ಬಿಹಾರ: ಹಳಿ ತಪ್ಪಿದ ಸೀಮಾಂಚಲ ಎಕ್ಸ್‌ಪ್ರೆಸ್‌, ಆರು ಸಾವು

7

ಬಿಹಾರ: ಹಳಿ ತಪ್ಪಿದ ಸೀಮಾಂಚಲ ಎಕ್ಸ್‌ಪ್ರೆಸ್‌, ಆರು ಸಾವು

Published:
Updated:

ಪಟ್ನಾ: ವೈಶಾಲಿ ಜಿಲ್ಲೆಯ ಸಹದೇಯಿ ಬುಜುರ್ಗ್‌ ಎಂಬಲ್ಲಿ ಸೀಮಾಂಚಲ ಎಕ್ಸ್‌ಪ್ರೆಸ್‌ ರೈಲು ಹಳಿತಪ್ಪಿದ ಪರಿಣಾಮ ಆರು ಪ್ರಯಾಣಿಕರು ಮೃತಪಟ್ಟಿದ್ದಾರೆ. 

ಬಿಹಾರದ ಜೋಗ್ಬನಿಯಿಂದ ದೆಹಲಿಯ ಆನಂದ್‌ ವಿಹಾರ ಟರ್ಮಿನಲ್‌ಗೆ ಹೊರಟಿದ್ದ ರೈಲು 340 ಕಿ.ಮೀ. ಕ್ರಮಿಸಿದ್ದಾಗ, ಪೂರ್ವ ಕೇಂದ್ರ ರೈಲ್ವೆಯ ಸೋನೆಪುರ ವಿಭಾಗೀಯ ವ್ಯಾಪ್ತಿಯಲ್ಲಿ ಭಾನುವಾರ ಬೆಳಗಿನ ಜಾವ 4 ಗಂಟೆಗೆ ಅಪಘಾತ ಸಂಭವಿಸಿದೆ. 40 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. 

ಹಳಿ ತುಂಡಾಗಿರುವುದು ಅಪಘಾತಕ್ಕೆ ಕಾರಣವೆಂದು ಮೇಲ್ನೋಟಕ್ಕೆ ಕಂಡುಬಂದಿದೆ. ಒಂದು ಎ.ಸಿ., ಮೂರು ಸ್ಲೀಪರ್ ಬೋಗಿಗಳು ಸೇರಿದಂತೆ 11 ಬೋಗಿಗಳು ಹಳಿ ತಪ್ಪಿವೆ ಎಂದು ಪೂರ್ವ ಕೇಂದ್ರ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

ದುರಂತ ಸ್ಥಳದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರು ಮತ್ತು ಆಹಾರದ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಿತ್ತು. ರಕ್ಷಣಾ ಕಾರ್ಯಕ್ಕೆ ಸ್ಥಳೀಯರು ನೆರವು ನೀಡಿದರು.

ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ₹1ಲಕ್ಷ, ಸಣ್ಣಪುಟ್ಟ ಗಾಯಗೊಂಡವರಿಗೆ ₹50 ಸಾವಿರ ಪರಿಹಾರವನ್ನು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಘೋಷಿಸಿದ್ದಾರೆ.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮೃತರ ಕುಟುಂಬಕ್ಕೆ ₹ 4 ಲಕ್ಷ ಘೋಷಿಸಿದ್ದಾರೆ.

ಜೋಗಬನೀ–ಆನಂದ್‌ ವಿಹಾರ್‌ ಟರ್ಮಿನಲ್‌ ಸೀಮಾಂಚಲ್‌ ಎಕ್ಸ್‌ಪ್ರೆಸ್‌ 12487 ರೈಲಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಆರು ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, 24ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದ್ದಾರೆ. 

ಸೋನ್‌ಪುರ್‌ ಹಾಗೂ ಬರೌನಿಯಿಂದ ವೈದ್ಯರ ತಂಡ ಅಪಘಾತ ನಡೆದಿರುವ ಸ್ಥಳಕ್ಕೆ ತೆರಳಿದ್ದಾರೆ. ಅಪಘಾತ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಕಾರಿಯಾಗುವ ರೈಲು ಸಹ ಸ್ಥಳಕ್ಕೆ ತೆರಳಿದೆ. 

ರೈಲ್ವೆ ಸಹಾಯವಾಣಿ ಸಂಖ್ಯೆ: ಸೋನ್‌ಪುರ್‌– 06158221645, ಹಾಜಿಪುರ್‌– 06224272230 ಹಾಗೂ ಬರೌನಿ– 06279232222

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 6

  Sad
 • 0

  Frustrated
 • 1

  Angry

Comments:

0 comments

Write the first review for this !