ಉಗ್ರರ ದಾಳಿ: ಶಾಸಕ ಸೇರಿ 11 ಮಂದಿ ಸಾವು

ಸೋಮವಾರ, ಜೂನ್ 24, 2019
26 °C
ಅರುಣಾಚಲ ಪ್ರದೇಶದಲ್ಲಿ ಕೃತ್ಯ: ಎನ್‌ಎಸ್‌ಸಿಎನ್‌ ಕೈವಾಡ ಶಂಕೆ

ಉಗ್ರರ ದಾಳಿ: ಶಾಸಕ ಸೇರಿ 11 ಮಂದಿ ಸಾವು

Published:
Updated:
Prajavani

ಇಟಾನಗರ/ಗುವಾಹಟಿ: ಶಂಕಿತ ‘ಎನ್‌ಎಸ್‌ಸಿಎನ್‌(ಐಎಂ)’ ಸಂಘಟನೆ ಉಗ್ರರು ಮಂಗಳವಾರ ಮಧ್ಯಾಹ್ನ ನಡೆಸಿದ ದಾಳಿಯಲ್ಲಿ ನ್ಯಾಷನಲ್ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಶಾಸಕ ತಿರೊಂಗ ಅಬೊ ಹಾಗೂ ಅವರ ಪುತ್ರ ಸೇರಿ ಹನ್ನೊಂದು ಮಂದಿ ಮೃತಪಟ್ಟಿದ್ದಾರೆ.

ಅರುಣಾಚಲ ಪ್ರದೇಶದ ತಿರಪ್‌ ಜಿಲ್ಲೆಯ ಖೋನ್ಸಾ–ಡಿಮಾಲಿ ರಸ್ತೆಯಲ್ಲಿ ಈ ಕೃತ್ಯವನ್ನು ನಡೆಸಲಾಗಿದೆ.

ಅಬೊ (41) ಅವರು ಕೋನ್ಸಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಇದೇ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲ ಪಕ್ಷದಿಂದ 2014ರಲ್ಲಿ ಖೋನ್ಸಾ ಪಶ್ಚಿಮ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅಬೊ, ಎನ್‌ಪಿಪಿ ಸೇರಿದ್ದರು. ಲೋಕಸಭೆ ಚುನಾವಣೆ ಜತೆ ಅರುಣಾಚಲ ಪ್ರದೇಶ ವಿಧಾನಸಭೆಗೂ ಚುನಾವಣೆ ನಡೆದಿದೆ.

ಅಬೊ ಅಸ್ಸಾಂನಿಂದ ತಮ್ಮ ಕ್ಷೇತ್ರಕ್ಕೆ ಕುಟುಂಬದ ಸದಸ್ಯರು ಹಾಗೂ ಮೂವರು ಪೊಲೀಸ್‌ ಸಿಬ್ಬಂದಿ ಮತ್ತು ಚುನಾವಣಾ ಏಜಂಟ್‌ ಜತೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಉಗ್ರರು ಗುಂಡಿನ ಸುರಿಮಳೆಗೈದಿದ್ದಾರೆ. ಶಾಸಕ ಮತ್ತು ಇತರ ಹತ್ತು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಶಾಸಕರ ನಾಲ್ಕು ಬೆಂಗಾವಲು ವಾಹನಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಎಸ್‌.ಬಿ.ಕೆ. ಸಿಂಗ್‌ ತಿಳಿಸಿದ್ದಾರೆ.

ವಾಹನಗಳು ಅತಿ ವಿರಳವಾಗಿ ಸಂಚರಿಸುವ ಬೊಗಾಪನಿ ಪ್ರದೇಶದ ಚಹಾ ಎಸ್ಟೇಟ್‌ ಬಳಿ ಉಗ್ರರು ರೈಫಲ್‌ ಮೂಲಕ ದಾಳಿ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಕೆಲ ಮೃತದೇಹಗಳು ಸುಟ್ಟು ಕರಕಲಾಗಿವೆ. ಎರಡು ದೇಹಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಪವಾಡ ಸದೃಶವಾಗಿ ಪಾರಾಗಿರುವ ಒಬ್ಬ ಪೊಲೀಸ್‌ ಅಧಿಕಾರಿ, ಖೋನ್ಸಾ ನಗರಕ್ಕೆ ತೆರಳಿ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಶಾಸಕರ ಜತೆಗಿದ್ದ ಮಹಿಳೆಯೊಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಸೇನೆ ಈ ಪ್ರದೇಶದಲ್ಲಿ ಉಗ್ರರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 3

  Sad
 • 0

  Frustrated
 • 3

  Angry

Comments:

0 comments

Write the first review for this !