‘ಬಿಜೆಪಿ ವಿರೋಧಿ ಮತದಾರರು ಡಿಲೀಟೆಡ್’

ಗುರುವಾರ , ಏಪ್ರಿಲ್ 25, 2019
21 °C
ಅರವಿಂದ ಕೇಜ್ರಿವಾಲ್ ಆರೋಪ l ಪಟ್ಟಿಯಲ್ಲಿ ಹೆಸರು ಇಲ್ಲದ್ದಕ್ಕೆ ಮತದಾರರ ಆಕ್ರೋಶ

‘ಬಿಜೆಪಿ ವಿರೋಧಿ ಮತದಾರರು ಡಿಲೀಟೆಡ್’

Published:
Updated:

ಬೆಂಗಳೂರು: ಬಿಜೆಪಿ ವಿರೋಧಿಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಹಲವು ಮತದಾರರು ಟ್ವೀಟ್‌ ಮಾಡಿದ್ದಾರೆ. ಆ ಟ್ವೀಟ್‌ಗಳನ್ನು ಮರುಟ್ವೀಟ್‌ ಮಾಡಿರುವ ಕೇಜ್ರಿವಾಲ್‌ ಈ ಮಾತು ಹೇಳಿದ್ದಾರೆ.

‘ಚುನಾವಣಾ ಆಯೋಗದಲ್ಲಿ ಏನಾಗುತ್ತಿದೆ? ಈ ಚುನಾವಣೆ ಮುಕ್ತ ಮತ್ತು ಸ್ವತಂತ್ರವಾಗಿ ನಡೆಯುತ್ತಿದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಬಿಜೆಪಿ ವಿರೋಧಿ ಮತದಾರರನ್ನು ದೇಶದಾದ್ಯಂತ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಕಾರಣವೇ ಇಲ್ಲದಂತೆ ಹಲವು ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ದೇಶದ ಎಲ್ಲ ಕಡೆಯಿಂದ ವರದಿಗಳು ಬರುತ್ತಿವೆ. ತಾಂತ್ರಿಕ ದೋಷವಿರುವ ಇವಿಎಂಗಳಲ್ಲಿ ಎಲ್ಲ ಮತಗಳೂ ಬಿಜೆಪಿಗೇ ಹೋಗುತ್ತಿವೆ. ಇದರ ಹಿಂದಿನ ಕಾರಣವೇನು’ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಟ್ವಿಟರ್‌ನಲ್ಲಿ ಆಕ್ರೋಶ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆಯಾಗಿರುವುದಕ್ಕೆ ಹಲವರು ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ನನ್ನ ಮತವನ್ನು ಡಿಲೀಟ್ ಮಾಡಲಾಗಿದೆ. ನನ್ನ ಮನೆ ಸಮೀಪದ ಯಾವ ಮತಗಟ್ಟೆಯ ಮತದಾರರ ಪಟ್ಟಿಯಲ್ಲೂ ನನ್ನ ಹೆಸರಿಲ್ಲ. ಡಿಸೆಂಬರ್‌ನಲ್ಲಿ ನಾನು ಮತ ಹಾಕಿದ್ದೆ. ಆದರೆ ಈಗ ಮತ ಹಾಕಲು ಸಾಧ್ಯವಾಗುತ್ತಿಲ್ಲ. ಈಗ ನಾನು ಪ್ರಶ್ನಿಸುವುದು ಯಾರನ್ನು? ಇದು ಭಾರತೀಯರಿಗೆ ಮಾಡುತ್ತಿರುವ ಅನ್ಯಾಯ’ ಎಂದು ತೆಲಂಗಾಣದ ಸಾಮ್ರಾಟ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ನನಗೆ ಸಾಕಾಗಿ ಹೋಗಿದೆ. ಡಿಸೆಂಬರ್‌ನಲ್ಲಿ ನಾವೆಲ್ಲಾ ಮತ ಚಲಾಯಿಸಿದ್ದೆವು, ಆದರೆ ಈಗ ನನ್ನ ಕುಟುಂಬದ ಎಲ್ಲರ ಹೆಸರು ಪಟ್ಟಿಯಿಂದ ನಾಪತ್ತೆ ಆಗಿವೆ. ಒಂದು ಕೆಲಸ ಮಾಡಿ. ಚುನಾವಣೆ ನಡೆಸುವ ಬದಲು ಅಭ್ಯರ್ಥಿಗಳಿಗೆ ನೀವು ಆಯ್ಕೆಯಾಗಿದ್ದೀರಿ ಎಂದು ನೇರವಾಗಿ ಪ್ರಮಾಣಪತ್ರ ನೀಡಿ. ಆಗ ದೇಶದ ಹಣವಾದರೂ ಉಳಿಯುತ್ತದೆ’ ಎಂದು ಅಜರುದ್ದೀನ್ ಪರ್ವೇಜ್ ಎಂಬುವವರು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತಯಂತ್ರಗಳ ಕಿರಿಕಿರಿ
ದೇಶದ ಹಲವೆಡೆ ಮತಯಂತ್ರಗಳು ಸರಿಯಾಗಿ ಕೆಲಸಮಾಡದ ಬಗ್ಗೆ ವರದಿಯಾಗಿದೆ. ಆಂಧ್ರಪ್ರದೇಶದಲ್ಲಿ 358 ಮತಯಂತ್ರಗಳು ತಾಂತ್ರಿಕ ಸಮಸ್ಯೆ ಎದುರಿಸಿದವು. ಅವನ್ನು ಸರಿಪಡಿಸಲಾಯಿತು ಎಂದು ಅಲ್ಲಿನ ಮುಖ್ಯ ಚುನಾವಣಾ ಅಧಿಕಾರಿ ಗೋಪಾಲ ಕೃಷ್ಣ ದ್ವಿವೇದಿ ಮಾಹಿತಿ ನೀಡಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದಲ್ಲೂ ಮತಯಂತ್ರಗಳು ಸರಿಯಾಗಿ ಕೆಲಸ ಮಾಡದ ಬಗ್ಗೆ ದೂರು ದಾಖಲಾಗಿವೆ. ‘ಪೂಂಛ್‌ನ ಮತಗಟ್ಟೆಯೊಂದರ ಮತಯಂತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಗುಂಡಿ (ಬಟನ್‌) ಕೆಲಸ ಮಾಡುತ್ತಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್‌ ಮುಖ್ಯಸ್ಥ ಒಮರ್ ಅಬ್ದುಲ್ಲಾ ಟ್ವೀಟ್‌ ಮಾಡಿದ್ದಾರೆ. ಮತದಾನ ಆರಂಭಕ್ಕೂ ಮೊದಲು ಪರಿಶೀಲನೆ ವೇಳೆ ಇದು ಬೆಳಕಿಗೆ ಬಂದಿದೆ ಎಂದಿರುವ ಅವರು, ಪರಿಶೀಲನೆಯ ವಿಡಿಯೊವನ್ನೂ ಟ್ವೀಟ್ ಮಾಡಿದ್ದಾರೆ.

*
ನನ್ನ ತಾಯಿ ಒಂದೇ ಮನೆಯಲ್ಲಿ 19 ವರ್ಷಗಳಿಂದ ವಾಸಿಸುತ್ತಿದ್ದಾರೆ. ಆ ವಿಳಾಸದಲ್ಲಿ ಅವರು ವಾಸಿಸುತ್ತಿಲ್ಲ ಎಂಬ ನೆಪವೊಡ್ಡಿ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ.
-ಕಿರಣ್ ಮಜುಂದಾರ್‌ ಶಾ, ಬಯೋಕಾನ್ ಮುಖ್ಯಸ್ಥೆ

*
ಭಾರತದ ಪ್ರಜೆಯಾಗಿ ಇಂದು ನನಗೆ ಅತ್ಯಂತ ಕೆಟ್ಟ ದಿನ. ಮತದಾರರ ಪಟ್ಟಿಯಿಂದ ನನ್ನ ಹೆಸರು ಕೈಬಿಡಲಾಗಿದೆ. ನನ್ನ ಮತಕ್ಕೆ ಬೆಲೆಯಿಲ್ಲವೇ.
-ಶೋಭನಾ ಕಾಮಿನೇನಿ, ಅಪೋಲೊ ಹಾಸ್ಪಿಟಲ್ಸ್‌ ಸಮೂಹದ ಉಪಾಧ್ಯಕ್ಷೆ

*
ನನ್ನ ಮತ್ತು ನನ್ನ ಅಣ್ಣನ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಶಹರಾನ್‌ಪುರದಲ್ಲಿ ಅದೆಷ್ಟು ಜನರ ಹೆಸರು ಮತದಾರರ ಪಟ್ಟಿಯಿಂದ ಇದ್ದಕ್ಕಿಂದಂತೆ ಮಾಯವಾಗಿವೆಯೋ?
-ಫೈಸಲ್ ಅಬ್ದಿ, ಮತದಾರ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !