ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕಣದಲ್ಲಿ ಪಕ್ಷೇತರರ ಕಲರವ

ಜಿಲ್ಲೆಯ ಏಳು ಕ್ಷೇತ್ರಗಳ 74 ಅಭ್ಯರ್ಥಿಗಳಲ್ಲಿ 38 ಸ್ವತಂತ್ರ ಅಭ್ಯರ್ಥಿಗಳು
Last Updated 29 ಏಪ್ರಿಲ್ 2018, 13:58 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಈ ಬಾರಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಪಕ್ಷೇತರರ ಭಾರಿ ಸವಾಲು ಎದುರಿಸಬೇಕಿದೆ.

ಕಣದಲ್ಲಿ ಅಂತಿಮವಾಗಿ ಉಳಿದ 74 ಅಭ್ಯರ್ಥಿಗಳಲ್ಲಿ 38 ಮಂದಿ ಪಕ್ಷೇತರರೇ ಇದ್ದಾರೆ. ಅಂದರೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಸಂಖ್ಯೆಗಿಂತ ಪಕ್ಷೇತರರೇ ಹೆಚ್ಚು ಇದ್ದಾರೆ. ಒಟ್ಟು ಅಭ್ಯರ್ಥಿಗಳಲ್ಲಿ ಅವರ ಪ್ರಮಾಣ ಶೇ 51.35ರಷ್ಟಿದೆ.

ಶಿವಮೊಗ್ಗ ನಗರದಲ್ಲೇ ಅತಿ ಹೆಚ್ಚು: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅತಿ ಹೆಚ್ಚು (20) ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.

ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ, ಕಾಂಗ್ರೆಸ್‌ನ ಕೆ.ಬಿ. ಪ್ರಸನ್ನಕುಮಾರ್, ಜೆಡಿಎಸ್‌ನ ಎಚ್‌.ಎನ್. ನಿರಂಜನ್ ಮಧ್ಯೆ ತ್ರಿಕೋನ ಸ್ಪರ್ಧೆ ಇದ್ದರೂ, ಎಂಇಪಿ, ರಿಪಬ್ಲಿಕನ್‌ ಸೇನಾ, ನಮ್ಮ ಕಾಂಗ್ರೆಸ್, ಜನ ಸಾಮಾನ್ಯರ ಪಕ್ಷ, ಪ್ರೌಟನ್ಸ್‌ ಬ್ಲಾಕ್ ಇಂಡಿಯಾ ಪಕ್ಷಗಳ ಅಭ್ಯರ್ಥಿಗಳು ಈ ಬಾರಿ ಒಂದಷ್ಟು ಮತಗಳನ್ನು ಹಂಚಿಕೊಳ್ಳಲಿದ್ದಾರೆ.

ಅಲ್ಲದೇ ಇದೇ ಕ್ಷೇತ್ರದಲ್ಲಿ 12 ಪಕ್ಷೇತರರು ಕಣದಲ್ಲಿದ್ದಾರೆ. ಅವರಲ್ಲಿ ಕೆಲವರು ಸಾಕಷ್ಟು ಮತ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ಜೆಡಿಎಸ್ ವಿರುದ್ಧ ಬಂಡಾಯ ಸಾರಿರುವ ಪಾಲಿಕೆ ಸದಸ್ಯ ನರಸಿಂಹಮೂರ್ತಿ (ಬಾಬಣ್ಣ) ಪಕ್ಷೇತರರಲ್ಲೇ ಸಾಕಷ್ಟು ಮತ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ.

ಖಾಸಗಿ ಆಸ್ಪತ್ರೆ ವೈದ್ಯ ಡಾ.ಪಿ.ಎಲ್‌. ನರೇಂದ್ರ, ವೀರಶೈವ ಸಮಾಜದ ಮುಖಂಡ ಪಿ. ಚನ್ನಬಸಪ್ಪ ಗಮನ ಸೆಳೆಯುತ್ತಿದ್ದಾರೆ.

ಭದ್ರಾವತಿಯಲ್ಲಿ 9 ಪಕ್ಷೇತರರು: ಶಿವಮೊಗ್ಗ ಬಿಟ್ಟರೆ ಅತಿ ಹೆಚ್ಚು ಪಕ್ಷೇತರರು ಇರುವುದು ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ. 14 ಅಭ್ಯರ್ಥಿಗಳಲ್ಲಿ 9 ಪಕ್ಷೇತರರೇ ಇದ್ದಾರೆ. ಈ ಅಭ್ಯರ್ಥಿಗಳು ಪಡೆಯುವ ಮತಗಳು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಸೋಲು–ಗೆಲುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಜೆಡಿಎಸ್ ಅಭ್ಯರ್ಥಿ ಎಂ.ಜೆ. ಅಪ್ಪಾಜಿ, ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ, ಬಿಜೆಪಿ ಅಭ್ಯರ್ಥಿ ಪ್ರವೀಣ್ ಪಟೇಲ್ ಮಧ್ಯೆ ತ್ರಿಕೋನ ಸ್ಪರ್ಧೆ ಇದ್ದು, ಪಕ್ಷೇತರರು ಪಡೆಯವ ಮತಗಳು ನಿರ್ಣಾಯಕವಾಗುವ ಸಾಧ್ಯತೆ ಇದೆ. ಓಂ ವಿಜಯವಂಶಿ, ಪಿ.ಎನ್‌. ರಾಜು, ಬಿಜೆಪಿ ಬಂಡಾಯ ಅಭ್ಯರ್ಥಿ ಪಿ.ಇ. ಬಸವರಾಜು, ಎಂಇಪಿ ಅಭ್ಯರ್ಥಿ ಮುಮ್ತಾಜ್ ಬೇಗಂ, ಆಮ್‌ ಆದ್ಮಿ ಪಾರ್ಟಿಯ ರವಿಕುಮಾರ್ ಸಾಕಷ್ಟು ಮತ ಸೆಳೆಯಲಿದ್ದಾರೆ.

ಯಡಿಯೂರಪ್ಪಗೂ ಪಕ್ಷೇತರರ ಸವಾಲು: ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಾಂಗ್ರೆಸ್‌ನ ಗೋಣಿ ಮಾಲತೇಶ್, ಜೆಡಿಎಸ್‌ನ ಎಚ್‌.ಟಿ. ಬಳಿಗಾರ್ ಸ್ಪರ್ಧೆ ಒಡ್ಡಿದ್ದರೂ, ಪಕ್ಷೇತರರ ಸವಾಲು ಕಡೆಗಣಿಸುವಂತಿಲ್ಲ.

ಕಳೆದ ಬಾರಿಯೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಆರ್. ಅನಿಲ್ (ಕುಂಚಿ) ಈ ಬಾರಿಯೂ ಕಣಕ್ಕೆ ಇಳಿದಿದ್ದಾರೆ. ಈಚೆಗೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಶಿಕಾರಿಪುರದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ, ಗಮನ ಸೆಳೆದಿದ್ದರು. ಈ ಬಾರಿ ಆರಂಭದಿಂದಲೇ ಅಬ್ಬರದ ಪ್ರಚಾರಕ್ಕೆ ಇಳದಿದ್ದಾರೆ. ಹೆಲಿಕಾಪ್ಟರ್ ಮೂಲಕ ಬಂದು ನಾಮಪತ್ರ ಸಲ್ಲಿಸಿದ್ದ ವಿನಯ್ ರಾಜಾವತ್ ಕಣದಲ್ಲಿ ಇದ್ದಾರೆ.

ಸಾಗರ ಮತ್ತು ಸೊರಬದಲ್ಲಿ ಈ ಬಾರಿ ತಲಾ 8 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಸಾಗರದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಕಾಂಗ್ರೆಸ್‌ನಿಂದ ಮತ್ತೊಂದು ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ನೇರ ಸ್ಪರ್ಧೆ ಒಡ್ಡಿದ್ದಾರೆ. ಜೆಡಿಎಸ್‌ನ ಎಂ.ಬಿ. ಗಿರೀಶ್ ಗೌಡ, ಎಂಇಪಿಯ ಕಲಾವತಿ, ಸ್ವರಾಜ್ ಇಂಡಿಯಾದ ದೂಗೂರು ಪರಮೇಶ್ವರ ಸಾಕಷ್ಟು ಪೈಪೋಟಿ ನೀಡಲಿದ್ದಾರೆ. ಜತೆಗೆ ಮೂವರು ಪಕ್ಷೇತರರ ಸವಾಲು ಎದುರಿಸಬೇಕಿದೆ.

ಸೊರಬದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ, ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಮಧ್ಯೆ ನೇರ ಸ್ಪರ್ಧೆ ಇದೆ. ಕಾಂಗ್ರೆಸ್ ಅಭ್ಯರ್ಥಿ ರಾಜು ತಲ್ಲೂರು, ಸ್ವರಾಜ್ ಇಂಡಿಯಾದ ಎಸ್.ಬಿ. ಗಂಗಾಧರಪ್ಪ ಹುಣುವಳ್ಳಿ ಸಾಕಷ್ಟು ಪೈಪೋಟಿ ನೀಡಲಿದ್ದಾರೆ. ಎಂಇಪಿಯ ಟಿ.ಕೆ. ಅಸಾದುಲ್ಲಾ ಸೇರಿದಂತೆ ಮೂವರು ಪಕ್ಷೇತರರ ಸವಾಲು ಇದೆ.

ತೀರ್ಥಹಳ್ಳಿಯಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ, ಜೆಡಿಎಸ್‌ನ ಆರ್.ಎಂ. ಮಂಜುನಾಥ ಗೌಡ ಅವರ ಮಧ್ಯೆ ತ್ರಿಕೋನ ಸ್ಪರ್ಧೆ ಇದೆ. ಅವರು ಎಂಇಪಿಯ ಪುತ್ತಬ್ಬ ಸೇರಿದಂತೆ ನಾಲ್ವರು ಪಕ್ಷೇತರರ ಸ್ಪರ್ಧೆ
ಎದುರಿಸಬೇಕಿದೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದಾ, ಕಾಂಗ್ರೆಸ್‌ನ ಡಾ.ಶ್ರಿನಿವಾಸ್ ಕರಿಯಣ್ಣ, ಬಿಜೆಪಿಯ ಅಶೋಕ್‌ ನಾಯ್ಕ ಅವರು ಎಂಇಪಿಯ ಎಸ್.ಕೃಷ್ಣ, ರಿಪಬ್ಲಿಕ್ ಸೇನಾದ ಎಲ್‌. ರಂಗಸ್ವಾಮಿ ಅವರ ಜತೆ ಇಬ್ಬರು ಪಕ್ಷೇತರರ ಜತೆ ಪೂಪೋಟಿ ನಡೆಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT