ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಮಾ ಮತ್ತೆ ಸಿಬಿಐಗೆ, ನಿರ್ಧಾರ ಅಧಿಕಾರ ಮೊಟುಕು: ಸುಪ್ರೀಂ ಆದೇಶ

ಪ್ರಧಾನಿ ನೇತೃತ್ವದ ಸಮಿತಿ ವಾರದೊಳಗೆ ಅಂತಿಮ ನಿರ್ಧಾರ
Last Updated 8 ಜನವರಿ 2019, 6:33 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಉನ್ನತ ತನಿಖಾ ಸಂಸ್ಥೆ ಕೇಂದ್ರ ತನಿಖಾ ದಳ(ಸಿಬಿಐ)ದ ಮುಖ್ಯಸ್ಥರಾಗಿ ಅಲೋಕ್‌ ವರ್ಮಾ ಮುಂದುವರಿಯಲಿದ್ದಾರೆ. ಆದರೆ, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶಿಸಿದೆ.

ಕೇಂದ್ರ ಸರ್ಕಾರ ಅಲೋಕ್‌ ಅವರನ್ನು ಅಧಿಕಾರದಿಂದ ಬಿಡುಗಡೆ ನೀಡಿ ದೀರ್ಘ ರಜೆಯ ಮೇಲೆ ಕಳುಹಿಸಿತ್ತು. ಇದನ್ನು ಪ್ರಶ್ನಿಸಿಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲೋಕ್‌ ವರ್ಮಾ ಅವರನ್ನು ಸ್ಥಾನದಿಂದ ತೆಗೆದು ಹಾಕಿ ಹಂಗಾಮಿ ನಿರ್ದೇಶಕರನ್ನು ನೇಮಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಮಧ್ಯರಾತ್ರಿ ಆದೇಶವನ್ನು ಕೋರ್ಟ್‌ ವಜಾ ಮಾಡಿದ್ದು, ಇದರಿಂದ ಕೇಂದ್ರ ಸರ್ಕಾರ ಹಿನ್ನಡೆಯಾಗಿದೆ.

ಅಲೋಕ್‌ ವರ್ಮಾ ತಕ್ಷಣದಿಂದಲೇ ಸಿಬಿಐ ನಿರ್ದೇಶಕರಾಗಿ ಕಾರ್ಯ ಮುಂದುವರಿಸಬಹುದಾಗಿದ್ದು, ಕಾರ್ಯನೀತಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಕೋರ್ಟ್‌ ಸೂಚಿಸಿದೆ. ಸಿಬಿಐ ನಿರ್ದೇಶಕರಿಗೆ ಮುಖಭಂಗ ಮಾಡುವ ಉದ್ದೇಶ ಇಲ್ಲಿ ಸ್ಪಷ್ಟವಾಗಿದೆ ಎಂದು ಇಬ್ಬರು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ. ಒಂದು ವಾರದೊಳಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದಸಮಿತಿಯು ವರ್ಮಾ ವಿರುದ್ಧದ ಆರೋಪಗಳ ತನಿಖಾ ವರದಿ ಪರಿಶೀಲನೆ ನಡೆಸಿ, ಸ್ಥಾನದಲ್ಲಿ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಕೋರ್ಟ್‌ ಹೇಳಿದೆ.

ಸಿಬಿಐ ನಿರ್ದೇಶಕರಾಗಿ ಅಲೋಕ್‌ ವರ್ಮಾ ಅವರ ಎರಡು ವರ್ಷಗಳ ಅಧಿಕಾರ ಅವಧಿ ಜನವರಿ 31ಕ್ಕೆ ಪೂರ್ಣಗೊಳ್ಳಲಿದೆ.

ವರ್ಮಾ ಅವರ ಪರವಾಗಿ ಹಿರಿಯ ವಕೀಲ ಫಾಲಿ ನಾರಿಮನ್‌ ಕೇಂದ್ರ ಸರ್ಕಾರದ ನಡೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದರು. ‘ಎರಡು ವರ್ಷಗಳ ಅವಧಿಗೆ ನೇಮಕವಾಗುವ ಸಿಬಿಐ ನಿರ್ದೇಶಕರನ್ನು ಸ್ಥಾನದಿಂದ ತೆಗೆದು ಹಾಕಲು ಉನ್ನತ ಮಟ್ಟದಸಮಿತಿಯಿಂದ ಮಾತ್ರ ಸಾಧ್ಯ. ಸರ್ಕಾರದ ಮಧ್ಯರಾತ್ರಿ ಆದೇಶದಲ್ಲಿ ನಿಯಮಗಳ ವಿರುದ್ಧವಾಗಿದೆ’ ಎಂದು ವಾದಿಸಿದ್ದರು.

ಉನ್ನತ ಮಟ್ಟದಸಮಿತಿಯು ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯ ನ್ಯಾಯಮೂರ್ತಿ ಅಥವಾ ಅವರಿಂದ ನಿರ್ದೇಶನಗೊಂಡಿರುವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅವರನ್ನು ಒಳಗೊಂಡಿರಬೇಕು.

ಅಲೋಕ್‌ ಕುಮಾರ್‌ ವರ್ಮಾ ಮತ್ತು ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರು ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡಿಕೊಂಡ ಪ್ರಕರಣ ಬೀದಿಗೆ ಬರುತ್ತಿದ್ದಂತೆ ಇಬ್ಬರನ್ನೂ ಕೇಂದ್ರ ಸರ್ಕಾರ ಅಕ್ಟೋಬರ್‌ನಲ್ಲಿ ಕಡ್ಡಾಯ ರಜೆ ಮೇಲೆ ಕಳುಹಿಸಿತ್ತು.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ನೇತೃತ್ವದ ಪೀಠವು ವರ್ಮಾ, ಕೇಂದ್ರ ಸರ್ಕಾರ ಹಾಗೂ ಕೇಂದ್ರ ಜಾಗೃತ ದಳದ (ಸಿವಿಸಿ) ವಾದ ಪ್ರತಿವಾದವನ್ನು ಕಳೆದ ಡಿಸೆಂಬರ್‌ 6ರಂದು ಆಲಿಸಿದ ನಂತರ, ತೀರ್ಪನ್ನು ಕಾಯ್ದಿರಿಸಿತ್ತು.

ಸಂಬಂಧಿತ ಸುದ್ದಿಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT