ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾಲಿನ್‌ ನಾಯಕತ್ವ ಒಪ್ಪಲು ಸಿದ್ಧ: ಅಳಗಿರಿ

Last Updated 30 ಆಗಸ್ಟ್ 2018, 11:21 IST
ಅಕ್ಷರ ಗಾತ್ರ

ಚೆನ್ನೈ: ಪಕ್ಷಕ್ಕೆ ಪುನಃ ಸೇರಿಸಿಕೊಳ್ಳುವುದಾದರೆ ಡಿಎಂಕೆ ಮುಖ್ಯಸ್ಥ ಹಾಗೂ ತಮ್ಮ ಕಿರಿಯ ಸಹೋದರ ಎಂ.ಕೆ.ಸ್ಟಾಲಿನ್‌ ಅವರ ನಾಯಕತ್ವ ಒಪ್ಪಿಕೊಳ್ಳಲು ಸಿದ್ಧವಿರುವುದಾಗಿ ಪಕ್ಷದ ಉಚ್ಚಾಟಿತ ನಾಯಕ ಎಂ.ಕೆ.ಅಳಗಿರಿ ಗುರುವಾರ ಹೇಳಿದ್ದಾರೆ.

ಮದುರೆಯಲ್ಲಿ ತಮ್ಮ ಬೆಂಬಲಿಗರ ಜತೆ ಚರ್ಚೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅಳಗಿರಿಯವರ ಪುತ್ರ ದೊರೈ ದಯಾನಿಧಿ ‘ನಮ್ಮ ತಂದೆ ಯಾವುದೇ ಷರತ್ತುಗಳಿಲ್ಲದೆ ಪಕ್ಷವನ್ನು ಸೇರಲು ಮತ್ತು ಯಾವುದೇ ಸ್ಥಾನ ನೀಡಿದರೂ ನಿಭಾಯಿಸಲು ಸಿದ್ಧರಿದ್ದಾರೆ’ ಎಂದು ಹೇಳಿಕೆ ನೀಡಿದ ಮರು ದಿನವೇ ಅಳಗಿರಿ ತಮ್ಮ ಇಂಗಿತ ಹೊರಹಾಕಿದ್ದಾರೆ.

‘ನಾನೇನೊ ಪಕ್ಷ ಸೇರಲು ಮತ್ತು ಅವರೊಟ್ಟಿಗೆ ಕೆಲಸ ಮಾಡಲು ಸಿದ್ಧ. ಆದರೆ, ಅವರು ನಮ್ಮನ್ನು ಮರಳಿ ಸೇರಿಸಿಕೊಳ್ಳುತ್ತಿಲ್ಲ’ ಎಂದು ದೂರಿದರು.

‘ಸ್ಟಾಲಿನ್‌ ಮತ್ತು ಅವರ ಬೆಂಬಲಿಗರು ನಮ್ಮನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಮುಂದೇನು ಮಾಡಬೇಕೆನ್ನುವುದನ್ನು ಮುಂದಿನ ತಿಂಗಳು ನಡೆಯುವ ರ‍್ಯಾಲಿಯ ನಂತರ, ನಾಯಕರ ಜತೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಅಳಗಿರಿ ತಿಳಿಸಿದ್ದಾರೆ.

‘ಅಳಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಿದ್ದು ಕರುಣಾನಿಧಿಯವರೇ ಹೊರತು ಬೇರೆ ಯಾರೂ ಅಲ್ಲ. ಪಕ್ಷಕ್ಕೆ ಅವರ ಅಗತ್ಯವಿದ್ದರೆ ಕರುಣಾನಿಧಿಯವರೇ ಸೇರಿಸಿಕೊಂಡಿರುತ್ತಿದ್ದರು. ಅವರ ನಿರ್ಧಾರವನ್ನು ಮರು ಪರಿಶೀಲಿಸುವ ಅಗತ್ಯವೇನಿದೆ? ಅಳಗಿರಿಯವರನ್ನು ಮರು ಸೇರ್ಪಡೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಪಕ್ಷ ಇಲ್ಲ’ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಡಿಎಂಕೆ ಮುಖ್ಯಸ್ಥರಾಗಿದ್ದ ಎಂ.ಕುರುಣಾನಿಧಿಯವರು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ತಮ್ಮ ಎರಡನೇ ಪತ್ನಿಯ ಹಿರಿಯ ಪುತ್ರ ಎಂ.ಕೆ.ಅಳಗಿರಿಯವರನ್ನು 2014ರಲ್ಲಿ ಪಕ್ಷದಿಂದ ಉಚ್ಚಾಟಿಸಿದ್ದರು. ಆಗಿನಿಂದಲೂ ತಂದೆಯ ನಾಯಕತ್ವ ಬಿಟ್ಟು ಬೇರೆ ಯಾರದ್ದೇ ನಾಯಕತ್ವ ಒಪ್ಪಿಕೊಳ್ಳುವುದಿಲ್ಲವೆಂದು, ಸ್ಟಾಲಿನ್‌ ನಾಯಕತ್ವಕ್ಕೂ ಅಳಗಿರಿ ವಿರೋಧಿಸಿಕೊಂಡು ಬಂದಿದ್ದರು.

ಕರುಣಾನಿಧಿಯವರ ಸಾವಿನ ನಂತರ ಕೆಲ ದಿನಗಳ ಕಾಲ ನಾಯಕತ್ವಕ್ಕಾಗಿ ಸಹೋದರರ ನಡುವೆ ಜಟಾಪಟಿ ನಡೆದಿತ್ತು. ಅಳಗಿರಿಯವರು ಸಹೋದರ ಸ್ಟಾಲಿನ್‌ ವಿರುದ್ಧ ಬಹಿರಂಗ ಸಮರ ಸಾರಿ, ಆರೋಪಗಳ ಸುರಿಮಳೆ ಗರೆದಿದ್ದರು. ಚೆನ್ನೈನಲ್ಲಿ ಸೆಪ್ಟೆಂಬರ್‌ 5ರಂದು ಬೃಹತ್‌ ರ‍್ಯಾಲಿ ಆಯೋಜಿಸಿ, ಬಲ ಪ್ರದರ್ಶಿಸಲು ಸಜ್ಜಾಗಿದ್ದರು.

ಇತ್ತೀಚೆಗಷ್ಟೇ ನಡೆದ ಡಿಎಂಕೆ ಸಾಮಾನ್ಯ ಸಭೆಯಲ್ಲಿ ಸ್ಟಾಲಿನ್‌ ಪಕ್ಷದ ನೂತನ ಸಾರಥಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT