂಟು ಕ್ಷೇತ್ರಗಳಲ್ಲೂ ಪ್ರಸಕ್ತ ತೃಣಮೂಲ ಕಾಂಗ್ರೆಸ್‌ ಸಂಸದರೇ ಇದ್ದಾರೆ. ಇಲ್ಲಿ ಬಿಜೆಪಿ ಯಾವ ಸಾಧನೆ ಮಾಡುತ್ತದೆ ಎಂಬುದನ್ನು ನೋಡಬೇಕಾಗಿದೆ. ಇವುಗಳಲ್ಲಿ ಒಂದೆರಡು ಕ್ಷೇತ್ರಗಳಲ್ಲಿ, ವಿಶೇಷವಾಗಿ ಪುರುಲಿಯಾದಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಭಾನುವಾರ ಚನಾವಣೆ ಎದುರಿಸಲಿರುವ 59 ಕ್ಷೇತ್ರಗಳಲ್ಲಿ ಎರಡು ಕಡೆ ಪ್ರಸಕ್ತ ಐಎನ್‌ಡಿಎಲ್ ಸಂಸದರಿದ್ದಾರೆ. ಎನ್‌ಡಿಎ ಅಂಗಪಕ್ಷ ಎಲ್‌ಜೆಪಿ ಒಂದು (ಬಿಹಾರ), ಅಪ್ನಾದಳ ಒಂದು (ಉತ್ತರ ಪ್ರದೇಶ) ಹಾಗೂ ಎಸ್‌ಪಿ ಇಬ್ಬರು (ಉತ್ತರಪ್ರದೇಶ) ಸಂಸದರನ್ನು ಹೊಂದಿದೆ.

ಆರನೇ ಹಂತದಲ್ಲಿ ಮತದಾನವಾಗುವ ಉತ್ತರಪ್ರದೇಶದ ಒಟ್ಟು 14 ಕ್ಷೇತ್ರಗಳಲ್ಲಿ 11ರಲ್ಲಿ ಪ್ರಸಕ್ತ ಬಿಜೆಪಿ ಸಂಸದರಿದ್ದಾರೆ. ದೆಹಲಿಯ ಎಲ್ಲಾ ಏಳು ಸ್ಥಾನ, ಬಿಹಾರ ಮತ್ತು ಹರಿಯಾಣದಲ್ಲಿ ತಲಾ ಏಳು ಸ್ಥಾನಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಜಾರ್ಖಂಡ್‌ ರಾಜ್ಯದ ನಾಲ್ಕು ಕ್ಷೇತ್ರಗಳಲ್ಲೂ ಪ್ರಸಕ್ತ ಬಿಜೆಪಿಯ ಸಂಸದರೇ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು