ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಗುಂಗಿಗೆ ಗಾಯನ ಗಂಗೆ

ಕೊಪ್ಪಳದ ಧ್ವನಿಮುದ್ರಣ ಸ್ಟುಡಿಯೊಗಳಿಗೆ ಭರ್ಜರಿ ಬೇಡಿಕೆ
Last Updated 5 ಮೇ 2018, 13:09 IST
ಅಕ್ಷರ ಗಾತ್ರ

ಕೊಪ್ಪಳ: ಚುನಾವಣಾ ಪ್ರಚಾರ ಗೀತೆಗಳಿಗೆ ಧ್ವನಿಮುದ್ರಣ ಕೇಂದ್ರವಾಗಿ ನಗರ ಗಮನ ಸೆಳೆಯುತ್ತಿದೆ. ಇಲ್ಲಿ ಮೂರು ಪುಟ್ಟ ಕರೋಕೆ (KARAOKE) ಸ್ಟುಡಿಯೊಗಳಿವೆ. ಜಿಲ್ಲೆ ಸೇರಿದಂತೆ ರಾಯಚೂರು, ಬಳ್ಳಾರಿ, ಗದಗ, ಬಾಗಲಕೋಟೆ ಜಿಲ್ಲೆಗಳ ಕಲಾವಿದರು ಬಂದು ಧ್ವನಿಮುದ್ರಣ ಮಾಡುತ್ತಿದ್ದಾರೆ.

ಜನರು ಹೇಳುತಾರೆ... ನಮ್ಮ ಶಾಸಕ ನೀನೇ (ನೀನೇ ರಾಜಕುಮಾರ), ಇದು ನರೇಂದ್ರ ಮೋದಿ.... (ಅದು ಬ್ಯಾರೆನೆ ಐತಿ ಹಾಡು)–ಹೀಗೆ ಕನ್ನಡ, ಹಿಂದಿ ಚಿತ್ರಗೀತೆಗಳ ರಾಗಕ್ಕೆ ತಮ್ಮದೇ ಸಾಹಿತ್ಯ ಹೊಂದಿಸುತ್ತಾರೆ. ಸಿದ್ಧ ಹಿನ್ನೆಲೆ ಸಂಗೀತದ ಟ್ರ್ಯಾಕ್‌ಗೆ ತಕ್ಕಂತೆ ಹಾಡುತ್ತಾರೆ.  ಧ್ವನಿಮುದ್ರಿಸಿದ ಬಳಿಕ ಅದನ್ನು ವಾಟ್ಸ್ ಆಪ್‌, ಇ–ಮೇಲ್‌ ಮೂಲಕ ಸಂಬಂಧಿಸಿದ ನಾಯಕರಿಗೆ, ಅವರ ಕಚೇರಿಗೆ ರವಾನಿಸುತ್ತಾರೆ.

ಕಲಾವಿದರು ಹಾಗೂ ಸ್ಟುಡಿಯೋಗಳಿಗೆ ಒಂದು ತಿಂಗಳಿನಿಂದ ಭರ್ಜರಿ ಸಂಪಾದನೆ. ಚುನಾವಣೆಗೂ ಮುನ್ನ ಒಂದು ಹಾಡಿನ ಧ್ವನಿಮುದ್ರಣಕ್ಕೆ ₹ 500 ಪಡೆಯುತ್ತಿದ್ದ ಸ್ಟುಡಿಯೋಗಳು, ಈಗ ಆ ಮೊತ್ತವನ್ನು ₹ 1,500 ರಿಂದ 2,500ಕ್ಕೆ ಹೆಚ್ಚಿಸಿವೆ.

ಕಲಾವಿದರಲ್ಲಿ ಕೆಲವರು ತಮ್ಮ ನಾಯಕನ ಅಭಿಮಾನಕ್ಕಾಗಿ ಹಾಡುತ್ತಾರೆ. ಇನ್ನು ಕೆಲವರು ಇದನ್ನೇ ಸಂಪಾದನೆಯ ದಾರಿಯಾಗಿಸಿಕೊಂಡಿದ್ದಾರೆ.  ಜನಪದ ಶೈಲಿಯ ಹಾಡುಗಳು, ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ಹಾಡುಗಳು ಸಹಜವಾಗಿ ಜನಮನ ಸೆಳೆಯುತ್ತಿವೆ. ವಿವಿಧ ಪಕ್ಷಗಳ ಬಹಿರಂಗ ಪ್ರಚಾರದ ಧ್ವನಿವರ್ಧಕಗಳಲ್ಲಿ ಈ ಹಾಡುಗಳನ್ನು ಪ್ರಸಾರ ಮಾಡಲಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಇವು ಜನಪ್ರಿಯವೂ ಆಗಿವೆ. ಕಾಂಗ್ರೆಸ್‌ ವಿರುದ್ಧ ಟೀಕೆಗೆ ಬಿಜೆಪಿ, ಇಂದಿರಾಗಾಂಧಿ ಅವರ ಹೆಸರು ಬಳಸಿ ಹಾಡು ಕಟ್ಟಿದೆ. ಬಿಜೆಪಿ ವಿರುದ್ಧ ಟೀಕಿಸಲು ಮೋದಿ, ಬಿ.ಎಸ್‌.ಯಡಿಯೂರಪ್ಪ ಅವರನ್ನು ಹಾಡುಗಳ ಮೂಲಕ ಲೇವಡಿ ಮಾಡಲಾಗಿದೆ. ಹಾಡು ಕಟ್ಟುವಲ್ಲಿ ಪಕ್ಷೇತರ, ಕಮ್ಯೂನಿಸ್ಟ್‌ ಪಕ್ಷಗಳೂ ಹಿಂದೆ ಬಿದ್ದಿಲ್ಲ.

ಕೊಪ್ಪಳವೇ ಏಕೆ?: 'ಸ್ಟುಡಿಯೋಗಳು ಹುಬ್ಬಳ್ಳಿ, ಬೆಂಗಳೂರಿನಲ್ಲೂ ಇವೆ. ಆದರೆ, ಅಲ್ಲಿ ಒಂದು ಹಾಡಿನ ಧ್ವನಿಮುದ್ರಣಕ್ಕೆ ಕನಿಷ್ಠ ₹ 4 ಸಾವಿರ ಕೊಡಬೇಕು. ಜತೆಗೆ ಪ್ರಯಾಣ, ಇತರ ಖರ್ಚು ಇರುತ್ತದೆ. ಅದಕ್ಕಾಗಿ ನಾವು ಇಲ್ಲಿಯೇ ಧ್ವನಿಮುದ್ರಣ ಮಾಡಿಸಿಕೊಳ್ಳುತ್ತೇವೆ. ಅದೇ ತಂತ್ರಜ್ಞಾನ, ಕಂಪ್ಯೂಟರೀಕೃತ ಸಂಕಲನ ವ್ಯವಸ್ಥೆ, ಗುಣಮಟ್ಟ ಇಲ್ಲಿದೆ' ಎನ್ನುತ್ತಾರೆ ಕಲಾವಿದರು.

ಉಳಿದೆಲ್ಲಾ ಅಲ್ಬಂಗಳಲ್ಲಿ ತಮ್ಮ ಹೆಸರು ಹಾಕಿಸಿಕೊಳ್ಳುವ ಕಲಾವಿದರು ಚುನಾವಣಾ ಪ್ರಚಾರ ಗೀತೆಗಳಲ್ಲಿ ಮಾತ್ರ ಅಜ್ಞಾತರಾಗಿಯೇ ಉಳಿಯಲು ಬಯಸುತ್ತಾರೆ. ನೀತಿ ಸಂಹಿತೆ, ಚುನಾವಣಾ ವೆಚ್ಚ ವೀಕ್ಷಕರ ನಿಗಾ ಆತಂಕವೂ ಅವರನ್ನು ಕಾಡುತ್ತಿದೆ. ಮಾತ್ರವಲ್ಲ, ಒಬ್ಬ ಅಭ್ಯರ್ಥಿ ಪರ ಹಾಡಿದ ಕಲಾವಿದನಿಗೆ ಇನ್ನೊಬ್ಬ ಅಭ್ಯರ್ಥಿಯಿಂದ ಬೇಡಿಕೆ ಬರದಿರಬಹುದು ಅಥವಾ ಒಂದು ಪಕ್ಷದ ಪರ ಇದ್ದಾನೆ ಎಂದು ಭಾವಿಸುವ ಸಾಧ್ಯತೆ ಇದೆ ಎಂಬ ಆತಂಕ ಕಲಾವಿದರದ್ದು.

**
ಸುಮಾರು 10 ದಿನಗಳಿಂದ ಚುನಾವಣಾ ಪ್ರಚಾರ ಗೀತೆಗಳ ಧ್ವನಿಮುದ್ರಣ ನಡೆಯುತ್ತಿದೆ. ನಿರಂತರ ಬೇಡಿಕೆಯೂ ಹೆಚ್ಚಿದೆ
– ಶಿವಕುಮಾರ್‌ ಮಠಪತಿ,ಸ್ಟಾರ್‌ ಕರೋಕೆ ಸ್ಟುಡಿಯೊ ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT