ಗುರುವಾರ , ನವೆಂಬರ್ 21, 2019
21 °C

ಐತಿಹಾಸಿಕ ಅಯೋಧ್ಯೆ ತೀರ್ಪು: ಯಾರು ಏನಂದರು?

Published:
Updated:

ರಾಜಕೀಯ ಆಟಕ್ಕೆ ತೆರೆ
ಮಂದಿರ ನಿರ್ಮಾಣದ ಹಾದಿಯನ್ನು ಸುಗಮಗೊಳಿಸಿರುವ ಸುಪ್ರೀಂ ಕೋರ್ಟ್‌ ತೀರ್ಪನ್ನು ಕಾಂಗ್ರೆಸ್‌ ಸ್ವಾಗತಿಸುತ್ತದೆ. ಈ ವಿವಾದವನ್ನೇ ದಾಳ ಆಗಿಸಿಕೊಂಡಿದ್ದ ಬಿಜೆಪಿ ಮತ್ತಿತರ ಪಕ್ಷಗಳ ರಾಜಕೀಯ ಆಟಕ್ಕೆ ತೆರೆ ಬೀಳಲಿದೆ.

–ರಣದೀಪ್‌ ಸುರ್ಜೆವಾಲಾ, ಕಾಂಗ್ರೆಸ್‌ ಮುಖಂಡ

**

ಸಮಗ್ರತೆ ಎತ್ತಿ ಹಿಡಿದ ತೀರ್ಪು
ಭಾರತಕ್ಕೆ ಇಂದು ಭವ್ಯ ದಿನ. ನ್ಯಾಯಾಲಯವು ಎಲ್ಲ ಅರ್ಜಿದಾರರ ಹಿತಾಸಕ್ತಿಗೆ ಅನುಗುಣವಾದ ಸಮತೋಲಿತ ತೀರ್ಪು ನೀಡಿದೆ. ದೇಶದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವ ಆದೇಶವಿದು.

–ಸಿ.ಎಸ್‌. ವೈದ್ಯನಾಥನ್‌, ರಾಮಲಲ್ಲಾ ಪರ ವಕೀಲರು

**

ಇದ್ಯಾವ ನ್ಯಾಯ?
ಮಸೀದಿ ಇದ್ದ ಜಾಗದ ಬದಲು ನಮಗೆ 100 ಎಕರೆ ಭೂಮಿ ನೀಡಿದರೂ ಅರ್ಥವಿಲ್ಲ. ಈಗಾಗಲೇ ನಮ್ಮ 67 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅದರ ಬದಲು ಇಷ್ಟು ಭೂಮಿಯನ್ನು ದಾನ ನೀಡುವುದೆಂದರೆ ಯಾವ ನ್ಯಾಯ?

–ಕಮಾಲ್‌ ಫರೂಕಿ, ವಕೀಲರು, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

**

ದೇವರಿಗೆ ಧನ್ಯವಾದ
ದಶಕಗಳ ವಿವಾದಕ್ಕೆ ತೆರೆ ಎಳೆದಿರುವ ಈ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ. ಎಲ್ಲ ಮುಸ್ಲಿಮರು ಈ ತೀರ್ಪನ್ನು ಸ್ವಾಗತಿಸಿದ್ದಕ್ಕೆ ನಾನು ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ.

–ಮೌಲಾನಾ ಕಲ್ಬೆ ಜಾವೇದ್‌, ಷಿಯಾ ಗುರು

**

ಎಲ್ಲರನ್ನೂ ಒಗ್ಗೂಡಿಸಬೇಕು
ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದ್ದು, ಎಲ್ಲ ಸಮುದಾಯಗಳು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ರಾಮ ಮಂದಿರ ನಿರ್ಮಿಸುವ ಹೊಣೆ ಹೊತ್ತುಕೊಳ್ಳುವ ಟ್ರಸ್ಟ್‌ ಸಹ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು.

-ಮುರುಳಿ ಮನೋಹರ ಜೋಶಿ, ಬಿಜೆಪಿ ಹಿರಿಯ ಮುಖಂಡ

**

ಅಡ್ವಾಣಿಗೆ ಶ್ರೇಯ ಸಲ್ಲಬೇಕು
ರಾಮಜನ್ಮಭೂಮಿ ಆಂದೋಲನದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಅವರ ಪಾತ್ರ ಹಿರಿದಾಗಿದೆ. ಅಡ್ವಾಣಿ ಅವರನ್ನು ಭೇಟಿಯಾಗಿ ತಲೆಬಾಗಿ ಪಾದಗಳಿಗೆ ನಮಸ್ಕರಿಸಿದೆ. ರಾಮಮಂದಿರಕ್ಕಾಗಿ ಅವರು ನಡೆಸಿದ ನಿರಂತರ ಹೋರಾಟ, ಪರಿಶ್ರಮದಿಂದಾಗಿ ಬಿಜೆಪಿ ಯಶಸ್ಸು ಸಾಧಿಸಿ ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿದೆ.

-ಉಮಾ ಭಾರತಿ, ಬಿಜೆಪಿ ಹಿರಿಯ ನಾಯಕಿ

**

ವಿಶ್ವಾಸ ಮೂಡಿಸಲು ಸಕಾಲ
ನ್ಯಾಯಾಲಯದ ತೀರ್ಪು ಗೌರವಿಸಿ, ಸೌಹಾರ್ದಯುತ ವಾತಾವರಣ ಕಾಪಾಡಬೇಕು. ಎಲ್ಲ ಭಾರತೀಯರು ಪರಸ್ಪರ ವಿಶ್ವಾಸ, ಪ್ರೀತಿ ವ್ಯಕ್ತಪಡಿಸಲು ಇದು ಸಕಾಲವಾಗಿದೆ.

-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಸಂಸದ

**

2024ರ ಒಳಗೆ ರಾಮಮಂದಿರ
ನ್ಯಾಯಾಲಯ ಸಮತೋಲನದಿಂದ ಕೂಡಿದ ತೀರ್ಪು ನೀಡಿದೆ. ಇಲ್ಲಿ ಸೋಲು ಅಥವಾ ಗೆಲುವಿನ ಪ್ರಶ್ನೆ ಉದ್ಭವಿಸಿಲ್ಲ. ರಾಮ ಜನ್ಮಭೂಮಿ ನ್ಯಾಸ ಸಿದ್ಧಪಡಿಸಿರುವ ವಿನ್ಯಾಸದಂತೆಯೇ ಸರ್ಕಾರ ರಚಿಸಲಿರುವ ಟ್ರಸ್ಟ್‌ ಅದ್ಭುತವಾದ ರಾಮ ಮಂದಿರ ನಿರ್ಮಿಸುವ ವಿಶ್ವಾಸವಿದೆ. 2024ರ ಒಳಗೆಯೇ ರಾಮಮಂದಿರ ನಿರ್ಮಾಣವಾಗುವ ನಂಬಿಕೆ ಇದೆ.

-ವಿಷ್ಣು ಸದಾಶಿವ ಕೊಕ್ಜೆ, ವಿಎಚ್‌ಪಿ ಅಂತರರಾಷ್ಟ್ರೀಯ ಅಧ್ಯಕ್ಷ

**

ವಿವಾದ ಮರೆಯೋಣ
ಇದು ಯಾರೊಬ್ಬರ ಜಯ ಅಥವಾ ಸೋಲು ಅಲ್ಲ. ಸತ್ಯ ಮತ್ತು ನ್ಯಾಯ ಇಲ್ಲಿ ಮೇಲುಗೈ ಸಾಧಿಸಿದೆ. ದೇಶದ ಜನರ ಭಾವನೆಗಳಿಗೆ ತಕ್ಕಂತೆ ತೀರ್ಪು ಬಂದಿದೆ. ವಿವಾದ ಮರೆತು ರಾಮಮಂದಿರ ನಿರ್ಮಿಸಬೇಕಾಗಿದೆ.

-ಮೋಹನ್‌ ಭಾಗವತ್‌, ಆರ್‌ಎಸ್‌ಎಸ್‌ ಮುಖ್ಯಸ್ಥ

**

ಕಾರ್ಯಕರ್ತರ ತ್ಯಾಗದ ಫಲ
ತೀರ್ಪಿನಿಂದ ಅಪಾರ ಸಂತೋಷವಾಗಿದೆ. ಸೌಹಾರ್ದತೆ ಕಾಪಾಡುವ ಮೂಲಕ ದೇಶವನ್ನು ರಾಮಮಂದಿರದಿಂದ ರಾಮರಾಜ್ಯವಾಗುವತ್ತ ಕೊಂಡೊಯ್ಯಬೇಕು. ಲಕ್ಷಾಂತರ ಕಾರ್ಯಕರ್ತರು ರಾಮಮಂದಿರ ನಿರ್ಮಾಣದ ಹೋರಾಟಕ್ಕಾಗಿ ತಮ್ಮ ಬದುಕು ತ್ಯಾಗ ಮಾಡಿದ್ದಾರೆ. ಮುಖ್ಯವಾಗಿ ಈ ಹೋರಾಟದ ಯಶಸ್ಸು ಎಲ್‌.ಕೆ. ಅಡ್ವಾಣಿ ಮತ್ತು ವಿಎಚ್‌ಪಿ ಹಿರಿಯ ಮುಖಂಡ ದಿವಂಗತ ಅಶೋಕ್‌ ಸಿಂಘಾಲ್‌ ಅವರಿಗೆ ಸಲ್ಲಬೇಕು.

-ಕೆ.ಎನ್‌. ಗೋವಿಂದಾಚಾರ್ಯ, ಭಾರತ ವಿಕಾಸ ಸಂಗಮ ಸಂಸ್ಥಾಪಕ ಅಧ್ಯಕ್ಷ , ಆರ್‌ಎಸ್‌ಎಸ್‌ ಸಿದ್ಧಾಂತದ ಪ್ರತಿಪಾದಕ

**

ಕಾರ್ಯಕರ್ತರಿಗೆ ನಮಸ್ಕಾರ
ರಾಮನ ಜನ್ಮಸ್ಥಳದಲ್ಲೇ ರಾಮಮಂದಿರ ನಿರ್ಮಿಸಬೇಕು ಎನ್ನುವುದು ಹಿಂದೂಗಳ ಬೇಡಿಕೆಯಾಗಿತ್ತು. 450ಕ್ಕೂ ಹೆಚ್ಚು ವರ್ಷಗಳಿಂದಲೂ ಈ ಬೇಡಿಕೆ ಮುಂದಿಟ್ಟಿದ್ದರು. ಇದಕ್ಕಾಗಿ ಲಕ್ಷಾಂತರ ಕಾರ್ಯಕರ್ತರು ತಮ್ಮ ಬದುಕು, ವೃತ್ತಿಜೀವನ, ಕುಟುಂಬವನ್ನು ತ್ಯಾಗ ಮಾಡಿ ಹೋರಾಟ ಮಾಡಿದ್ದರಿಂದ ಈಗ ರಾಮಮಂದಿರಕ್ಕೆ ಅದೇ ಜಾಗ ದೊರೆತಿದೆ. ಹೋರಾಟ ನಡೆಸಿದ ಕಾರ್ಯಕರ್ತರಿಗೆ ನನ್ನ ನಮಸ್ಕಾರ.

–ಪ್ರವೀಣ ತೊಗಡಿಯಾ, ವಿಎಚ್‌ಪಿ ಮಾಜಿ ಅಧ್ಯಕ್ಷ

**
ಶ್ಲಾಘನೀಯ ತೀರ್ಪು
ಭಗವಾನ್ ಶ್ರೀರಾಮ ಅಯೋಧ್ಯೆಯಲ್ಲಿ ಜನಿಸಿದ್ದ ಎಂಬುದನ್ನು ಸುಪ್ರೀಂಕೋರ್ಟ್‌ ತೀರ್ಪು ಸ್ಪಷ್ಟಪಡಿಸಿದೆ. ಇದು ಶ್ಲಾಘನೀಯ. ರಾಮ ಮಂದಿರ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿ. ಟ್ರಸ್ಟ್‌ ಸಹ ಈಗಾಗಲೇ ಅಸ್ತಿತ್ವದಲ್ಲಿ ಇದೆ. ಪಿ.ವಿ. ನರಸಿಂಹರಾವ್‌ ಅವರು ಪ್ರಧಾನಿಯಾಗಿದ್ದಾಗಲೇ ಟ್ರಸ್ಟ್‌ ರಚಿಸಲಾಗಿದೆ.
-ಶಂಕರಾಚಾರ್ಯ ಸ್ವಾಮಿ ‌ಸ್ವರೂಪಾನಂದ ಸರಸ್ವತಿ, ಮಧ್ಯಪ್ರದೇಶ

**

ಕೆಲವು ಅಂಶಗಳು ಪ್ರಶ್ನಾರ್ಹ
ಕೋಮುವಾದಿ ಶಕ್ತಿಗಳು ವಿವಾದವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡವು. ಇದರಿಂದಾಗಿ, ಅಪಾರ ಹಿಂಸಾಚಾರ ಸಂಭವಿಸಿ ಹಲವು ಜೀವಗಳನ್ನು ಕಳೆದುಕೊಳ್ಳಬೇಕಾಯಿತು. ಈಗ ನ್ಯಾಯಾಲಯ ವಿವಾದವನ್ನು ಅಂತ್ಯಗೊಳಿಸಿದೆ. ಆದರೆ, ತೀರ್ಪಿನ ಕೆಲವು ಅಂಶಗಳು ಪ್ರಶ್ನಾರ್ಹವಾಗಿವೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ತ್ವರಿತಗಳಿಸಬೇಕಾಗಿದೆ.

-ಸೀತಾರಾಂ ಯೆಚೂರಿ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ

**

ನ್ಯಾಯಾಲಯದ ತೀರ್ಪು ಸ್ವಾಗತಾರ್ಹ. ಒಗ್ಗಟ್ಟು ಮತ್ತು ಸೌಹಾರ್ದತೆ ಕಾಪಾಡಲು ಎಲ್ಲರೂ ಸಹಕರಿಸಬೇಕು.

-ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶ ಮುಖ್ಯಮಂತ್ರಿ

**

ಸೌಹಾರ್ದಯುತ ವಾತಾವರಣ ನೆಲಸಲಿ
ನ್ಯಾಯಾಲಯದ ಐತಿಹಾಸಿಕ ತೀರ್ಪು ಗೌರವಿಸುತ್ತೇನೆ. ಮುಂದಿನ ನಿರ್ಧಾರಗಳನ್ನು ಸೌಹಾರ್ದಯುತ ವಾತಾವರಣದಲ್ಲಿ  ಕೈಗೊಳ್ಳಬೇಕು. ಶಾಂತಿ, ಸೌಹಾರ್ದಯುತ ವಾತಾವರಣವನ್ನು ಎಲ್ಲರೂ ಕಾಪಾಡಬೇಕು.

-ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

**

ಉತ್ತಮ ನಿರ್ಧಾರ
ಅಂತರ ಕಡಿಮೆ ಮಾಡುವ ನಿರ್ಧಾರಗಳಿಂದ ಜನರಲ್ಲಿ ಉತ್ತಮ ಮಾನವೀಯ ಮೌಲ್ಯದ ಗುಣಗಳನ್ನು ಬೆಳೆಸಲು ಪೂರಕವಾಗುತ್ತದೆ.

-ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ

**
ತೀರ್ಪನ್ನು ಗೌರವಿಸುತ್ತೇವೆ
ಈ ಮೊದಲೇ ಹೇಳಿದಂತೆ ನಾವು ತೀರ್ಪನ್ನು ಗೌರವಿಸುತ್ತೇವೆ. ಆದರೆ, ತೀರ್ಪನ್ನು ಮರು ಪರಿಶೀಲಿಸುವಂತೆ ಅರ್ಜಿ ಸಲ್ಲಿಸುವ ವಿಷಯದಲ್ಲಿ ನಮ್ಮ ಒಮ್ಮತವಿಲ್ಲ.
–ಶಾಹಿ ಇಮಾಮ್‌ ಬುಖಾರಿ, ದೆಹಲಿ ಜಾಮಿಯಾ ಮಸೀದಿ

ಪ್ರತಿಕ್ರಿಯಿಸಿ (+)