ಶುಕ್ರವಾರ, ಮೇ 29, 2020
27 °C

ಅಯೋಧ್ಯೆ ವಿವಾದ: ಮಧ್ಯಸ್ಥಿಕೆ ಸಮಿತಿಗೆ ಆಗಸ್ಟ್‌ 15ರವರೆಗೆ ಕಾಲಾವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ಸಂಧಾನಕ್ಕೆ ಆಗಸ್ಟ್ 15ರವರೆಗೆ ಕಾಲಾವಕಾಶ ಕೊಡಲಾಗಿದೆ. 

ಈ ವ್ಯಾಜ್ಯದ ಇತ್ಯರ್ಥಕ್ಕೆ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಐ. ಕಲೀಫುಲ್ಲಾ, ಧಾರ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಮತ್ತು ಸಂಧಾನ ಪರಿಣಿತ ವಕೀಲ ಶ್ರೀರಾಮ್ ಪಂಚು ಅವರ ಸಂಧಾನ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತ್ತು. ಈ ಸಮಿತಿಯ ಮುಖ್ಯಸ್ಥರಾದ ಕಲೀಫುಲ್ಲಾ ಅವರು ಮೇ 7ರಂದೇ ಮಧ್ಯಂತರ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. 

‘ಸಮಿತಿಯು ಮೇ 7ರಂದೇ ವರದಿ ಸಲ್ಲಿಸಿದೆ. ಸಂಧಾನ ಪ್ರಕ್ರಿಯೆ ಪ್ರಗತಿದಾಯಕವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಸಂಧಾನ ಪೂರ್ಣಗೊಳಿಸಲು ಆಗಸ್ಟ್‌ 15ರವರೆಗೆ ಕಾಲಾವಕಾಶ ಕೋರಿದ್ದಾರೆ. ಈ ವ್ಯಾಜ್ಯದ ಇತ್ಯರ್ಥಕ್ಕೆ ಹಲವು ವರ್ಷಗಳೇ ಕಾದಿದ್ದೇವೆ. ಸಂಧಾನ ಯಶಸ್ವಿಯಾಗುವ ಬಗ್ಗೆ ಸಂಧಾನಕಾರರಲ್ಲಿ ವಿಶ್ವಾಸವಿದೆ. ಹೀಗಿದ್ದಾಗ ಇನ್ನಷ್ಟು ದಿನ ಕಾಲಾವಕಾಶ ಏಕೆ ನೀಡಬಾರದು’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠವು ಅಭಿಪ್ರಾಯಪಟ್ಟಿದೆ.

‘ಸಂಧಾನ ಪ್ರಕ್ರಿಯೆ ಸುಲಲಿತವಾಗಿ ನಡೆಯುತ್ತಿದೆ. ಸಮಿತಿಯ ಮೇಲೆ ನಮಗೆ ವಿಶ್ವಾಸವಿದೆ ಮತ್ತು ಅವರಿಗೆ ನಾವು ಪೂರ್ಣ ಸಹಕಾರ ನೀಡುತ್ತಿದ್ದೇವೆ’ ಎಂದು ಪ್ರಕರಣದಲ್ಲಿ ವಾದಿ ಮತ್ತು ಪ್ರತಿವಾದಿಗಳ ಪರ ವಕೀಲರು ಹೇಳಿದ್ದಾರೆ.

ವಕೀಲರೊಬ್ಬರ ಆಕ್ಷೇಪ: 

‘ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಪ್ರಾದೇಶಿಕ ಭಾಷೆಯಲ್ಲಿವೆ. ಅವುಗಳಲ್ಲಿ ಕೆಲವನ್ನು ತಪ್ಪಾಗಿ ಭಾಷಾಂತರಿಸಲಾಗಿದೆ. ಇದರಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ’ ಎಂದು ವಕೀಲರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.

ಪೀಠವು ಇದನ್ನು ಅಲ್ಲಗೆಳೆಯಿತು. ‘ಅಂತಹ ಯಾವುದೇ ಆಕ್ಷೇಪಗಳಿದ್ದರೆ ಜೂನ್‌ 30ರ ವಿಚಾರಣೆ ವೇಳೆ ಅದನ್ನು ಲಿಖಿತ ರೂಪದಲ್ಲಿ ಸಲ್ಲಿಸಿ. ಆದರೆ ಇದೊಂದೇ ಕಾರಣಕ್ಕೆ ಸಂಧಾನಕ್ಕೆ ತಡೆ ನೀಡಲಾಗದು’ ಎಂದು ಪೀಠವು ಸೂಚಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು