ಬುಧವಾರ, ನವೆಂಬರ್ 13, 2019
28 °C

ಅಯೋಧ್ಯೆ ತೀರ್ಪನ್ನು ಎಲ್ಲರೂ ಒಪ್ಪಬೇಕು: ಮುಸ್ಲಿಂ ಸಂಘಟನೆ ಮನವಿ

Published:
Updated:

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದಲ್ಲಿ ಸುಪ್ರೀಂ ಕೋರ್ಟ್‌ ನೀಡುವ ತೀರ್ಪು ತನಗೆ ಸ್ವೀಕಾರಾರ್ಹ. ಎಲ್ಲ ಮುಸ್ಲಿಮರು ತೀರ್ಪನ್ನು ಒಪ್ಪಿಕೊಳ್ಳಬೇಕು ಎಂದು ಮುಸ್ಲಿಂ ಸಮುದಾಯದ ಪ್ರಮುಖ ಸಂಘಟನೆ ಜಮೀಯತ್‌ ಉಲೇಮಾ ಎ ಹಿಂದ್‌ ಹೇಳಿದೆ.

ಯಾವುದೇ ದೇವಸ್ಥಾನ ಅಥವಾ ಪೂಜಾಸ್ಥಳವನ್ನು ಧ್ವಂಸ ಮಾಡಿ ಬಾಬರಿ ಮಸೀದಿ ನಿರ್ಮಾಣ ಆಗಿಲ್ಲ ಎಂಬ ಚಾರಿತ್ರಿಕ ಸತ್ಯ ಮತ್ತು ಸಾಕ್ಷ್ಯಗಳ ಆಧಾರದಲ್ಲಿ ಮುಸ್ಲಿಮರು ತಮ್ಮ ಹಕ್ಕು ಮಂಡಿಸಿದ್ದಾರೆ. ತೀರ್ಪು ಏನೇ ಬರಲಿ, ಎಲ್ಲರೂ ಅದನ್ನು ಗೌರವಿಸಬೇಕು ಎಂದು ಸಂಘಟನೆಯ ಅಧ್ಯಕ್ಷ ಮೌಲಾನಾ ಅರ್ಷದ್‌ ಮದನಿ ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಅಯೋಧ್ಯೆ ವಿವಾದವು ನಿವೇಶನಕ್ಕೆ ಸಂಬಂಧಿಸಿದ ಪ್ರಕರಣವಷ್ಟೇ ಅಲ್ಲ, ಕಾನೂನು ಸರ್ವಶ್ರೇಷ್ಠ ಎಂಬುದಕ್ಕೆ ಇದೊಂದು ನಿದರ್ಶನವಾಗಲಿದೆ ಎಂದು ಅವರು ಹೇಳಿದ್ದಾರೆ.  

‘ಸತ್ಯಾಂಶಗಳು ಮತ್ತು ಸಾಕ್ಷ್ಯಗಳ ಆಧಾರದಲ್ಲಿ ಪ್ರಕರಣ ಇತ್ಯರ್ಥವಾಗಬೇಕೇ ಹೊರತು ಧರ್ಮ ಮತ್ತು ನಂಬಿಕೆಯ ಆಧಾರದಲ್ಲಿ ಅಲ್ಲ ಎಂದು ನ್ಯಾಯವನ್ನು ಪ್ರೀತಿಸುವ ಪ್ರತಿ ವ್ಯಕ್ತಿಯೂ ಬಯಸುತ್ತಿದ್ದಾನೆ’ ಎಂದೂ ಅವರು ಹೇಳಿದ್ದಾರೆ. 

ಮುಂಬೈಯಲ್ಲಿ ಬಂದೋಬಸ್ತ್‌: ಮುಂಬೈ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೆಯೂ ನಿಗಾ ಇರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತೀರ್ಪಿಗೆ ಸಂಬಂಧಿಸಿ ಸಂಭ್ರಮಾ ಚರಣೆ ಅಥವಾ ಶೋಕಾಚರಣೆಗೆ ಅವಕಾಶ ಇಲ್ಲ. ನಿಷೇಧಾಜ್ಞೆ ಈಗಾಗಲೇ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)