ಬುಧವಾರ, ಸೆಪ್ಟೆಂಬರ್ 18, 2019
26 °C

ಇದು ವಿಶ್ವ ದಾಖಲೆ: ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ

Published:
Updated:

ಗುಂಟೂರು (ಆಂಧ್ರಪ್ರದೇಶ): ನಗರದ ಆಸ್ಪತ್ರೆಯಲ್ಲಿ 74 ವರ್ಷದ ಮಹಿಳೆ ಅವಳಿ ಹೆಣ್ಣು ಮಕ್ಕಳಿಗೆ ಗುರುವಾರ ಜನ್ಮ‌ ನೀಡುವ ಮೂಲಕ‌ ಮಗು ಹೆತ್ತ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾದರು.

ಬಂಜೆತನ ನಿವಾರಣಾ ಚಿಕಿತ್ಸೆ (ಐವಿಎಫ್‌) ಮೂಲಕ ಗರ್ಭ ಧರಿಸಿದ್ದ ಮಂಗಯ್ಯಮ್ಮ ಅವರಿಗೆ ಗುಂಟೂರು ನಗರದ ಅಹಲ್ಯಾ ನರ್ಸಿಂಗ್ ಹೋಂನ ನಾಲ್ವರು ತಜ್ಞ ವೈದ್ಯರು ಸಿಜೇರಿಯನ್ ವಿಧಾನದ ಮೂಲಕ ಹೆರಿಗೆ ಮಾಡಿಸಿದ್ದಾರೆ.

ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ‘ಇದಂತೂ ವೈದ್ಯಲೋಕದ ಅದ್ಭುತವೇ ಸರಿ. ವಿಶ್ವದಲ್ಲಿ ಮಗು ಹೆತ್ತ ಅತ್ಯಂತ ಹಿರಿಯ ಮಹಿಳೆ ಮಂಗಯ್ಯಮ್ಮ’ ಎಂದು ಹೆರಿಗೆ ಮಾಡಿಸಿದ ವೈದ್ಯರ ತಂಡದ ನಾಯಕತ್ವ ವಹಿಸಿದ್ದ ಡಾ.ಉಮಾಶಂಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಪೂರ್ವ ಗೋದಾವರಿ ಜಿಲ್ಲೆಯ ನೆಲಪರ್ತಿಪಾಡು ಗ್ರಾಮದ ಮಂಗಯ್ಯಮ್ಮ ಅವರ ಮದುವೆಯಾಗಿ 54 ವರ್ಷಗಳೇ ಆಗಿತ್ತು. ಮಕ್ಕಳಿಗಾಗಿ ಪರಿತಪಿಸುತ್ತಿದ್ದ ಅವರು ಪತಿ ವೈ.ರಾಜಾರಾವ್ ಅವರೊಡನೆ ಕಳೆದ ವರ್ಷ ಕೃತಕ ಗರ್ಭಧಾರಣೆ ತಜ್ಞರನ್ನು ಸಂಪರ್ಕಿಸಿದ್ದರು.

ಮಕ್ಕಳಿಗಾಗಿ ಕಾತರಿಸುತ್ತಿದ್ದ ದಂಪತಿಯ ವಿನಂತಿ ಒಪ್ಪಿಕೊಂಡಿದ್ದ ವೈದ್ಯರು ಕೃತಕ ಗರ್ಭಧಾರಣೆ ವಿಧಾನದಿಂದ ಅವರ ಕನಸು ಸಾಕಾರಗೊಳಿಸಲು ಸಮ್ಮತಿಸಿದ್ದರು.

‘ದೇವರು ನನ್ನ ಪ್ರಾರ್ಥನೆಯನ್ನು ಈಡೇರಿಸಿದ್ದಾನೆ. ನನಗೆ ಬಹಳ ಖುಷಿಯಾಗುತ್ತಿದೆ’ ಎಂದು ಮಂಗಯ್ಯಮ್ಮ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

ಕೌರ್ ಹೆಸರಲ್ಲಿತ್ತು ದಾಖಲೆ: ಹರಿಯಾಣದ ದಲ್ಜಿಂದರ್ ಕೌರ್ 2016ರಲ್ಲಿ ತಮ್ಮ 70ರ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಜನ್ಮ ನೀಡಿದ ವಿಶ್ವದ ಅತಿಹಿರಿಯ ಮಹಿಳೆ ಎಂದೇ ಈವರೆಗೆ ಕೌರ್ ಅವರನ್ನು ಗುರುತಿಸಲಾಗುತ್ತಿತ್ತು.

Post Comments (+)