ಗುರುವಾರ , ಮಾರ್ಚ್ 4, 2021
18 °C

ಅಯೋಧ್ಯೆ ನಿವೇಶನ ತನ್ನದು: ಅಖಾಡ ಪ್ರತಿಪಾದನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದಾತ್ಮಕ ಪ್ರದೇಶಕ್ಕೆ 1934ರಿಂದಲೂ ಮುಸ್ಲಿಮರಿಗೆ ಪ್ರವೇಶಕ್ಕೆ ಅವಕಾಶ ಇರಲಿಲ್ಲ. 2.77 ಎಕರೆ ವಿಸ್ತೀರ್ಣದ ಈ ನಿವೇಶನವು ಸಂಪೂರ್ಣವಾಗಿ ತನ್ನ ಸುಪರ್ದಿಯಲ್ಲಿಯೇ ಇತ್ತು ಎಂದು ಪ್ರಕರಣದ ಕಕ್ಷಿದಾರರಾದ ನಿರ್ಮೋಹಿ ಅಖಾಡವು ಸುಪ್ರೀಂ ಕೋರ್ಟ್‌ಗೆ ಹೇಳಿದೆ. 

ಪ್ರಕರಣದ ಮಧ್ಯಸ್ಥಿಕೆ ಪ್ರಯತ್ನ ವಿಫಲವಾದ ಕಾರಣದಿಂದ ನಿತ್ಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಆರಂಭವಾಯಿತು. 

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠದ ಮುಂದೆ ಹಿರಿಯ ವಕೀಲ ಸುಶಿಲ್‌ ಜೈನ್‌ ಅವರು ನಿರ್ಮೋಹಿ ಅಖಾಡ ಪರವಾಗಿ ವಾದ ಮಂಡಿಸಿದರು. ಇದು ಮುಖ್ಯವಾಗಿ ಸುಪರ್ದಿ ಮತ್ತು ನಿರ್ವಹಣೆ ಹಕ್ಕುಗಳ ಬಗೆಗಿನ ಪ್ರಕರಣ‌ ಎಂದು ಅವರು ಹೇಳಿದರು.  

‘ಒಳ ಪ್ರಾಕಾರ ಮತ್ತು ರಾಮ ಜನ್ಮಸ್ಥಾನವು ನೂರಾರು ವರ್ಷಗಳಿಂದ ಅಖಾಡದ ಅಧೀನದಲ್ಲಿದೆ. ಸೀತಾ ರಸೋಯಿ, ಚಬೂತ್ರ ಮತ್ತು ಭಂಡಾರ ಗೃಹಗಳಿರುವ ಹೊರ ಪ್ರಾಕಾರದ ಸುಪರ್ದಿಯ ಬಗ್ಗೆ ವಿವಾದ ಇಲ್ಲ. ಅದೇನೇ ಆದರೂ, ಈ ಸ್ಥಳವೂ ಅಖಾಡದ ಸ್ವಾಧೀನದಲ್ಲಿಯೇ ಇದೆ’ ಎಂದು ಜೈನ್‌ ಅವರು ವಾದಿಸಿದರು.

‘ಅನಾದಿ ಕಾಲದಿಂದಲೂ ನಿವೇಶನವು ಅಖಾಡದಲ್ಲಿ ಕೈಯಲ್ಲಿಯೇ ಇದೆ. ಅಖಾಡವು ರಾಮಲಲ್ಲಾನ ಪೂಜೆ ಮಾಡುತ್ತ ಬಂದಿದೆ’ ಎಂದು ಜೈನ್‌ ವಿವರಿಸಿದರು. 

‘ವಿವಾದಿತ ನಿವೇಶನದಲ್ಲಿ ಮುಸ್ಲಿಮರು 1934ರ ಮುಂಚೆ ಪ್ರಾರ್ಥನೆ ಸಲ್ಲಿಸುತ್ತಿದ್ದರು’ ಎಂಬ ವಿಚಾರದತ್ತ ಪೀಠವು ಗಮನ ಸೆಳೆಯಿತು. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಜೈನ್‌, ಅಲಹಾಬಾದ್‌ ಹೈಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದರು. ‘1934ರಿಂದ 1949ರವರೆಗೆ ಇಲ್ಲಿ ಮುಸ್ಲಿಮರು ಶುಕ್ರವಾರದ ನಮಾಜ್‌ ಮಾಡುತ್ತಿದ್ದರು’ ಎಂದು ತೀರ್ಪಿನಲ್ಲಿ ಇದೆ ಎಂದರು. 

ಪೀಠದ ಜತೆ ಧವನ್‌ ವಾಗ್ವಾದ

ಸಂವಿಧಾನ ಪೀಠ ಮತ್ತು ಮುಸ್ಲಿಂ ಕಕ್ಷಿದಾರರ ಪರ ಹಿರಿಯ ವಕೀಲ ರಾಜೀವ್‌ ಧವನ್‌ ನಡುವೆ ಬಿಸಿ ವಾಗ್ವಾದ ನಡೆಯಿತು. 

ನಿರ್ಮೋಹಿ ಅಖಾಡದ ವಕೀಲರ ವಾದವು ನಿವೇಶನ ವಿವಾದಕ್ಕಷ್ಟೇ ಸೀಮಿತವಾಗಿರಬೇಕು. ಲಿಖಿತ ಹೇಳಿಕೆಗಳನ್ನು ಓದುವ ಅಗತ್ಯ ಇಲ್ಲ ಎಂದು ಪೀಠವು ಸೂಚಿಸಿತು. ಆ ಸಂದರ್ಭದಲ್ಲಿ ಧವನ್‌ ಅವರು ಮಧ್ಯಪ್ರವೇಶಿಸಿ, ವಾದ ಮಂಡನೆಯನ್ನು ಮೊಟಕುಗೊಳಿಸಬಾರದು ಎಂದು ಕೋರಿದರು. 

ವಿಚಾರಣೆ ಮತ್ತು ವಾದವನ್ನು ಯಾವುದೇ ರೀತಿಯಲ್ಲಿಯೂ ಮೊಟಕು ಮಾಡುವುದಿಲ್ಲ. ಈ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ ಎಂದು ಗೊಗೊಯಿ ಅವರು ಸ್ಪಷ್ಟನೆ ನೀಡಿದರು. 

ಧವನ್‌ ಅವರು ಅಲ್ಲಿಗೆ ನಿಲ್ಲಿಸದೆ, ಆ ಕಾರಣಕ್ಕಾಗಿಯೇ ತಾವು ಹೇಳಿಕೆ ನೀಡಿದ್ದು ಎಂದರು. ‘ಧವನ್‌ ಅವರೇ, ನ್ಯಾಯಾಲಯದ ಘನತೆಯನ್ನು ಕಾಪಾಡಿ’ ಎಂದು ಗೊಗೊಯಿ ಹೇಳಿದರು. ‘ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಕೆಲಸ ಮಾತ್ರ ಮಾಡಿದ್ದೇನೆ’ ಎಂದು ಧವನ್‌ ಮತ್ತೆ ಹೇಳಿದರು. 

‘ನೀವು ಸುಪ್ರೀಂ ಕೋರ್ಟ್‌ನ ವಕೀಲ ಎಂಬುದು ಮನಸ್ಸಲ್ಲಿ ಇರಲಿ. ಯಾರದೇ ವಾದವನ್ನು ನಾವು ಮೊಟಕು ಮಾಡುವುದಿಲ್ಲ’ ಎಂದು ಪೀಠವು ಮತ್ತೆ ದೃಢಪಡಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು