ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಮರಳಿದ ಮತ್ತೊಂದು ತಂಡ

ಕೋವಿಡ್‌–19: ಚೀನಾದ ವುಹಾನ್‌, ಜಪಾನ್‌ನ ಹಡಗಿನಲ್ಲಿದ್ದ 192 ಭಾರತೀಯರು ವಾಪಸ್‌
Last Updated 27 ಫೆಬ್ರುವರಿ 2020, 14:06 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸೋಂಕು ಕೇಂದ್ರವಾದ ಚೀನಾ ಮತ್ತು ಜಪಾನ್‌ ಕಡಲ ತೀರದಲ್ಲಿ ಲಂಗರು ಹಾಕಿರುವ ಐಷಾರಾಮಿ ಹಡಗಿನಿಂದ 192 ಭಾರತೀಯರನ್ನು ಸರ್ಕಾರವು ದೇಶಕ್ಕೆ ಕರೆ ತಂದಿದೆ. ಇದೇ 5ರಿಂದಲೇ ಐಷಾರಾಮಿ ಹಡಗನ್ನು ಜಪಾನ್‌ ಕಡಲ ತೀರದಲ್ಲಿಯೇ ನಿಲ್ಲಿಸಲಾಗಿದೆ. ಈ ಹಡಗಿನಲ್ಲಿ ಇದ್ದ ಹಲವು ಮಂದಿಗೆ ಸೋಂಕು ತಗಲಿತ್ತು.

ಕೊರೊನಾ ವೈರಸ್‌ ಪಿಡುಗು ಆರಂಭವಾದ ಚೀನಾದ ಹುಬೆ ಪ್ರಾಂತ್ಯ
ದಲ್ಲಿದ್ದ 73 ಭಾರತೀಯರನ್ನು ಸಿ–17 ಸೇನಾ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ. ವಾಯುಪಡೆಯ ಈ ವಿಮಾನವು ವುಹಾನ್‌ನಿಂದ ದೆಹಲಿಗೆ ಗುರುವಾರ ಬಂದಿದೆ. ಬೀಜಿಂಗ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಮೂವರು ಅಧಿಕಾರಿಗಳೂ ವಿಮಾನದಲ್ಲಿ ಬಂದಿದ್ದಾರೆ. ಭಾರತೀಯರ ತೆರವು ಕಾರ್ಯಾಚರಣೆಯ ಉಸ್ತುವಾರಿಗಾಗಿ ಈ ಅಧಿಕಾರಿಗಳು ಬೀಜಿಂಗ್‌ನಿಂದ ವುಹಾನ್‌ಗೆ ಹೋಗಿದ್ದರು.

ವುಹಾನ್‌ನಲ್ಲಿದ್ದ ಇತರ ದೇಶಗಳ ಕೆಲವರನ್ನೂ ವಿಮಾನದಲ್ಲಿ ಕರೆತರಲಾಗಿದೆ. ಬಾಂಗ್ಲಾದೇಶದ 23, ಚೀನಾದ ಆರು, ಮ್ಯಾನ್ಮಾರ್‌ ಮತ್ತು ಮಾಲ್ಡೀವ್ಸ್‌ನ ತಲಾ ಇಬ್ಬರು ಹಾಗೂ ದಕ್ಷಿಣ ಆಫ್ರಿಕಾ, ಅಮೆರಿಕ, ಮಡಗಾಸ್ಕರ್‌ನ ತಲಾ ಒಬ್ಬರು ಇದರಲ್ಲಿ ಸೇರಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭಾರತದ ವಿಮಾನದಲ್ಲಿ ಬಂದ ಆರು ಚೀನೀಯರು, ತೆರವು ಮಾಡಲಾದ ವ್ಯಕ್ತಿಗಳ ಗಂಡ/ಹೆಂಡತಿ ಅಥವಾ ಮಕ್ಕಳು ಎಂದು ಮೂಲಗಳು ಹೇಳಿವೆ.

ಜಪಾನ್‌ನಿಂದ ಬಂದ ಇನ್ನೊಂದು ವಿಮಾನ ಕೂಡ ಗುರುವಾರವೇ ದೆಹಲಿಗೆ ಬಂತು. ಜಪಾನ್‌ನ ಯೊಕೊಹಾಮಾದಲ್ಲಿ ಲಂಗರು ಹಾಕಿರುವ ಡೈಮಂಡ್‌ ಪ್ರಿನ್ಸೆಸ್‌ ಹಡಗಿನಲ್ಲಿ ಇದ್ದ 119 ಭಾರತೀಯರನ್ನು ಈ ವಿಮಾನವು ಕರೆ ತಂದಿದೆ.
ಇವರಲ್ಲಿ 113 ಮಂದಿ ಹಡಗಿನ ಸಿಬ್ಬಂದಿಯಾಗಿದ್ದರೆ, ಉಳಿದವರು ಪ್ರಯಾಣಿಕರಾಗಿದ್ದರು. ಶ್ರೀಲಂಕಾದ ಇಬ್ಬರು, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರುವಿನ ತಲಾ ಒಬ್ಬರನ್ನು ಕೂಡ ಏರ್‌ ಇಂಡಿಯಾ ವಿಮಾನದಲ್ಲಿ ಕರೆತರಲಾಗಿದೆ.

ಈ ಹಡಗಿನಲ್ಲಿ ಭಾರತದ 138 ಮಂದಿ ಇದ್ದರು. ಅವರಲ್ಲಿ 16 ಮಂದಿಯಲ್ಲಿ (ಈ ಎಲ್ಲರೂ ಹಡಗಿನ ಸಿಬ್ಬಂದಿ) ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇವರಿಗೆ ಜಪಾನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟೋಕಿಯೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಎಲ್ಲರ ಜತೆ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ.

ಇದಕ್ಕೂ ಮೊದಲು, 647 ಭಾರತೀಯರನ್ನು ಚೀನಾದಿಂದ ಕರೆತರಲಾಗಿತ್ತು

ಭಾರತವು ಚೀನಾಕ್ಕೆ 15 ಟನ್‌ಗಳಷ್ಟು ಅಗತ್ಯ ವಸ್ತುಗಳನ್ನು ಕಳುಹಿಸಿದೆ

14 ದಿನ ಪ್ರತ್ಯೇಕ ವಾಸ

ದೆಹಲಿಗೆ ಬಂದಿರುವ ಎಲ್ಲರನ್ನೂ ಮುಂದಿನ 14 ದಿನ ಪ್ರತ್ಯೇಕವಾಗಿ ಇರಿಸಲಾಗುವುದು. ಇಂಡೊ–ಟಿಬೆಟನ್‌ ಗಡಿ ಪೊಲೀಸ್‌ ಪಡೆಯು ದೆಹಲಿಯ ಛಾವ್ಲಾದಲ್ಲಿ ರೂಪಿಸಿರುವ ಕೇಂದ್ರದಲ್ಲಿ ಚೀನಾದಿಂದ ಬಂದವರನ್ನು ಇರಿಸಲಾಗುವುದು. ಭಾರತೀಯ ಸೇನೆಯು ಹರಿಯಾಣದ ಮನೇಸರ್‌ನಲ್ಲಿ ನಿರ್ಮಿಸಿರುವ ಪ್ರತ್ಯೇಕ ಕೇಂದ್ರದಲ್ಲಿ ಜಪಾನ್‌ನಿಂದ ಬಂದವರನ್ನು ಇರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT