ಡೀಸೆಲ್ ಲೋಕೊಮೊಟಿವ್ ಎಲೆಕ್ಟ್ರಿಕ್‌ಗೆ ಪರಿವರ್ತನೆ

ನವದೆಹಲಿ: ಇದೇ ಪ್ರಥಮ ಬಾರಿಗೆ ಭಾರತೀಯ ರೈಲ್ವೆ ಡೀಸೆಲ್ ಲೋಕೊಮೊಟಿವ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಎಂಜಿನ್‌ಗೆ ಪರಿವರ್ತಿಸಿದೆ.
ಬ್ರಾಡ್‌ಗೇಜ್ ಸಂಪರ್ಕ ಜಾಲವನ್ನು ಸಂಪೂರ್ಣವಾಗಿ ವಿದ್ಯುದ್ದೀಕರಣಗೊಳಿಸುವ ಪ್ರಯತ್ನದ ಭಾಗವಾಗಿ ಈ ಕಾರ್ಯ ಕೈಗೊಳ್ಳಲಾಗಿದೆ.
ಈ ಪರಿವರ್ತನೆಯಿಂದ ಲೋಕೊಮೊಟಿವ್ ಎಂಜಿನ್ ಸಾಮರ್ಥ್ಯ 2600 ಅಶ್ವಶಕ್ತಿಯಿಂದ 5000 ಅಶ್ವಶಕ್ತಿಗೆ ಹೆಚ್ಚಳವಾಗಲಿದೆ.
ಈ ಯೋಜನೆಯನ್ನು 2017ರ ಡಿಸೆಂಬರ್ 22ರಂದು ಆರಂಭಿಸಿ 2018ರ ಫೆಬ್ರುವರಿ 28ರಂದು ಮುಕ್ತಾಯಗೊಳಿಸಲಾಯಿತು. ಎಂಜಿನ್ ಪರಿವರ್ತನೆ ಯೋಜನೆಯ ಪರಿಕಲ್ಪನೆ ಮತ್ತು ಅನುಷ್ಠಾನವನ್ನು ಕೇವಲ 69 ದಿನಗಳಲ್ಲಿ ಕೈಗೊಳ್ಳಲಾಗಿತ್ತು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಾರಾಣಸಿಯಲ್ಲಿರುವ ‘ಡೀಸೆಲ್ ಲೋಕೊಮೊಟಿವ್ ವರ್ಕ್ಸ್’ ಘಟಕದಲ್ಲಿ ಡೀಸೆಲ್ ಲೋಕೊಮೊಟಿವ್ ಅನ್ನು ಹೊಸ ಎಲೆಕ್ಟ್ರಿಕ್ ಲೋಕೊಮೊಟಿವ್‌ಗೆ ಪರಿವರ್ತಿಸುವ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಿದೆ. ಕಡ್ಡಾಯ ಪ್ರಯೋಗಗಳ ಬಳಿಕ ಲೋಕೋಮೊಟಿವ್ ಎಂಜಿನ್ ಅನ್ನು ವಾರಾಣಸಿಯಿಂದ ಲೂಧಿಯಾನವರೆಗೆ ಸಂಚರಿಸಲು ಆರಂಭಿಸಿದೆ ಎಂದು ತಿಳಿಸಿದ್ದಾರೆ.
ಭಾರತೀಯ ರೈಲ್ವೆ ಶೇಕಡ 100ರಷ್ಟು ವಿದ್ಯುದ್ದೀಕರಣದ ಯೋಜನೆಯನ್ನು ಕೈಗೊಂಡಿದೆ. ಇದರಿಂದ, ಇಂಧನ ವೆಚ್ಚದಲ್ಲಿ ಉಳಿತಾಯವಾಗಲಿದೆ ಹಾಗೂ ಇಂಗಾಲದ ಡೈ ಆಕ್ಸೈಡ್ ಹೊರಸೂಸುವುದು ಸಹ ಕಡಿಮೆಯಾಗಲಿದೆ. ಇದು ಭಾರತೀಯ ರೈಲ್ವೆಯ ವಿಭಿನ್ನವಾದ ಯೋಜನೆಯಾಗಿದೆ. ಇದರಿಂದ, ಹಣಕಾಸು ಹೊರೆಯೂ ಹೆಚ್ಚಾಗಿಲ್ಲ. ಜಗತ್ತಿನಲ್ಲೇ ಇದು ಪ್ರಥಮ ಪ್ರಯೋಗವಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಪ್ರಾಯೋಗಿಕ ಸಂಚಾರದ ಬಳಿಕ ವಾಣಿಜ್ಯ ಸೇವೆಗೂ ಪರಿವರ್ತನೆಗೊಂಡಿರುವ ಲೋಕೊಮೊಟಿವ್ ಎಂಜಿನ್ ಅನ್ನು ಡಿಸೆಂಬರ್ 3ರಂದು ಬಳಸಲಾಗಿದೆ. 5200 ಟನ್‌ಗಳ ಸರಕುಗಳನ್ನು ಪ್ರತಿ ಗಂಟೆಗೆ 75 ಕಿಲೋ ಮೀಟರ್ ವೇಗದಲ್ಲಿ ಕೊಂಡೊಯ್ದಿದೆ ಎಂದು ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.