ಮಂಗಳವಾರ, ಜನವರಿ 21, 2020
27 °C
ರಾಜ್ಯಸಭೆಗೆ ಪೌರತ್ವ ತಿದ್ದುಪ‍ಡಿ ಮಸೂದೆಗೂ ಮುನ್ನ ಎಚ್ಚರಿಕೆ

ದೇಶದ ಬಗ್ಗೆ ಬಿಜೆಪಿಗೆ ಮಾತ್ರ ಕಾಳಜಿ ಎಂಬುದು ಭ್ರಮೆ; ಶಿವಸೇನಾ ಗುಡುಗು

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ

ಮುಂಬೈ: ಲೋಕಸಭೆಯಲ್ಲಿ ವಿರೋಧ ಪಕ್ಷಗಳ ವಿರೋಧದ ನಡುವೆಯೂ ತಡರಾತ್ರಿ ಅನುಮೋದನೆ ದೊರೆತಿರುವ ಪೌರತ್ವ (ತಿದ್ದುಪಡಿ) ಮಸೂದೆ ನಾಳೆ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಇದರ ಬೆನ್ನಲೇ ದೇಶದ ಹಲವು ಕಡೆ ಹಾಗೂ ವಿದೇಶದಿಂದಲೂ ವಿರೋಧ ವ್ಯಕ್ತವಾಗುತ್ತಿದ್ದು, ಬಿಜೆಪಿಯ ಮಾಜಿ ಮೈತ್ರಿ ಪಕ್ಷ ಶಿವಸೇನಾ ಸಹ ಗುಡುಗಿದೆ. 

ಈಗಾಗಲೇ ತಿಳಿಸಿರುವ ಅಗತ್ಯ ಬದಲಾವಣೆಗಳು ಆಗದೆಯೇ ಪೌರತ್ವ (ತಿದ್ದುಪಡಿ) ಮಸೂದೆ ಅಂಗೀಕಾರಕ್ಕೆ ನಾವು ಬೆಂಬಲ ವ್ಯಕ್ತಪಡಿಸುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಕಠಿಣ ಎಚ್ಚರಿಕೆ ನೀಡಿದ್ದಾರೆ. 

'ಮಸೂದೆಯ ಕುರಿತು ಯಾವುದೇ ನಾಗರಿಕನಲ್ಲಿ ಹೆದರಿಕೆ ಉಂಟಾಗಿದ್ದರೆ, ಅವರ ಎಲ್ಲ ಗೊಂದಲಗಳನ್ನು ಮೊದಲು ಪರಿಹರಿಸಬೇಕು. ಅವರು ನಮ್ಮ ಪ್ರಜೆಗಳಾಗಿದ್ದು, ಅವರ ಪ್ರಶ್ನೆಗಳಿಗೂ ಉತ್ತರಿಸುವುದು ಅತ್ಯಗತ್ಯ. ಯಾರೇ ಒಬ್ಬ ವ್ಯಕ್ತಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಎಂದರೆ ಆತ 'ದೇಶದ್ರೋಹಿ' ಎಂಬುದು ಅವರ ಭ್ರಮೆಯಾಗಿದೆ. ಪೌರತ್ವ ತಿದ್ದುಪಡಿ ಮಸೂದೆಗೆ ಕೆಲವು ಬದಲಾವಣೆಗಳ ಸಲಹೆಗಳನ್ನು ನಾವು ನೀಡಿದ್ದೇವೆ. ದೇಶದ ಬಗ್ಗೆ ಕೇವಲ ಬಿಜೆಪಿ ಮಾತ್ರವೇ ಕಾಳಜಿ ಹೊಂದಿದೆ ಎಂಬುದೂ ಸಹ ಭ್ರಮೆ' ಎಂದಿದ್ದಾರೆ.

ಇದನ್ನೂ ಓದಿ: Explainer | ಏನಿದು ಪೌರತ್ವ ತಿದ್ದುಪಡಿ ಮಸೂದೆ?

ಸೋಮವಾರ ಗೃಹ ಸಚಿವ ಅಮಿತ್‌ ಶಾ ತಿದ್ದುಪಡಿ ಮಸೂದೆಯನ್ನು ಲೋಕಸಭೆಯ ಮುಂದಿಟ್ಟಾಗ ಶಿವಸೇನಾ ಬೆಂಬಲ ವ್ಯಕ್ತಪಡಿಸಿತ್ತು. ಅದರೊಂದಿಗೆ ಕೆಲವು ಬದಲಾವಣೆಗಳನ್ನೂ ತರುವಂತೆ ಸಲಹೆ ನೀಡಿತು. ಶ್ರೀಲಂಕಾದಿಂದ ಬಂದವರು ಸೇರಿದಂತೆ ಯಾವುದೇ ವಲಸಿಗರಿಗೂ 25 ವರ್ಷಗಳ ವರೆಗೂ ಮತದಾನದ ಹಕ್ಕು ನೀಡದಿರುವುದು ಸೇರಿದಂತೆ ಕೆಲವು ಬದಲಾವಣೆಗಳನ್ನು ತರುವಂತೆ ಸಲಹೆ ನೀಡಿದೆ. 

ಪೌರತ್ವ ತಿದ್ದುಪಡಿ ಮಸೂದೆಯು ಬುಧವಾರ 245 ಸದಸ್ಯರಿರುವ ರಾಜ್ಯಸಭೆಯ ಮುಂದೆ ಬರಲಿದ್ದು, ಮಸೂದೆ ಅಂಗೀಕಾರಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಕನಿಷ್ಠ 123 ರಾಜ್ಯಸಭಾ ಸದಸ್ಯರ ಬೆಂಬಲ ಅಗತ್ಯವಿದೆ. 

ಇದನ್ನೂ ಓದಿ: 

ರಾಜ್ಯಸಭೆಯಲ್ಲಿ ಬಿಜೆಪಿಯ 83 ಸದಸ್ಯರನ್ನು ಒಳಗೊಂಡಂತೆ ಜನತಾ ದಳ(ಯು)ದ ಆರು, ಶಿರೋಮಣಿ ಅಕಾಲಿ ದಳದ ಮೂವರು, ಎಲ್‌ಜೆಪಿ ಮತ್ತು ಆರ್‌ಪಿಐ(ಎ) ತಲಾ ಒಬ್ಬರು ಹಾಗೂ 11 ನಾಮನಿರ್ದೇಶಿತ ಸದಸ್ಯರು ಸೇರಿ ಎನ್‌ಡಿಎ ಸದಸ್ಯರ ಸಂಖ್ಯೆ 105. ತಮಿಳುನಾಡಿನ ಎಐಎಡಿಎಂಕೆಯ 11 ಸದಸ್ಯರ ಬೆಂಬಲ ಪಡೆಯಲು ಬಿಜೆಪಿ ಮಾತುಕತೆ ನಡೆಸಿದೆ. ಇದರೊಂದಿಗೆ ಏಳು ಸದಸ್ಯರನ್ನು ಹೊಂದಿರುವ ಬಿಜು ಜನತಾ ದಳ (ಬಿಜೆಡಿ), ತಲಾ  ಇಬ್ಬರು ಸದಸ್ಯರನ್ನು ಹೊಂದಿರುವ ವೈಎಸ್‌ಆರ್‌ ಕಾಂಗ್ರೆಸ್‌ ಹಾಗೂ ತೆಲುಗು ದೇಶಂ ಪಾರ್ಟಿ ಮುಖಂಡರೊಂದಿಗೆ ಮಸೂದೆಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದೆ. 

ಲೋಕಸಭೆಯಲ್ಲಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ ಪಕ್ಷಗಳನ್ನು ಟೀಕಿಸಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, 'ಪೌರತ್ವ ತಿದ್ದುಪಡಿ ಮಸೂದೆಯು ಭಾರತದ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿಯಾಗಿದೆ. ಅದನ್ನು ಬೆಂಬಲಿಸುತ್ತಿರುವವರು ದೇಶದ ಬುನಾದಿಯನ್ನು ಹಾಳು ಕೆಡವಲು ಮುಂದಾದಂತೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 

ಇದನ್ನೂ ಓದಿ: 

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪ್ರೌರತ್ವ ನೀಡುವುದನ್ನು ತಿದ್ದುಪಡಿ ಮಸೂದೆ ಒಳಗೊಂಡಿದೆ. ಲೋಕಸಭೆಯಲ್ಲಿದ್ದ 391 ಸದಸ್ಯರ ಪೈಕಿ 311 ಮತಗಳು ಪೌರತ್ವ ತಿದ್ದುಪಡಿ ಮಸೂದೆಯ ಪರವಾಗಿ ದಾಖಲಾದರೆ, 80 ಮತಗಳು ವಿರುದ್ಧ ಬಂದವು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು