ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನಯಾನ: ಗರಿಷ್ಠ ಅವಧಿಯ ಪ್ರಯಾಣಕ್ಕೆ ₹3,500–₹10,000, 3 ತಿಂಗಳು ದರ ನಿಗದಿ

Last Updated 21 ಮೇ 2020, 11:57 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ಸೋಂಕು ವ್ಯಾಪಿಸದಂತೆ ತಡೆಯುವ ನಿಟ್ಟಿನಲ್ಲಿ ರದ್ದು ಪಡಿಸಲಾಗಿದ್ದ ನಾಗರಿಕ ವಿಮಾನಗಳ ಹಾರಾಟ, ಇದೇ ಮೇ 25ರಿಂದ ಪುನರಾರಂಭಗೊಳ್ಳಲಿದೆ. ವಿಮಾನಯಾನ ಸಂಸ್ಥೆಗಳಿಗೆ ಟಿಕೆಟ್‌ ದರ ಮಾರ್ಗಸೂಚಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ಪ್ರಕಟಿಸಿದ್ದು, ಮುಂದಿನ ಮೂರು ತಿಂಗಳ ವರೆಗೂ ಇದೇ ದರ ಪಟ್ಟಿಯನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ವಿಮಾನ ಹಾರಾಟ ಅವಧಿಯನ್ನು 7 ವರ್ಗಗಳಾಗಿ ವಿಂಗಡಿಸಲಾಗಿದೆ. 30 ನಿಮಿಷಗಳ ವರೆಗಿನ ಹಾರಾಟ, 30–60 ನಿಮಿಷಗಳು, 60–90 ನಿಮಿಷಗಳು, 90–120 ನಿಮಿಷಗಳು, 120–150 ನಿಮಿಷಗಳು, 150–180 ನಿಮಿಷಗಳು ಹಾಗೂ 180–210 ನಿಮಿಷಗಳಾಗಿ ವರ್ಗೀಕರಿಸಲಾಗಿದೆ. ಟಿಕೆಟ್‌ ದರ ಕನಿಷ್ಠ ₹3,500ರಿಂದ ಗರಿಷ್ಠ ₹10,000 ನಿಗದಿ ಪಡಿಸಿರುವುದಾಗಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

ವಿಮಾನಯಾನ ಸಂಸ್ಥೆಗಳ ಮೂರನೇ ಒಂದು ಭಾಗದಷ್ಟು ವಿಮಾನಗಳು ಕಾರ್ಯಾಚರಣೆಗೆ ಅವಕಾಶ ನೀಡಲಾಗಿದ್ದು, ಆಗಸ್ಟ್‌ 24ರ ವರೆಗೂ ಸರ್ಕಾರ ನಿಗದಿ ಪಡಿಸಿರುವ ದರ ಚಾಲ್ತಿಯಲ್ಲಿರುತ್ತದೆ. ವಿಮಾನಯಾನದ ಶೇ 40ರಷ್ಟು ಸೀಟುಗಳಿಗೆ ನಿಗದಿ ಪಡಿಸಿರುವ ದರ ಮಿತಿಯೊಳಗಿನ ಮಧ್ಯದ ದರದಲ್ಲಿ ಟಿಕೆಟ್‌ ನೀಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ತಿಳಿಸಿದ್ದಾರೆ.

ಉದಾಹರಣೆಗೆ, ದೆಹಲಿ–ಮುಂಬೈ ನಡುವಿನ ಪ್ರಯಾಣಕ್ಕೆ ಕನಿಷ್ಠ ದರ ₹3,500 ಹಾಗೂ ಗರಿಷ್ಠ ₹10,000 ನಿಗದಿಯಾದರೆ; ಇದರಲ್ಲಿ ಮಧ್ಯದ ದರ ₹6,700 ಆಗುತ್ತದೆ. ಶೇ 40ರಷ್ಟು ಸೀಟುಗಳಿಗೆ ಇದೇ ದರದಲ್ಲಿ ಟಿಕೆಟ್‌ ವಿತರಿಸಬೇಕು. ಪ್ರಯಾಣ ದರ ಅನಿಯಂತ್ರಿತಗೊಳ್ಳದಂತೆ ದರ ನಿಗದಿಸಲಾಗಿದೆ ಎಂದಿದ್ದಾರೆ.

ವಿಮಾನಯಾದೊಳಗೆ ಆಹಾರ ಪದಾರ್ಥಗಳನ್ನು ನೀಡುವಂತಿಲ್ಲ ಹಾಗೂ ಪ್ರತಿ ಪ್ರಯಾಣಿಕರಿಗೂ ಉಷ್ಣಾಂಶ ಪರೀಕ್ಷೆ ನಡೆಸಬೇಕು. ವಿಮಾನಯಾನ ಸಿಬ್ಬಂದಿ ಸೂಕ್ತ ರಕ್ಷಣಾ ಕವಚಗಳನ್ನು ಧರಿಸಿರಬೇಕು ಎಂದು ಸರ್ಕಾರ ಸೂಚಿಸಿದೆ.

ಸೋಮವಾರದಿಂದ ಕೆಲವು ವಿಮಾನಗಳ ಕಾರ್ಯಾಚರಣೆ ಪುನರಾರಂಭಗೊಳ್ಳಲಿದ್ದು, ವಿಮಾನದಲ್ಲಿ ಮಧ್ಯದ ಸೀಟ್‌ಗಳನ್ನು ಖಾಲಿ ಬಿಡುವ ನಿರ್ಧಾರ ಪ್ರಕಟಿಸಿಲ್ಲ. ಹಾಗಾಗಿ, ವಿಮಾನ ಪ್ರಯಾಣದಲ್ಲಿ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿದೆ.

ದೇಶದ ಆರ್ಥಿಕತೆಯ ಪ್ರಮುಖ ನೆಲೆಗಳಾಗಿರುವ ಮುಂಬೈ, ದೆಹಲಿ ಹಾಗೂ ಅಹಮದಾಬಾದ್‌ನಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಮಾಣ ಅಧಿಕ ಮಟ್ಟದಲ್ಲಿದೆ. ನಿತ್ಯದ ಕೋವಿಡ್‌–19 ಪ್ರಕರಣಗಳ ಸಂಖ್ಯೆ 5,000 ದಾಟುತ್ತಿದ್ದು, ಇದೇ ಪರಿಸ್ಥಿತಿಯಲ್ಲಿ ಹಂತ ಹಂತವಾಗಿ ವಿಮಾನ ಪ್ರಯಾಣ ಆರಂಭಿಸಲು ಸರ್ಕಾರ ನಿರ್ಧರಿಸಿದೆ.

ಮೇ 25ರಿಂದ ಇಂಡಿಗೊ, ಸ್ಪೈಸ್‌ಜೆಟ್‌, ವಿಸ್ತಾರಾ ಹಾಗೂ ಏರ್‌ ಇಂಡಿಯಾ ವಿಮಾನಗಳು ಹಾರಾಟ ಆರಂಭಿಸಲಿವೆ.

ಆರೋಗ್ಯ ಅಥವಾ ವಯಸ್ಸಿನ ಕಾರಣಗಳಿಂದಾಗಿ ಟಿಕೆಟ್‌ ಬುಕ್‌ ಆಗಿರುವ ದಿನದಂದು ಪ್ರಯಾಣಕ್ಕೆ ಅವಕಾಶ ಸಿಗದಿದ್ದರೆ, ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ಅವರಿಗೆ ಮತ್ತೊಂದು ಪ್ರಯಾಣದ ದಿನ ನಿಗದಿ ಪಡಿಸಿಕೊಡಬೇಕು ಎಂದು ಸಚಿವಾಲಯ ಹೇಳಿದೆ.

ಪ್ರಯಾಣಿಕರು ಮೊಬೈಲ್‌ನಲ್ಲಿ ಆರೋಗ್ಯ ಸೇತು ಆ್ಯಪ್ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ ಹಾಗೂ ಕೊರೊನಾ ಸೋಂಕು ಹೆಚ್ಚಿರುವ ಕೆಂಪು ವಲಯದಿಂದ ಬಂದಿರುವವರಾಗಿದ್ದರೆ ಅವರ ಪ್ರಯಾಣಕ್ಕೆ ಅವಕಾಶ ಸಿಗುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಅಂತರ್ಜಾಲದ ಮೂಲಕ ಚೆಕ್‌–ಇನ್‌ ಮಾಡುವುದು ಹಾಗೂ ವಿಮಾನ ಪ್ರಯಾಣದ ಅವಧಿಗಿಂತ ಕನಿಷ್ಠ 2 ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪಿರುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT