ಜಾತಿಗೊಂದು ಪಕ್ಷ, ಒಂದಾಗದ ಕಾಪು ಜನ

ಗುರುವಾರ , ಏಪ್ರಿಲ್ 25, 2019
33 °C
ಆಂಧ್ರ ಪ್ರದೇಶ: ಲೋಕಸಭೆ, ವಿಧಾನಸಭೆಗೆ ಚುನಾವಣೆ: ಭಾರಿ ಪೈಪೋಟಿ ಖಚಿತ, ಜಾತಿ ಸಮೀಕರಣವೇ ತಂತ್ರ

ಜಾತಿಗೊಂದು ಪಕ್ಷ, ಒಂದಾಗದ ಕಾಪು ಜನ

Published:
Updated:

ಅಮರಾವತಿ: ‘ಕಾಪು’ ಎಂದರೆ ತೆಲುಗು ಭಾಷೆಯಲ್ಲಿ ‘ಕಾಪಾಡುವವನು’ ಎಂದರ್ಥ. ಆಂಧ್ರದ ಒಟ್ಟಾರೆ ಐದು ಕೋಟಿ ಜನಸಂಖ್ಯೆಯಲ್ಲಿ ಶೇ 15ರಷ್ಟಿರುವ, ಕೃಷಿಯನ್ನೇ ವೃತ್ತಿಯಾಗಿಸಿಕೊಂಡಿರುವ ‘ಕಾಪು’ ಸಮುದಾಯವು ಒಗ್ಗಟ್ಟಾದರೆ ಹೆಸರಿಗೆ ತಕ್ಕಂತೆ ಯಾವುದೇ ಪಕ್ಷವನ್ನು ಕಾಪಾಡುವ ಅಥವಾ ಕೆಡವುವ ಶಕ್ತಿಯನ್ನು ಹೊಂದಿದೆ. ಆದರೆ ಈ ಸಮುದಾಯವು ಸಣ್ಣ ಸಣ್ಣ ಜಾತಿ– ಉಪಜಾತಿಗಳಲ್ಲಿ ಒಡೆದು ಹೋಗಿರುವುದರಿಂದ ಯಾವುದೇ ಪಕ್ಷ ಸಂಪೂರ್ಣವಾಗಿ ಈ ಸಮುದಾಯದ ಮೇಲೆ ಅವಲಂಬನೆ ಆಗಿಲ್ಲ. ಕರ್ನಾಟಕದಲ್ಲಿ ಇವರನ್ನು ಬಲಿಜ ಸಮುದಾಯ ಎನ್ನಲಾಗುತ್ತದೆ.

ಚುನಾವಣಾ ವಿಚಾರಕ್ಕೆ ಬಂದಾಗ, ಆಂಧ್ರದ ಜನಸಂಖ್ಯೆಯ ಶೇ 5ಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ ಕಮ್ಮ ಮತ್ತು ರೆಡ್ಡಿ ಸಮುದಾಯವು ರಾಜ್ಯದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ.

ಆಂಧ್ರದಲ್ಲಿ ಆಡಳಿತ ನಡೆಸುತ್ತಿರುವ ತೆಲುಗುದೇಶಂ ಪಾರ್ಟಿಯನ್ನು (ಟಿಡಿಪಿ) ಕಮ್ಮ ಸಮುದಾಯದವರ ಪಕ್ಷ ಎಂದು ಗುರುತಿಸಲಾಗುತ್ತದೆ. ರೆಡ್ಡಿ ಸಮುದಾಯ ಕಾಂಗ್ರೆಸ್‌ ಜೊತೆಗಿತ್ತು. ಈಗ ವೈ.ಎಸ್‌. ಜಗನ್‌ ಮೋಹನ ರೆಡ್ಡಿ ನೇತೃತ್ವದ ‘ವೈಎಸ್‌ಆರ್‌ ಕಾಂಗ್ರೆಸ್‌’ ಪಕ್ಷದ ಜತೆಗೆ ಇದೆ. ಎರಡೂ ಪಕ್ಷಗಳು ತಮ್ಮ ತಮ್ಮ ಅನುಯಾಯಿ ಪಂಗಡದವರಿಗೆ ಹೆಚ್ಚಿನ ಸ್ಥಾನಗಳನ್ನು ನೀಡುತ್ತ ಬಂದಿವೆಯೇ ವಿನಾ ‘ಕಾಪು’ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದ್ದು ಕಡಿಮೆ. ಆದರೆ ಈ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಕಾಪು ಸಮುದಾಯದವರಾದ ಪವನ್‌ ಕಲ್ಯಾಣ್‌ ನೇತೃತ್ವದ ‘ಜನಸೇನಾ ಪಾರ್ಟಿ’ ಕಣದಲ್ಲಿ ಕಾಣಿಸಲಿದ್ದು ಯಾವ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ನೋಡಬೇಕಿದೆ.

‘ಆಂಧ್ರದಲ್ಲಿ ಒಟ್ಟು 175 ವಿಧಾನಸಭಾ ಕ್ಷೇತ್ರಗಳಿವೆ. ಅವುಗಳ ಪೈಕಿ 34 ಕ್ಷೇತ್ರಗಳು ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿವೆ. ಈ ಭಾಗದ ‘ಕಾಪು’ ಸಮುದಾಯದ ಜನರೆಲ್ಲರೂ ಒಗ್ಗಟ್ಟಾಗಿ ಒಂದು ಪಕ್ಷವನ್ನು ಗೆಲ್ಲಿಸಲು ಪಣತೊಟ್ಟರೆ, ಆ ಪಕ್ಷ ಆಂಧ್ರದಲ್ಲಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲಾಗದು. ಈ ಬಾರಿ ಈ ಭಾಗದ ಜನರೆಲ್ಲರೂ ನಮ್ಮ ಪಕ್ಷಕ್ಕೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ನರಸಂಪುರಂ ಲೋಕಸಭಾ ಕ್ಷೇತ್ರದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ರಘುರಾಮ ಕೃಷ್ಣಂ ರಾಜು. ಹಿಂದುಳಿದಿರುವ ಗೌಡ ಮತ್ತು ಸೆಟ್ಟಿ ಬಾಲಾಜಿ ಸಮುದಾಯದವರೂ ಈ ಬಾರಿ ವೈಎಸ್‌ಆರ್‌ ಕಾಂಗ್ರೆಸ್‌ಗೆ ವೋಟು ಕೊಡುವ ನಿರ್ಧಾರ ಮಾಡಿದ್ದಾರೆ ಎಂದೂ ರಾಜು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕೆಲಸಕ್ಕಾಗಿ ಬೇರೆ ಊರುಗಳಿಗೆ ಹೋಗಿರುವ ಈ ಭಾಗದ ಜನರು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತಮ್ಮ ಹುಟ್ಟೂರಿಗೆ ಬರುತ್ತಾರೆ. ಆ ಸಂದರ್ಭದಲ್ಲಿ ಸಮುದಾಯದ ಮಟ್ಟದಲ್ಲಿ ಕೆಲವು ಸಭೆಗಳು ನಡೆಯುತ್ತವೆ. ಇಂಥ ಸಭೆಗಳಲ್ಲೆಲ್ಲ, ಈ ಬಾರಿಯ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಅನ್ನು ಬೆಂಬಲಿಸಲು ಜನರು ತೀರ್ಮಾನಿಸಿದ್ದಾರೆ. ಭೀಮಾವರಂ ವಿಧಾನಸಭಾ ಕ್ಷೇತ್ರದಿಂದ ಪವನ್‌ ಕಲ್ಯಾಣ್‌ ಸ್ಪರ್ಧಿಸುತ್ತಿದ್ದಾರೆ. ಇಲ್ಲಿಂದ ಸ್ಪರ್ಧಿಸುತ್ತಿರುವ ಇತರ ಮೂವರು ಸ್ಪರ್ಧಿಗಳೂ ಕಾಪು ಸಮುದಾಯದವರೇ ಆಗಿದ್ದಾರೆ.

‘ಕಾಪು ಮತಗಳು ಒಗ್ಗಟ್ಟಾಗದಿರುವುದೇ ಈ ಸಮುದಾಯದ ನಾಯಕರು ಸೋಲು ಕಾಣಲು ಕಾರಣ. ಸ್ವತಃ ಇದೇ ಸಮುದಾಯವರಾದ ನಟ ಚಿರಂಜೀವಿ (ಪವನ್‌ ಕಲ್ಯಾಣ್‌ ಸಹೋದರ) ಅವರ ಪಕ್ಷದ ಸೋಲು ಮತ್ತು ಅವರ ಪಕ್ಷ ಕಾಂಗ್ರೆಸ್‌ನಲ್ಲಿ ವಿಲೀನವಾಗಲು ಈ ಸಮುದಾಯದ ಒಗ್ಗಟ್ಟಿನ ಕೊರತೆಯೇ ಕಾರಣ’ ಎನ್ನುತ್ತಾರೆ ಕಾಪು ಸಮುದಾಯಕ್ಕೆ ಸೇರಿದ, ಟಿಡಿಪಿ ಮುಖಂಡ ಬೊದ್ದು ವೇಣುಗೋಪಾಲ್‌.

ಆರ್ಥಿಕವಾಗಿ ಹಿಂದುಳಿದ ಈ ಸಮುದಾಯಕ್ಕೆ ಶೇ 5ರಷ್ಟು ಮೀಸಲಾತಿ ನೀಡಿರುವುದು ಮತ್ತು ಕಾಪು ನಿಗಮ ಸ್ಥಾಪನೆ ಮಾಡಿರುವ ವಿಚಾರಗಳನ್ನೇ ಮುಂದಿಟ್ಟುಕೊಂಡು ಟಿಡಿಪಿ ಈ ಬಾರಿ ಈ ಸಮುದಾಯದ ಮತಯಾಚನೆ ಮಾಡಲಿದೆ.

*ಆಂಧ್ರಪ್ರದೇಶ ವಿಭಜನೆಗೊಂಡ ನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಜತೆಗೆ ವಿಧಾನಸಭೆಗೂ ಮತದಾನ ಆಗಲಿದೆ

*2014ರ ಲೋಕಸಭಾ ಚುನಾವಣೆಗೆ ಮೊದಲು ತೆಲಂಗಾಣ ರಾಜ್ಯದ ಘೋಷಣೆ

*2014ರ ಲೋಕಸಭಾ ಚುನಾವಣೆಯಲ್ಲಿ ಆಂಧ್ರದಿಂದ 42 ಸಂಸದರು ಆಯ್ಕೆಯಾಗಿದ್ದರು. ವಿಭಜನೆಯ ನಂತರ ಈ ಸಂಖ್ಯೆ 25 ಆಗಿದೆ

*ಹಿಂದಿನ ಎರಡು ಚುನಾವಣೆಗಳನ್ನು ಗಮನಿಸಿದರೆ ಆಂಧ್ರದಲ್ಲಿ ಭಾರಿ ರಾಜಕೀಯ ಪಲ್ಲಟ ಆಗಿರುವುದು ಸ್ಪಷ್ಟ

*ಸ್ಥಳೀಯ ಪಕ್ಷಗಳು ಇಲ್ಲಿ ಬಲಿಷ್ಠವಾಗಿ, ರಾಷ್ಟ್ರೀಯ ಪಕ್ಷಗಳು ಇವುಗಳ ಜೊತೆ ಹೊಂದಾಣಿಕೆ ಮಾಡಿಕೊಂಡೇ ಚುನಾವಣೆಗೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಸೃಷ್ಟಿ

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !