ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ತೀರ್ಪು: ಶಿಲ್ಪಿ ನಿಧನ, ಸದ್ದು ನಿಲ್ಲಿಸಿದ ಶಿಲ್ಪ ಕೆತ್ತನೆ ಕಾರ್ಯ

Last Updated 7 ನವೆಂಬರ್ 2019, 10:32 IST
ಅಕ್ಷರ ಗಾತ್ರ

ಅಯೋಧ್ಯೆ: ರಾಮ ಮಂದಿರ - ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ದೇಶವು ಸುಪ್ರೀಂ ಕೋರ್ಟಿನ ತೀರ್ಪಿನ ನಿರೀಕ್ಷೆಯಲ್ಲಿರುವಂತೆಯೇ, ಅಲ್ಲಿನ ಕರಸೇವಕಪುರಂನಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿರುವ ಶಿಲ್ಪ ಕೆತ್ತನೆ ಚಟುವಟಿಕೆಗಳು ಮೌನಕ್ಕೆ ಶರಣಾಗಿವೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನ.17ರಂದು ಪದ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ, ಅವರ ನಿರ್ಗಮನಕ್ಕೆ ಮುನ್ನವೇ ಅಯೋಧ್ಯೆಯ ಜಮೀನು ವಿವಾದಕ್ಕೊಂದು ಪರಿಹಾರ ನೀಡುವ ತೀರ್ಪು ಹೊರಬೀಳಲಿದೆ ಎಂದು ದೇಶದಾದ್ಯಂತ ನಿರೀಕ್ಷೆ ಇದೆ. ಈ ಬಗ್ಗೆ ಪೊಲೀಸರು ಕೂಡ ಸಾಕಷ್ಟು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕಾಗಿ ಕಲ್ಲು ಕೆತ್ತನೆ ಮಾಡುವ 'ನಿರ್ಮಾಣ ಕಾರ್ಯಶಾಲಾ' ಶಿಲ್ಪಿಯು ಇತ್ತೀಚೆಗಷ್ಟೇ ನಿಧನರಾಗಿದ್ದರು. ಕಳೆದ ಕೆಲವು ತಿಂಗಳಿಂದ ಅವರು ಏಕಾಂಗಿಯಾಗಿಯೇ ಕೆಲಸ ನಿರ್ವಹಿಸುತ್ತಿದ್ದು, ಬಹುಶಃ ಕಳೆದ ಮೂರು ದಶಕಗಳಲ್ಲೇ ಮೊದಲ ಬಾರಿಗೆ ಈಗ ಈ ಕಾರ್ಯಶಾಲೆಯಿಂದ ಬರುತ್ತಿದ್ದ ಕಲ್ಲು ಕೆತ್ತನೆಯ ಸದ್ದು ನಿಂತು ಹೋಗಿದೆ. ಇದರ ಪುನರಾರಂಭದ ದಿನವನ್ನು ಕಾರ್ಯಶಾಲೆಯ ಉಸ್ತುವಾರಿ ವಹಿಸಿಕೊಂಡಿರುವ ರಾಮ ಜನ್ಮಭೂಮಿ ನ್ಯಾಸವು ಸಭೆ ಸೇರಿದ ಬಳಿಕ ನಿರ್ಧರಿಸಲಿದೆ.

ಭಕ್ತರು ಕಾರ್ತಿಕ ಪೂರ್ಣಿಮೆ ಸ್ನಾನಕ್ಕಾಗಿ ಅಯೋಧ್ಯೆಗೆ ಆಗಮಿಸಿದ್ದು, ಈಗಾಗಲೇ ಅಲ್ಲಿ ಕೆತ್ತಲಾಗಿರುವ ಕಲ್ಲುಗಳಿಗೆ ಭಕ್ತಿಯಿಂದ ಪ್ರದಕ್ಷಿಣೆ ನಡೆಸುತ್ತಿದ್ದಾರೆ. ಅವರು ಕಲ್ಲನ್ನು ಮುಟ್ಟಿ ನಮಸ್ಕರಿಸುತ್ತಿದ್ದಾರೆ ಮತ್ತು ಅದರ ಎದುರು ಸೆಲ್ಫೀ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಈ ಕಾರ್ಯಶಾಲೆಯಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಅಂದರೆ 1990ರಿಂದಲೇ ಕೆತ್ತನೆ ಕಾರ್ಯಗಳು ಆರಂಭವಾಗಿದ್ದು, ನಿರಂತರವಾಗಿ ನಡೆದುಕೊಂಡು ಬರುತ್ತಿತ್ತು. 1992ರಲ್ಲಿ ಬಾಬರಿ ಮಸೀದಿ ಧ್ವಂಸವಾಗಿ, ಆರೆಸ್ಸೆಸ್, ವಿಹಿಂಪ ಮತ್ತಿತರ ಸಂಘಟನೆಗಳನ್ನು ನಿಷೇಧಿಸಿದಾಗಲೂ, ಕೆತ್ತನೆ ಕಾರ್ಯ ಮುಂದುವರಿದಿತ್ತು. ಈಗಾಗಲೇ ಶೇ.65ರಷ್ಟು ಕಾರ್ಯವು ಪೂರ್ಣಗೊಂಡಿದೆ. ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗಲೂ ರಾಜಸ್ಥಾನ ಮತ್ತು ಗುಜರಾತ್‌ಗಳಿಂದ ಇಲ್ಲಿಗೆ ಕಲ್ಲುಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಕೆತ್ತನೆ ಕಾರ್ಯ ಮುಂದುವರಿದಿತ್ತು. ಆದರೆ ಇತ್ತೀಚೆಗೆ ಕಾರ್ಯಶಾಲೆಯ ಪ್ರಧಾನ ಶಿಲ್ಪಿ ನಿಧನರಾದ ಬಳಿಕ ಕಾರ್ಯಗಳು ಸ್ಥಗಿತವಾಗಿದ್ದವು.

ಅಯೋಧ್ಯೆ ಪ್ರಕರಣದ ಇತಿಹಾಸ
ಅಯೋಧ್ಯೆ ಪ್ರಕರಣದ ಇತಿಹಾಸ

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವಷ್ಟೇ ರಾಮ ಜನ್ಮಭೂಮಿ ನ್ಯಾಸವು ಸಭೆ ಸೇರಿ, ಮತ್ತಷ್ಟು ಶಿಲ್ಪಿಗಳನ್ನು ಸೇರಿಸಿಕೊಳ್ಳುವ ಹಾಗೂ ಕೆತ್ತನೆ ಕಾರ್ಯ ಪುನರಾರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಥಳೀಯ ವಿಶ್ವ ಹಿಂದೂ ಪರಿಷತ್ ವಕ್ತಾರ ಶರದ್ ಶರ್ಮಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

1989ರ ನವೆಂಬರ್ 10ರಂದೇ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿತ್ತು. 1990ರ ಆಗಸ್ಟ್ 30ರಂದು ಈ ಕಾರ್ಯಶಾಲೆಯು ಅಸ್ತಿತ್ವಕ್ಕೆ ಬಂದಿತ್ತು. ಸುಮಾರು ಏಳು ವರ್ಷಗಳ ಕಾಲ ಕೆತ್ತನೆ ಕಾರ್ಯ ಮುಂದುವರಿದಿತ್ತು. ಬಳಿಕ ಹೈಕೋರ್ಟ್ ಕೇಸುಗಳಿಂದಾಗಿ ಕೆಲ ಕಾಲ ಇದು ಸ್ಥಗಿತಗೊಂಡಿತ್ತು. ನಂತರ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಕೆತ್ತನೆ ಕಾರ್ಯವು ಪುನರಾರಂಭಗೊಂಡಿತ್ತು.

ಅಯೋಧ್ಯೆಗೆ ಭೇಟಿ ನೀಡುವವರಿಗೆ ಈ ಕೆತ್ತನೆ ಕಾರ್ಯಶಾಲೆಯು ಪ್ರಧಾನ ಆಕರ್ಷಣೆಯಾಗಿತ್ತು. ರಾಮ ಜನ್ಮಭೂಮಿ - ಬಾಬರಿ ಮಸೀದಿಯ ಸ್ಥಳದಿಂದ ಇದು ಕೇವಲ 3 ಕಿ.ಮೀ. ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT