ಕೊಲೆಗೂ ಮುನ್ನ ’ದೃಶ್ಯಂ’ ನೋಡಿದರು; ತನಿಖೆಯ ಹಾದಿ ತಪ್ಪಿಸಲು ನಾಯಿ ಹೂತಿಟ್ಟರು!

7

ಕೊಲೆಗೂ ಮುನ್ನ ’ದೃಶ್ಯಂ’ ನೋಡಿದರು; ತನಿಖೆಯ ಹಾದಿ ತಪ್ಪಿಸಲು ನಾಯಿ ಹೂತಿಟ್ಟರು!

Published:
Updated:

ಇಂದೋರ್‌(ಮಧ್ಯ ಪ್ರದೇಶ): 22 ವರ್ಷ ವಯಸ್ಸಿನ ಯುವತಿ ಹತ್ಯೆಯ ಸಂಬಂಧ ಬಿಜೆಪಿ ಮುಖಂಡ ಹಾಗೂ ಆತನ ಮೂವರು ಮಕ್ಕಳು ಸೇರಿ ಐದು ಜನರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಅಜಯ್‌ ದೇವಗನ್‌ ಅಭಿನಯದ ದೃಶ್ಯಂ ಸಿನಿಮಾದಿಂದ ಪ್ರೇರಣೆ ಪಡೆದು 2 ವರ್ಷಗಳ ಹಿಂದೆ ಯುವತಿ ಕೊಲೆ ಮಾಡಲಾಗಿದೆ. 

ಬಿಜೆಪಿ ಮುಖಂಡ ಜಗದೀಶ್‌ ಕರೋತಿಯ ಅಲಿಯಾಸ್‌ ಕಲ್ಲು ಪಹಲ್ವಾನ್‌(65), ಆತನ ಮಕ್ಕಳಾದ ಅಜಯ್‌(36), ವಿಜಯ್‌(38), ವಿನಯ್‌(31) ಹಾಗೂ ಅವರ ಸಹಚರ ನೀಲೇಶ್‌ ಕಶ್ಯಪ್‌(28)–ಈ ಐವರು ಆರೋಪಿಗಳನ್ನು ಬಂಧಿಸಿರುವುದಾಗಿ ಇಂದೋರ್‌ ಡಿಐಜಿ ಹರಿನಾರಾಯಣಚಾರಿ ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಾಣಗಂಗಾ ಪ್ರದೇಶದ ಟ್ವಿಂಕಲ್‌ ದಾಗ್ರೆ(22) ಕೊಲೆಯಾದ ಯುವತಿ. 

ಜಗದೀಶ್‌ ಕರೋತಿಯ ಜತೆಗೆ ಯುವತಿ ಟ್ವಿಂಕಲ್‌ ಸಂಬಂಧ ಹೊಂದಿದ್ದರು. ಆಕೆ ಕರೋತಿಯ ಅವರೊಂದಿಗೆ ಇರಲು ಇಚ್ಛಿಸಿದ್ದರು. ಇದು ಕರೋತಿಯ ಕುಟುಂಬದಲ್ಲಿ ಸಮಸ್ಯೆಯನ್ನು ಸೃಷ್ಟಿಸಿತ್ತು ಎನ್ನಲಾಗಿದೆ. ಕರೋತಿಯ ಮತ್ತು ಅವರ ಮಕ್ಕಳು 2016ರ ಅಕ್ಟೋಬರ್‌ 16ರಂದು ಟ್ವಿಂಕಲ್‌ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಆಕೆಯ ದೇಹವನ್ನು ಸುಟ್ಟು ಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ದೇಹವನ್ನು ಸುಟ್ಟಿರುವ ಸ್ಥಳದಲ್ಲಿ ಬಳೆ ಹಾಗೂ ಇತರೆ ಆಭರಣಗಳು ಪತ್ತೆಯಾಗಿದ್ದು, ಅದನ್ನು ಆಧರಿಸಿ ಐವರನ್ನು ಬಂಧಿಸಿರುವುದಾಗಿ ಡಿಐಜಿ ಹೇಳಿದ್ದಾರೆ. ‘ಕೊಲೆಗೆ ಯೋಜನೆ ರೂಪಿಸುವುದಕ್ಕೂ ಮುನ್ನ 2015ರಲ್ಲಿ ತೆರೆಕಂಡ ಅಜಯ್‌ ದೇವಗನ್‌ ಅಭಿನಯದ ದೃಶ್ಯಂ ಚಿತ್ರವನ್ನು ಆರೋಪಿಗಳು ನೋಡಿದ್ದಾರೆ. ಅದೇ ಚಿತ್ರದ ದೃಶ್ಯಗಳಿಂದ ಪ್ರೇರಣೆ ಪಡೆದು ನಾಯಿಯ ದೇಹವನ್ನು ಒಂದು ಸ್ಥಳದಲ್ಲಿ ಹೂತು ಹಾಕಿದ್ದಾರೆ ಹಾಗೂ ಮಾನವ ದೇಹವನ್ನು ಯಾರೋ ಗುಂಡಿಯಲ್ಲಿ ಹೂತಿದ್ದಾರೆ ಎಂದು ಅವರೇ ಸುದ್ದಿ ಹಬ್ಬಿಸಿದ್ದರು. ಪೊಲೀಸರು ಗುಂಡಿ ತೋಡಿದಾಗ ನಾಯಿಯ ದೇಹದ ಕೊಳೆತ ಭಾಗ ಕಂಡು ಬಂದಿತ್ತು. ಇದು ಪೊಲೀಸರ ತನಿಖೆಯ ಹಾದಿ ತಪ್ಪಿಸಿತ್ತು.’ ಎಂದು ವಿವರಿಸಿದ್ದಾರೆ. 

ಈ ಪ್ರಕರಣದಲ್ಲಿ ಕಗ್ಗಂಟು ಬಿಡಿಸಲು ಪೊಲೀಸರು ವೈಜ್ಞಾನಿಕ ಪರೀಕ್ಷೆಗಳನ್ನು ಬಳಸಲು ಮುಂದಾದರು. ಆರೋಪಿ ಕರೋತಿಯ ಹಾಗೂ ಅವರ ಇಬ್ಬರು ಪುತ್ರರನ್ನು ಗುಜರಾತ್‌ ಪ್ರಯೋಗಾಲಯದಲ್ಲಿ ಮಿದುಳಿನಲ್ಲಿ ಉಂಟಾಗುವ ಆವೇಗವನ್ನು ಗುರುತಿಸುವ (ಬ್ರೇನ್‌ ಎಲೆಕ್ಟ್ರಿಕಲ್‌ ಆಸಿಲೇಷನ್‌ ಸಿಗ್ನೇಚರ್‌– ಬಿಇಒಎಸ್‌) ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ನೀಡುವ ಹೇಳಿಕೆ ಮತ್ತು ಮಿದುಳಿನಲ್ಲಿ ಉಂಟಾಗುವ ಆಂತರಿಕ ಆವೇಗದ ಆಧಾರದ ಮೇಲೆ ಆರೋಪಿ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ನಿರ್ಣಯಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಇಂದೋರ್‌ ಪೊಲೀಸರು ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಗಳಿಗೆ ಈ ಪರೀಕ್ಷೆ ನಡೆಸಿದ್ದಾರೆ. 

ಬರಹ ಇಷ್ಟವಾಯಿತೆ?

 • 34

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !