ಕೇರಳದಲ್ಲಿ 620 ಕಿ.ಮೀ ‘ಮಹಿಳಾ ಗೋಡೆ’

7

ಕೇರಳದಲ್ಲಿ 620 ಕಿ.ಮೀ ‘ಮಹಿಳಾ ಗೋಡೆ’

Published:
Updated:

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಅಡ್ಡಿ ಮಾಡುತ್ತಿರುವುದನ್ನು ಖಂಡಿಸಿ  ಕೇರಳದ ಲಕ್ಷಾಂತರ ಮಹಿಳೆಯರು 620 ಕಿ.ಮೀ ಉದ್ದದ ‘ಮಹಿಳೆಯರ ಗೋಡೆ’ ನಿರ್ಮಿಸುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

ಲಿಂಗ ಸಮಾನತೆ ಎತ್ತಿ ಹಿಡಿಯಲು ಕೇರಳದ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರವೇ ‘ಮಹಿಳೆಯರ ಗೋಡೆ’ ಆಂದೋಲನ ಪ್ರಾಯೋಜಿಸಿತ್ತು.

ಕಾಸರಗೋಡಿನ ತುತ್ತತುದಿಯಿಂದ ತಿರುವನಂತಪುರದ ಕೊನೆಯವರೆಗೆ ಸಂಜೆ ನಾಲ್ಕು ಗಂಟೆಗೆ ರಾಷ್ಟ್ರೀಯ ಹೆದ್ದಾ ರಿಗುಂಟ ಮಹಿಳೆಯರು ಭುಜಕ್ಕೆ ಭುಜ ತಾಗಿಸಿ ನಿಂತು ‘ಮಹಿಳಾ ಗೋಡೆ’ ನಿರ್ಮಿಸಿದರು.ಮಹಿಳೆಯರಿಗೆ ಬೆಂಬಲ ವ್ಯಕ್ತಪಡಿ
ಸಲು ಸಾವಿರಾರು ಪುರುಷರು ಕೂಡ ‘ಮಾನವ ಗೋಡೆ’ ನಿರ್ಮಿಸಿದ್ದರು.

ಸುಪ್ರೀಂ ಕೋರ್ಟ್ ಆದೇಶದ ನಂತರವೂ ಅಯ್ಯಪ್ಪ ದೇವಸ್ಥಾನದ ಒಳಗೆ ಮಹಿಳೆಯರಿಗೆ ಮುಕ್ತ ಪ್ರವೇಶಕ್ಕೆ ತಡೆಯೊಡ್ಡಿದ ಶಕ್ತಿಗಳ ವಿರುದ್ಧ ಈ ಆಂದೋಲನ ಆಯೋಜಿಸಲಾಗಿದೆ.

ಶಬರಿಗಿರಿ ಸಂಘರ್ಷಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಇಂಥದ್ದೊಂದು ಆಂದೋಲನ ನಡೆಯುತ್ತಿರುವುದು ಇದೇ ಮೊದಲು.

ಅಯ್ಯಪ್ಪ ದೇವಸ್ಥಾನದ ಹಳೆಯ ಸಂಪ್ರದಾಯ ರಕ್ಷಣೆಗಾಗಿ ಸಾವಿರಾರು ಮಹಿಳೆಯರು ಕಾಸರಗೋಡಿನ ಹೊಸಂಗಡಿಯಿಂದ ಕನ್ಯಾಕುಮಾರಿಯವರೆಗೆ ಅಯ್ಯಪ್ಪ ಜ್ಯೋತಿ ಹಿಡಿದು ಪ್ರತಿಭಟನೆ ನಡೆಸಿದ್ದರು.

ಅದಾದ ಕೆಲವು ದಿನಗಳ ಬೆನ್ನಲ್ಲೇ ನಿರ್ಮಿಸಲಾದ ‘ಮಹಿಳಾ ಗೋಡೆ’ ಆಂದೋಲನದಲ್ಲಿ ಭಾಗವಹಿಸಿದ್ದ ಮಹಿಳೆಯರು ‘ಜಾತ್ಯತೀತ ಮೌಲ್ಯ, ಲಿಂಗ ಸಮಾನತೆ’ ಎತ್ತಿ ಹಿಡಿಯುವ ಪ್ರಮಾಣ ಮಾಡಿದರು.

ಕಾಸರಗೋಡಿನಿಂದ ತಿರುವನಂತಪುರಂ ಅಯ್ಯಂಗಾಳಿ ಪ್ರತಿಮೆವರೆಗೆ 620 ಕಿಮೀ  ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯರು ಒತ್ತೊತ್ತಾಗಿ ಸಾಲು ನಿಂತು 'ವನಿತಾ ಮದಿಲ್'ನಲ್ಲಿ ಭಾಗವಹಿಸಿದ್ದಾರೆ.

ಸಂಜೆ 3.30ರ ನಂತರ ವನಿತಾ ಮದಿಲ್‍ಗಾಗಿ ಇರುವ ತಾಲೀಮು ನಡೆದಿದ್ದು 4.00 ಗಂಟೆಯಿಂದ 4.15ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.  ನವೋತ್ಥಾನ ಮೌಲ್ಯಗಳನ್ನು ಕಾಪಾಡುವುದಾಗಿ ಮದಿಲ್‍ನಲ್ಲಿ ಭಾಗವಹಿಸಿದವರು ಪ್ರತಿಜ್ಞೆ ಸ್ವೀಕರಿಸಿದ್ದಾರೆ. 

ಕೇರಳದ ರಾಜಕೀಯ ಪ್ರಮುಖರು ಮಾತ್ರವಲ್ಲದೆ  ಬೇರೆ ರಾಜ್ಯಗಳ ಪ್ರಮುಖ ನಾಯಕರೂ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ,  ವೆಳ್ಳಿಯಾಂಬಲತ್‍‍ನಲ್ಲಿ ಪಾಲಿಟ್  ಬ್ಯೂರೊ ಸದಸ್ಯೆ ವೃಂದಾ ಕಾರಾಟ್, ಅನಿ ರಾಜಾ ಎಂಬವರು ಭಾಗವಹಿಸಿದ್ದು, ಕಾಸರಗೋಡಿನಲ್ಲಿ ಸಚಿವೆ ಕೆ.ಕೆ ಶೈಲಜಾ ಅವರು ಇದಕ್ಕೆ ನೇತೃತ್ವ ನೀಡಲಿದ್ದಾರೆ.

ಲಕ್ಷ ಮಹಿಳೆಯರು ಭಾಗಿ
ಕಾಸರಗೋಡು ಹೊಸ ಬಸ್ ನಿಲ್ದಾಣದಿಂದ ತಿರುವನಂತಪುರಂ ಅಯ್ಯಂಗಾಳಿ ಪ್ರತಿಮೆವರೆಗಿನ ರಾಷ್ಟ್ರೀಯ ಹೆದ್ದಾರಿಯ ಎಡಭಾಗದಲ್ಲಿ   (620 ಕಿಮೀ) ಮಹಿಳೆಯರು ಸಾಲಾಗಿ ನಿಂತಿದ್ದಾರೆ. ವನಿತಾ ಮದಿಲ್‍ನಲ್ಲಿ ಸುಮಾರು 50 ಲಕ್ಷ ಮಂದಿ ಭಾಗವಹಿಸುತ್ತಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

ಕೋಯಿಕ್ಕೋಡ್‍ನಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ವಿರುದ್ಧ ಪ್ರತಿಭಟನೆ
ಕೋಯಿಕ್ಕೋಡ್: ವನಿತಾ ಮದಿಲ್ ಕಾರ್ಯಕ್ರಮದ ದಿನ ಶಾಲೆಗಳಿಗೆ  ರಜೆ ನೀಡಿರುವ ಕೋಯಿಕ್ಕೋಡ್ ಡಿಡಿಇ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಡಿಡಿಇ ಕಚೇರಿಗೆ ಬಲವಂತವಾಗಿ ನುಗ್ಗಲು ಪ್ರಯತ್ನಿಸಿದ ಡಿಸಿಸಿ ಅಧ್ಯಕ್ಷ ಟಿ. ಸಿದ್ದಿಖ್ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಡಿಡಿಇ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಪ್ರತಿಭಟನೆ ವೇಳೆ  ಡಿಡಿಇ ಕಚೇರಿಯಲ್ಲಿರಲಿಲ್ಲ. ಕಚೇರಿಯ ಮುಂಭಾಗದಲ್ಲಿರುವ ಫಲಕಕ್ಕೆ ಪ್ರತಿಭಟನಾಕಾರರು ಚಪ್ಪಲಿ ಹಾರ ಹಾಕಿದ್ದಾರೆ ಎಂದು ಮನೋರಮಾ ಆನ್‍ಲೈನ್ ವರದಿ ಮಾಡಿದೆ.

ಹೆಲ್ಮೆಟ್ ಧರಿಸದೆ ವನಿತಾ ಮದಿಲ್ ಪರ ಪ್ರಚಾರ: ಶಾಸಕಿಗೆ ದಂಡ
ಆಲಪ್ಪುಳ: ವನಿತಾ ಮದಿಲ್ ಪರ ಸ್ಕೂಟರ್‍ನಲ್ಲಿ ಪ್ರಚಾರ ಮಾಡುವ ವೇಳೆ ಹೆಲ್ಮೆಟ್ ಧರಿಸದ ಶಾಸಕಿ ಯು. ಪ್ರತಿಭಾ ಅವರಿಗೆ ದಂಡ ವಿಧಿಸಲಾಗಿದೆ. ಹೆಲ್ಮೆಟ್ ಧರಿಸಿದ ವಾಹನ ಚಲಾಯಿಸಿದ್ದಕ್ಕಾಗಿ ಕಾಯಂಕುಳಂ ಪೊಲೀಸ್ ಠಾಣೆಯಲ್ಲಿ ಪ್ರತಿಭಾ ₹100  ದಂಡ ಪಾವತಿಸಿದ್ದಾರೆ.

ಆಂದೋಲನಕ್ಕೆ ಪಿಣರಾಯಿ ಚಾಲನೆ

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸಾಮಾಜಿಕ ಸುಧಾರಕ ಅಯ್ಯಂಗಾಳಿ ಪ್ರತಿಮೆಗೆ ಮಾಲೆ ಅರ್ಪಿಸುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿದರು.

ಶತಮಾನಗಳಷ್ಟು ಹಳೆಯದಾದ ಮೌಢ್ಯ, ಕಂದಾಚಾರಗಳಿಗೆ ಸಮಾಜವನ್ನು ನೂಕಲು ಯತ್ನಿಸುತ್ತಿರುವ ಶಕ್ತಿಗಳಿಂದ ಕೇರಳವನ್ನು ರಕ್ಷಿಸಲು ಮಹಿಳಾ ಗೋಡೆ ನಿರ್ಮಿಸಲಾಗಿದೆ ಎಂದು ಪಿಣರಾಯಿ ತಿಳಿಸಿದರು.

ಜಾತಿಭೇದ ಮರೆತು ಸಮಾಜದ ಎಲ್ಲ ವರ್ಗದ ಮಹಿಳೆಯರು ಆಂದೋಲನದಲ್ಲಿ ಭಾಗವಹಿಸಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

***

*ಸಿಪಿಎಂ ಪಾಲಿಟ್‌ ಬ್ಯುರೊ ಸದಸ್ ಬೃಂದಾ ಕಾರಟ್‌,  ಸಚಿವೆ ಕೆ.ಕೆ. ಶೈಲಜಾ ಅವರು ಮಹಿಳಾ ಗೋಡೆಯ ಭಾಗವಾಗಿದ್ದರು.

*ಶಾಲೆ, ಕಾಲೇಜುಗಳಿಗೆ ಅರ್ಧ ದಿನ ರಜೆ ನೀಡಲಾಗಿತ್ತು. ಮಂಗಳವಾರ ನಡೆಯಬೇಕಿದ್ದ ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮೂಂದೂಡಲಾಗಿದೆ.

*ಮಾನವ ಗೋಡೆ ಬೆಂಬಲಿಸಿ ದೆಹಲಿಯ ಕೇರಳ ಭವನದ ಎದುರು ರಾಷ್ಟ್ರೀಯ ಭಾರತೀಯ ಮಹಿಳಾ ಒಕ್ಕೂಟದ ಸದಸ್ಯರು ಪ್ರದರ್ಶನ ನಡೆಸಿದರು.

* ಲಕ್ಷಾಂತರ ಮಹಿಳೆಯರು ನಿರ್ಮಿಸಿದ 620 ಕಿ.ಮೀ ಉದ್ದದ ಮಹಿಳಾ ಗೋಡೆ ಗಿನ್ನೆಸ್‌ ದಾಖಲೆ ಪುಸ್ತಕ ಸೇರುವ ನಿರೀಕ್ಷೆ ಇದೆ.

 

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !