ಭಾನುವಾರ, ಜನವರಿ 19, 2020
20 °C
ಅಪಪ್ರಚಾರಕ್ಕೆ ಕಿವಿಗೊಡಬೇಡಿ, ಗೊಂದಲ ನಿವಾರಿಸಿಕೊಳ್ಳಿ

ಪೌರತ್ವ ನೋಂದಣಿಗೆ ಪ್ರಮಾಣಪತ್ರ, ಸಾಕ್ಷಿ ಬೇಕೇ? ಎಲ್ಲ ಸಂದೇಹಗಳಿಗೆ ಉತ್ತರ ಇಲ್ಲಿದೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

NRC

ಪೌರತ್ವ (ತಿದ್ದುಪಡಿ) ಕಾಯ್ದೆ (CAA) ಹಾಗೂ ರಾಷ್ಟ್ರೀಯ ಪೌರರ ನೋಂದಣಿ (NRC) ಬಗ್ಗೆ ದೇಶಾದ್ಯಂತ ಗೊಂದಲ ಏರ್ಪಟ್ಟು, ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿರುವಂತೆಯೇ, ಕೇಂದ್ರ ಸರ್ಕಾರವು ಈ ಕುರಿತು ಸ್ಪಷ್ಟನೆ ನೀಡುವ ಪ್ರಶ್ನೋತ್ತರ ಸರಣಿಯನ್ನು ಬಿಡುಗಡೆಗೊಳಿಸಿ, ಜನರಲ್ಲಿರುವ ಗೊಂದಲ ಪರಿಹಾರಕ್ಕೆ ಪ್ರಯತ್ನಿಸಿದೆ.

ಇದನ್ನೂ ಓದಿ: 

ಇದಲ್ಲದೆ, ಯಾವುದೇ ಅಪಪ್ರಚಾರಕ್ಕೆ, ವದಂತಿಗಳಿಗೆ ಕಿವಿಗೊಡಬೇಡಿ, ಭಾರತೀಯ ನಾಗರಿಕರಿಗೆ ಇದರಿಂದ ಯಾವುದೇ ರೀತಿಯಲ್ಲೂ ಹಾನಿ ಇಲ್ಲ, ಅಕ್ರಮ ವಲಸಿಗರಿಗಷ್ಟೇ ತೊಂದರೆ ಎಂಬುದನ್ನು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಪೌರತ್ವ ಕಾಯ್ದೆ ಬಗ್ಗೆ ಮಾಹಿತಿಯಿಲ್ಲದೆಯೇ ಹೆಚ್ಚಿನ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ ಎಂಬುದನ್ನು ಸರ್ಕಾರ ಮನಗಂಡಿದ್ದು, NRC ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಂತೆಯೇ, ಈ ಪ್ರಕ್ರಿಯೆಯಲ್ಲಿ ಭಾರತೀಯ ಎಂದು ಖಚಿತಪಡಿಸಲು ಯಾವುದೇ ಸಾಕ್ಷ್ಯಾಧಾರಗಳನ್ನು ಕೇಳಲಾಗುವುದಿಲ್ಲ, ಗುರುತಿನ ಚೀಟಿ ಮಾತ್ರವೇ ಸಾಕಾಗುತ್ತದೆ, ಅಷ್ಟೇ ಅಲ್ಲದೆ, NRC (ರಾಷ್ಟ್ರೀಯ ಪೌರತ್ವ ನೋಂದಣಿ) ಹಾಗೂ CAA (ಪೌರತ್ವ ತಿದ್ದುಪಡಿ ಕಾಯ್ದೆ) ಎರಡೂ ಪ್ರತ್ಯೇಕ ವಿಷಯಗಳು ಎಂದೂ ಸ್ಪಷ್ಟಪಡಿಸಿದೆ.

NRC ಕುರಿತು ಸಂದೇಹ ನಿವಾರಣೆಗೆ ಸರ್ಕಾರ ಬಿಡುಗಡೆಗೊಳಿಸಿರುವ ಪ್ರಶ್ನೋತ್ತರ ಹೀಗಿದೆ:

ಪ್ರಶ್ನೆ: ರಾಷ್ಟ್ರೀಯ ಪೌರರ ನೋಂದಣಿ (NRC) ಗಾಗಿ ಮುಸ್ಲಿಮರಿಂದ ಸಾಕ್ಷ್ಯಾಧಾರ ಕೇಳಲಾಗುತ್ತದೆಯೇ?

ಉತ್ತರ: ಮೊದಲನೆಯದಾಗಿ, ರಾಷ್ಟ್ರೀಯ ಮಟ್ಟದಲ್ಲಿ NRC ಗಾಗಿ ಔಪಚಾರಿಕವಾಗಿ ಯಾವುದೇ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಸರ್ಕಾರ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ ಮತ್ತು ಅದಕ್ಕಾಗಿ ಯಾವುದೇ ನೀತಿ ನಿಯಮಾವಳಿಗಳನ್ನು ಇನ್ನೂ ರೂಪಿಸಿಲ್ಲ. ಹೀಗಾಗಿ, ಭವಿಷ್ಯದಲ್ಲಿ ಇದು ಅನುಷ್ಠಾನಕ್ಕೆ ಬಂದಲ್ಲಿ, ಯಾರಾದರೂ ಭಾರತೀಯತೆಯ ಸಾಕ್ಷ್ಯಾಧಾರ ನೀಡಬೇಕಾಗುತ್ತದೆ ಎಂದು ಅರ್ಥೈಸಿಕೊಳ್ಳುವುದು ಸರಿಯಲ್ಲ.

ಒಂದರ್ಥದಲ್ಲಿ NRC ಎಂಬುದರ ಪ್ರಕ್ರಿಯೆಯು ಆಧಾರ್ ಕಾರ್ಡ್ ಅಥವಾ ಬೇರೆ ಯಾವುದೇ ಗುರುತಿನ ಪತ್ರದಂತೆಯೇ ಇರುತ್ತದೆ. ಪೌರತ್ವ ನೋಂದಣಿಯಲ್ಲಿ ನಿಮ್ಮ ಹೆಸರು ನೋಂದಾಯಿಸಲು, ಆಧಾರ್ ಅಥವಾ ಮತದಾರ ಗುರುತಿನ ಚೀಟಿಗೆ ನೀಡಲಾದಂತೆಯೇ ಯಾವುದಾದರೂ ಗುರುತಿನ ಚೀಟಿಗಳನ್ನು ತೋರಿಸಬೇಕಾಗುತ್ತದೆ, ಅಷ್ಟೆ.

ಇದನ್ನೂ ಓದಿ: 

ಪ್ರಶ್ನೆ: ವ್ಯಕ್ತಿಯೊಬ್ಬ ಸುಶಿಕ್ಷಿತನಲ್ಲದಿದ್ದರೆ ಅಥವಾ ಯಾವುದೇ ಸಂಬಂಧಿತ ದಾಖಲೆಗಳಿಲ್ಲದಿದ್ದರೆ ಏನಾಗುತ್ತದೆ?
ಉತ್ತರ:
ಇಂಥಹ ಸಂದರ್ಭದಲ್ಲಿ, ಆ ವ್ಯಕ್ತಿಯು ಒಬ್ಬ ಸಾಕ್ಷಿಯನ್ನು ಕರೆತರಲು ಸಂಬಂಧಿತ ಅಧಿಕಾರಿಯು (NRC ಕಾರ್ಯದಲ್ಲಿ ನಿರತರಾಗಿರುವ) ಅನುಮತಿ ನೀಡುತ್ತಾರೆ. ಇದೇ ವೇಳೆ, ಬೇರೆ ಆಧಾರಗಳು ಅಥವಾ ಗ್ರಾಮಸ್ಥರಿಂದ ಗುರುತಿಸುವಿಕೆ ಮುಂತಾದ ಯಾವುದೇ ಸಾಮುದಾಯಿಕ ದೃಢೀಕರಣಕ್ಕೂ ಅವಕಾಶವಿರುತ್ತದೆ. ಭಾರತೀಯ ಪ್ರಜೆಗೆ ಯಾವುದೇ ರೀತಿಯಲ್ಲಿ ಅನಗತ್ಯ ಸಮಸ್ಯೆ ಆಗುವುದಿಲ್ಲ.

ಪ್ರಶ್ನೆ: ಭಾರತದಲ್ಲಿ ಮನೆಯೇ ಇಲ್ಲದಿರುವವರು, ಬಡವರು ಮತ್ತು ಶಿಕ್ಷಣ ವಂಚಿತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಗುರುತಿನ ಆಧಾರ ಇರುವುದಿಲ್ಲ. ಅಂಥವರಿಗೇನಾಗುತ್ತದೆ?

ಉತ್ತರ: ಇಂಥಹಾ ವ್ಯಕ್ತಿಗಳೂ ಯಾವುದೋ ಒಂದು ಆಧಾರಗಳ ಮೂಲಕ ಮತದಾನ ಮಾಡಿರುತ್ತಾರೆ, ಇಲ್ಲವೇ ಸರ್ಕಾರೀ ಯೋಜನೆಗಳ ಫಲಾನುಭವಿಗಳಾಗಿರುತ್ತಾರೆ. ಈ ರೀತಿಯ ಗುರುತಿನ ಆಧಾರದಲ್ಲಿಯೇ ಅವರಿಗೆ ಮಾನ್ಯತೆ ದೊರೆಯುತ್ತದೆ.

ಪ್ರಶ್ನೆ: ಯಾವುದೇ ದಾಖಲೆಪತ್ರಗಳಿಲ್ಲದ ಲೈಂಗಿಕ ಅಲ್ಪಸಂಖ್ಯಾತರು, ನಾಸ್ತಿಕರು, ಬುಡಕಟ್ಟು ಜನರು, ದಲಿತರು, ಮಹಿಳೆಯರು ಮತ್ತು ಮನೆಯಿಲ್ಲದವರನ್ನು NRC ಯಿಂದ ಹೊರತುಪಡಿಸಲಾಗುತ್ತದೆಯೇ?

ಉತ್ತರ: ಇಲ್ಲ. NRC ಅನುಷ್ಠಾನಕ್ಕೆ ಬಂದಲ್ಲಿ, ಮೇಲೆ ತಿಳಿಸಿದ ಯಾರ ಮೇಲೂ ಯಾವುದೇ ರೀತಿಯ ಪ್ರಭಾವ ಆಗುವುದಿಲ್ಲ.

ಪ್ರಶ್ನೆ: NRC ಅನ್ವಯವಾಗುವುದಿದ್ದರೆ, 1971ಕ್ಕಿಂತ ಮೊದಲಿನ ವಂಶಾವಳಿಗೆ ನಾನು ಸಾಕ್ಷ್ಯ ನೀಡಬೇಕೇ?

ಉತ್ತರ: ಅದು ಹಾಗಲ್ಲ. 1971ಕ್ಕಿಂತ ಮೊದಲಿನ ವಂಶಪರಂಪರೆಗೆ ಸಂಬಂಧಿಸಿ, ತಲೆಮಾರಿನ ಅಥವಾ ಹೆತ್ತವರ ಜನನ ದಾಖಲೆ ಇಲ್ಲವೇ ಬೇರಾವುದೇ ಗುರುತಿನ ಪತ್ರವನ್ನು ತೋರಿಸಬೇಕಾಗಿಲ್ಲ. ಇದು ಅಸ್ಸಾಂ ಒಡಂಬಡಿಕೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಅಸ್ಸಾಂ NRC ಗೆ ಮಾತ್ರ ಅನ್ವಯವಾಗುತ್ತದೆ. ದೇಶದ ಇತರ ಭಾಗಗಳಿಲ್ಲಿನ NRC ಪ್ರಕ್ರಿಯೆಯು ಸಂಪೂರ್ಣ ವಿಭಿನ್ನ.

ಪ್ರಶ್ನೆ: NRC ಅನುಷ್ಠಾನಕ್ಕೆ ಬಂದಾಗ, ನಮ್ಮ ಭಾರತೀಯ ಪೌರತ್ವ ಸಾಬೀತುಪಡಿಸಲು ನಾವು ನಮ್ಮ ಹೆತ್ತವರ ಜನನ ದಾಖಲೆಗಳನ್ನು ತೋರಿಸಬೇಕಾಗುತ್ತದೆಯೇ?

ಉತ್ತರ: ನಿಮ್ಮ ಜನ್ಮ ದಿನಾಂಕ, ತಿಂಗಳು, ವರ್ಷ ಮತ್ತು ಸ್ಥಳದ ವಿವರ ಕೊಟ್ಟರೆ ಸಾಕಾಗುತ್ತದೆ. ನಿಮ್ಮಲ್ಲಿ ಜನನ ದಾಖಲೆಗಳು ಇಲ್ಲದಿದ್ದರೆ, ನೀವು ನಿಮ್ಮ ಹೆತ್ತವರ ಕುರಿತಾಗಿ ಈ ವಿವರಗಳನ್ನು ನೀಡಬೇಕಾಗುತ್ತದೆ. ಆದರೆ, ಹೆತ್ತವರು ಯಾವುದೇ ದಾಖಲೆಗಳನ್ನು ಕೊಡಲೇಬೇಕೆಂಬುದು ಕಡ್ಡಾಯವೇನಿಲ್ಲ. ಜನ್ಮ ದಿನಾಂಕ ಅಥವಾ ಜನ್ಮ ಸ್ಥಳಕ್ಕೆ ಸಂಬಂಧಿಸಿದಂತೆ ಯಾವುದೇ ಆಧಾರವನ್ನೂ ಸಲ್ಲಿಸಿದರೂ ಪೌರತ್ವವನ್ನು ಸಾಬೀತುಪಡಿಸಿಕೊಳ್ಳಬಹುದು. ಆದರೆ, ಸ್ವೀಕಾರಾರ್ಹ ದಾಖಲೆಗಳೇನು ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆಯಷ್ಟೇ. ಮತದಾರ ಗುರುತಿನ ಚೀಟಿ, ಪಾಸ್‌ಪೋರ್ಟ್, ಆಧಾರ್, ಚಾಲನಾ ಪರವಾನಗಿ, ವಿಮಾ ಪತ್ರ, ಜಮೀನು ಅಥವಾ ಮನೆಯ ಕಾಗದ ಪತ್ರಗಳು ಅಥವಾ ಸರಕಾರಿ ಅಧಿಕಾರಿಗಳು ನೀಡಿದ ಇದೇ ರೀತಿಯ ಬೇರಾವುದೇ ದಾಖಲೆಗಳು ಪರಿಗಣನೆಯಲ್ಲಿವೆ. ಇವುಗಳ ಪಟ್ಟಿ ಉದ್ದ ಇರುವ ಸಾಧ್ಯತೆಯಿದೆ. ಹೀಗಾಗಿ, ಅನಗತ್ಯವಾಗಿ ಯಾವುದೇ ಭಾರತೀಯ ಪ್ರಜೆಗೂ ತೊಂದರೆಯಾಗಲಾರದು.

ಪ್ರಶ್ನೆ: ಪೌರತ್ವ ಕಾಯ್ದೆಯಿಂದ ಯಾವುದೇ ಭಾರತೀಯ ಪ್ರಜೆಗೆ ತೊಂದರೆಯಿದೆಯೇ?

ಉತ್ತರ: 1955ರ ಪೌರತ್ವ ಕಾಯ್ದೆಯಡಿಯ ತಿದ್ದುಪಡಿ ಕಾಯ್ದೆಯು ಯಾವುದೇ ದೇಶದ ಯಾವುದೇ ಪ್ರಜೆಯು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸುವುದನ್ನು ತಡೆಯುವುದಿಲ್ಲ. ಬಲೂಚ್, ಅಹ್ಮದೀಯ, ರೋಹಿಂಗ್ಯಾಗಳು ಕೂಡ ಯಾವುದೇ ಸಮಯದಲ್ಲಿ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು. ಅವರು 1955ರ ಪೌರತ್ವ ಕಾಯ್ದೆಯಲ್ಲಿರುವ ಅಗತ್ಯತೆಗಳನ್ನು ಪೂರೈಸಬೇಕಷ್ಟೇ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು