ಶನಿವಾರ, ಜೂನ್ 19, 2021
22 °C
ನ್ಯಾಯಮೂರ್ತಿ ಚಂದ್ರಚೂಡ್‌ ಭಿನ್ನ ತೀರ್ಪು

ಬಂಧನದ ಉದ್ದೇಶ ಭಿನ್ನಮತ ದಮನ: ಚಂದ್ರಚೂಡ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಕ್ಸಲ್‌ ನಂಟು ಮತ್ತು ಭೀಮಾ–ಕೋರೆಗಾಂವ್‌ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದಲ್ಲಿ ಐವರನ್ನು ಬಂಧಿಸಿರುವುದರ ಉದ್ದೇಶ ಭಿನ್ನಮತವನ್ನು ಹತ್ತಿಕ್ಕುವುದೇ ಆಗಿದೆ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ತೀರ್ಪು ನೀಡಿದ್ದಾರೆ.

ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠದ ತೀರ್ಪಿನಲ್ಲಿ ಚಂದ್ರಚೂಡ್‌ ಅವರದ್ದು ಭಿನ್ನಮತದ ತೀರ್ಪು. 

ಭಿನ್ನಮತವನ್ನು ಹತ್ತಿಕ್ಕುವುದಕ್ಕಾಗಿಯೇ ಈ ಐವರನ್ನು ಬಂಧಿಸಲಾಗಿದೆ. ಭಿನ್ನಮತ ಎಂಬುದು ಚಲನಶೀಲ ಪ್ರಜಾತಂತ್ರದ ಸಂಕೇತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸರಿಯಾದ ತನಿಖೆ ನಡೆಸದೆಯೇ ಐವರು ಬಂಧಿತರ ವಿಚಾರಣೆಯನ್ನು ಮುಂದುವರಿಸಿದರೆ ಸಂವಿಧಾನ ನೀಡಿದ ಸ್ವಾತಂತ್ರ್ಯಕ್ಕೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ. ಬಂಧಿತರ ಪರವಾಗಿ ಸಲ್ಲಿಸಿದ ಅರ್ಜಿಯಲ್ಲಿ ತಥ್ಯ ಇದೆ ಎಂದು ಚಂದ್ರಚೂಡ್‌ ಹೇಳಿದ್ದಾರೆ. ಮಾಧ್ಯಮ ಗೋಷ್ಠಿ ನಡೆಸಿ, ಪತ್ರಗಳನ್ನು ಮಾಧ್ಯಮಗಳಿಗೆ ನೀಡಿದ ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುಧಾ ಭಾರದ್ವಾಜ್‌ ಅವರು ಬರೆದಿದ್ದಾರೆ ಎನ್ನಲಾದ ಪತ್ರಗಳನ್ನು ಸುದ್ದಿ ವಾಹಿನಿಗಳಲ್ಲಿ ತೋರಿಸಲಾಗಿದೆ. ತನಿಖೆಯ ಕೆಲವು ಮಾಹಿತಿಯನ್ನು ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಮಾಹಿತಿಯನ್ನು ಆಯ್ದು ಮಾಧ್ಯಮಕ್ಕೆ ತಿಳಿಸಿರುವುದೇ ನ್ಯಾಯಯುತ ತನಿಖೆ ನಡೆಯಬಹುದು ಎಂಬ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಎಸ್‌ಐಟಿ ಮೂಲಕ ತನಿಖೆ ನಡೆಸಲು ಸೂಕ್ತವಾದ ಪ್ರಕರಣ ಇದು. ಅಷ್ಟೇ ಅಲ್ಲ, ಎಸ್‌ಐಟಿ ತನಿಖೆಯು ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿಯೇ ನಡೆಯಬೇಕು ಎಂದೂ ಅವರು ಹೇಳಿದ್ದಾರೆ. 

ತನಿಖೆಯು ನ್ಯಾಯಯುತವಾಗಿ ನಡೆಯುತ್ತಿಲ್ಲ ಎಂದು ಅನಿಸಿದರೆ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಬೇಕು ಎಂದಿರುವ ಅವರು, ಇಸ್ರೊ ಗೂಢಚಾರಿಕೆ ಆರೋಪದ ನಂಬಿ ನಾರಾಯಣನ್‌ ಪ್ರಕರಣವನ್ನು ಅವರು ಉಲ್ಲೇಖಿಸಿದ್ದಾರೆ. ಯಾವುದೇ ತಪ್ಪು ಎಸಗದ ನಾರಾಯಣನ್‌ ಅವರನ್ನು ಬಂಧಿಸಿದ್ದು ಅನ್ಯಾಯ ಎಂಬುದು ಸಾಬೀತಾಯಿತು ಮತ್ತು ಅವರಿಗೆ ಸುಪ್ರೀಂ ಕೋರ್ಟ್‌ ₹50 ಲಕ್ಷ ಪರಿಹಾರವನ್ನೂ ಕೊಟ್ಟಿತು ಎಂಬುದರತ್ತ ಚಂದ್ರಚೂಡ್‌ ಬೆಳಕು ಚೆಲ್ಲಿದ್ದಾರೆ. 

ಈ ಪ್ರಕರಣವನ್ನು ಹದ್ದಿನ ಕಣ್ಣಿನಿಂದ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ ಸೆ. 19ರಂದು ಹೇಳಿತ್ತು. ಊಹೆಯ ಆಧಾರದಲ್ಲಿ ಜನರು ಸ್ವಾತಂತ್ರ್ಯ ಮೊಟಕಗೊಳಿಸಲು ಅವಕಾಶ ಇಲ್ಲ ಎಂದೂ ಹೇಳಿತ್ತು. 

ವಿರೋಧ ಮತ್ತು ಭಿನ್ನಮತ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಮತ್ತು ಸರ್ಕಾರವನ್ನು ಉರುಳಿಸುವ ಯತ್ನಗಳ ನಡುವೆ ಬಹಳ ಸ್ಪಷ್ಟವಾದ ವ್ಯತ್ಯಾಸ ಇದೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಹೇಳಿತ್ತು. 

ಇಡೀ ಪ್ರಕರಣವೇ ಕಟ್ಟುಕತೆ. ಹಾಗಾಗಿ ಎಲ್ಲ ಐವರು ಬಂಧಿತರಿಗೆ ರಕ್ಷಣೆ ಒದಗಿಸಬೇಕು ಎಂದು ಅರ್ಜಿದಾರರ ಪರ ವಾದಿಸಿದ್ದ ಹಿರಿಯ ವಕೀಲರಾದ ಆನಂದ್‌ ಗ್ರೋವರ್‌, ಅಶ್ವಿನಿ ಕುಮಾರ್‌ ಪ್ರಶಾಂತ್‌ ಭೂಷಣ್‌ ವಾದಿಸಿದ್ದರು. ಸೆ. 20ರಂದು ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿತ್ತು.

**

ಬಹುಮತದ ತೀರ್ಪು

ತನಿಖಾಧಿಕಾರಿಯು ಕಾನೂನು ಪ್ರಕಾರ ತಮ್ಮ ತನಿಖೆಯನ್ನು ಮುಂದುವರಿಸಬಹುದು

ಭಿನ್ನಮತವನ್ನು ಹತ್ತಿಕ್ಕುವುದಕ್ಕಾಗಿಯೇ ಮಾನವ ಹಕ್ಕುಗಳ ಕಾರ್ಯಕರ್ತರು, ಪತ್ರಕರ್ತರು, ವಕೀಲರು ಮತ್ತು ರಾಜಕೀಯ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ ಎಂಬುದು ಅಸ್ಪಷ್ಟ ಮತ್ತು ಸಾಕಷ್ಟು ಪುರಾವೆ ಇಲ್ಲದ ಆರೋಪ

ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು ಆರೋಪಿಗಳ ಗೆಳೆಯರು ಸಲ್ಲಿಸಿದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಲಾಗದು

ಈಗ ಸಲ್ಲಿಸಲಾಗಿರುವ ಪುರಾವೆಗಳು ಸಮರ್ಪಕವೇ ಎಂಬುದನ್ನು ಹೇಳುವ ಹಂತ ಇದಲ್ಲ, ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಇದೆ

**

‘ಬಂಧನ ಸುಮ್ಮನೆ ಅಲ್ಲ’

ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಜತೆಗೆ ಬಂಧಿತರಿಗೆ ನಂಟು ಇದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುವಂತಹ ಪುರಾವೆಗಳು ಇವೆ. ಸೂಕ್ತ ನ್ಯಾಯಾಲಯದಿಂದ ಕಾನೂನು ಪರಿಹಾರ ಪಡೆದುಕೊಳ್ಳುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಬಂಧಿತರಿಗೆ ನಾಲ್ಕು ವಾರಗಳ ಸಮಯಾವಕಾಶ ಇದೆ. ಅದಕ್ಕಾಗಿ ಗೃಹಬಂಧನದ ಅವಧಿಯನ್ನು ನಾಲ್ಕು ವಾರ ವಿಸ್ತರಿಸಲಾಗಿದೆ ಎಂದು ಬಹುಮತದ ತೀರ್ಪು ಅಭಿಪ್ರಾಯಪಟ್ಟಿದೆ.

**

ಯುದ್ಧದ ವಿಜಯೋತ್ಸವ

* ಡಿಸೆಂಬರ್‌ 31, 2017: ಭೀಮಾ–ಕೋರೆಗಾಂವ್‌ ಯುದ್ಧದ 200ನೇ ವಿಜಯೋತ್ಸವ ಆಚರಣೆ ಪ್ರಯುಕ್ತ ಪುಣೆಯ ಬಳಿಯ ಶನಿವಾರ ವಾಡಾದಲ್ಲಿ ಎಲ್ಗಾರ್‌ ಪರಿಷತ್‌ ಹೆಸರಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು

ಜಾತಿ ಘರ್ಷಣೆಗೆ ನಾಂದಿ

* ಜನವರಿ 1, 2018: ಸಮಾವೇಶದ ಬೆನ್ನಲ್ಲೇ ಭೀಮಾ–ಕೋರೆಗಾಂವ್‌ ಬಳಿಯ ಸನಾಸ್‌ವಾಡಿಯಲ್ಲಿ ಎರಡು ಗುಂಪುಗಳ ನಡುವೆ ಭುಗಿಲೆದ್ದ ಜಾತಿ ಘರ್ಷಣೆ ಮತ್ತು ಹಿಂಸಾಚಾರಕ್ಕೆ ವ್ಯಕ್ತಿ ಬಲಿ. ಇದನ್ನು ಪ್ರತಿಭಟಿಸಿ ಮಹಾರಾಷ್ಟ್ರದಾದ್ಯಂತ ದಲಿತ ಸಂಘಟನೆಗಳ ಪ್ರತಿಭಟನೆ ಆರಂಭ

ಹೋರಾಟಗಾರರ ಬಂಧನ

* ಜೂನ್ 6: ಭೀಮಾ–ಕೋರೆಗಾಂವ್‌ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ದಲಿತ ಕಾರ್ಯಕರ್ತ ಸುಧೀರ್‌ ಧವಳೆ, ನಾಗಪುರ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥೆ ಶೋಮಾ ಸೇನ್‌, ಸಾಮಾಜಿಕ ಕಾರ್ಯಕರ್ತರಾದ ಮಹೇಶ್‌ ರಾವತ್‌, ರೋನಾ ವಿಲ್ಸನ್‌ ಅವರನ್ನು ಬಂಧಿಸಿದ ಪುಣೆಯ ಪೊಲೀಸರು

ಮತ್ತೆ ಐವರ ಸೆರೆ

* ಆಗಸ್ಟ್‌ 28: ದೇಶದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿದ ಪುಣೆಯ ಪೊಲೀಸರು ತೆಲುಗು ಕ್ರಾಂತಿಕಾರಿ ಕವಿ ವರವರ ರಾವ್‌, ಸಾಮಾಜಿಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರಾದ ಸುಧಾ ಭಾರದ್ವಾಜ್‌, ವರ್ನನ್‌ ಗೊನ್ಸಾಲ್ವೆಸ್, ಅರುಣ್‌ ಫೆರೇರಾ ಮತ್ತು ಗೌತಮ್‌ ನವ್‌ಲಾಖ್‌ ಅವರನ್ನು ಬಂಧಿಸಿದರು

ಬಂಧನ ಪ್ರಶ್ನಿಸಿ ಅರ್ಜಿ

* ಆಗಸ್ಟ್ 29: ಹೋರಾಟಗಾರರ ಬಂಧನ ಪ್ರಶ್ನಿಸಿ ಇತಿಹಾಸ ತಜ್ಞೆ ರೋಮಿಳಾ ಥಾಪರ್‌ ನೇತೃತ್ವದ ತಂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಸೆಪ್ಟೆಂಬರ್‌ 6ರವರೆಗೆ ಹೋರಾಟಗಾರರನ್ನು ಗೃಹಬಂಧನಕ್ಕೆ ಒಪ್ಪಿಸಲಾಯಿತು

ನಕ್ಸಲರ ನಂಟು ಆರೋಪ

* ಸೆಪ್ಟೆಂಬರ್‌ 5: ಹೋರಾಟಗಾರರಿಗೆ ಮಾವೊವಾದಿ ನಕ್ಸಲರ ಜತೆ ನಂಟು ಇರುವ ಬಗ್ಗೆ ತಮ್ಮ ಬಳಿ ಪ್ರಬಲ ಸಾಕ್ಷ್ಯಾಧಾರ ಇರುವುದಾಗಿ ಪುಣೆಯ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು

ಗೃಹಬಂಧನ ವಿಸ್ತರಣೆ

* ಸೆ.6: ಒಂದು ವಾರ ಗೃಹಬಂಧನ ವಿಸ್ತರಣೆ

* ಸೆ.12: ಸೆ.17ರವರೆಗೆ ಗೃಹಬಂಧನ

* ಸೆ.17: ಮತ್ತೆ ಎರಡು ದಿನ ಗೃಹಬಂಧನ

ಹದ್ದಿನ ಕಣ್ಣು, ಮಾನವೀಯ ಹೃದಯ

* ಸೆ.19: ಒಂದು ದಿನದ ಮಟ್ಟಿಗೆ ಹೋರಾಟಗಾರರ ಗೃಹಬಂಧನ ವಿಸ್ತರಣೆ. ಬಂಧನ ಪ್ರಕರಣವನ್ನು ಹದ್ದಿನ ಕಣ್ಣು ಮತ್ತು ಮಾನವೀಯ ಹೃದಯದಿಂದ ಪರಿಶೀಲಿಸುವುದಾಗಿ ಭರವಸೆ ನೀಡಿದ ಸುಪ್ರೀಂ ಕೋರ್ಟ್, ಸೂಕ್ತ ಸಾಕ್ಷ್ಯಾಧಾರ ಇಲ್ಲದಿದ್ದರೆ ಪ್ರಕರಣ ಕೈಬಿಡುವುದಾಗಿ ಎಚ್ಚರಿಕೆ ನೀಡಿತು. ತನಿಖೆಗೆ ಎಸ್‌ಐಟಿ ರಚಿಸುವ ಸುಳಿವು ನೀಡಿತು

ತೀರ್ಪು ಕಾಯ್ದಿರಿಸಿದ ಕೋರ್ಟ್

* ಸೆ.20: ಬಂಧನ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ತೀರ್ಪುನ್ನು ಕೋರ್ಟ್ ಕಾಯ್ದಿರಿಸಿತು

ಮಧ್ಯೆ ಪ್ರವೇಶಕ್ಕೆ ನಕಾರ

* ಸೆ.28: ಹೋರಾಟಗಾರರ ಬಂಧನ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಲು ಮತ್ತು ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ಸುಪ್ರೀಂ ಕೋರ್ಟ್ ನಕಾರ. ತ್ರಿಸದಸ್ಯ ಪೀಠದಲ್ಲಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಭಿನ್ನ ತೀರ್ಪು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು