ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸಾಚಾರಗಳಿಗೆ ಮಮತಾ ನೇರ ಹೊಣೆ: ಬಾಬುಲ್ ಸುಪ್ರಿಯೊ

Last Updated 9 ಮೇ 2019, 18:11 IST
ಅಕ್ಷರ ಗಾತ್ರ

ಸಂಗೀತ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಧುಮುಕಿದ ಮೊದಲ ಯತ್ನದಲ್ಲಿಯೇ ಬಾಬುಲ್ ಸುಪ್ರಿಯೊ ಅವರು ಜಯಗಳಿಸಿ, ಮೋದಿ ಸಂಪುಟದಲ್ಲಿ ಸಚಿವರೂ ಆಗಿದ್ದರು. ಪಶ್ಚಿಮ ಬಂಗಾಳದ ಅಸನ್‌ಸೋಲ್ ಲೋಕಸಭಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಅವರಿಗೆ ಈ ಬಾರಿ ನಟಿ, ತೃಣಮೂಲ ಕಾಂಗ್ರೆಸ್‌ನ ಮೂನ್ ಮೂನ್ ಸೇನ್‌ ಎದುರಾಳಿ. ಮೂನ್‌ ಮೂನ್‌ ಸೇನ್ ಅವರನ್ನು ಸಮರ್ಥ ಎದುರಾಳಿ ಎಂದೇ ಸುಪ್ರಿಯೊ ಪರಿಗಣಿಸಿಲ್ಲ. ‘ಪ್ರಜಾವಾಣಿ’ಯ ಸೌಮ್ಯ ದಾಸ್ ಜೊತೆ ಸುಪ್ರಿಯೊ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ

* ಅಸನ್‌ಸೋಲ್‌ನಲ್ಲಿ ಸ್ಟಾರ್ ವರ್ಸಸ್ ಸ್ಟಾರ್ ಸ್ಪರ್ಧೆ ಏರ್ಪಟ್ಟಿದೆ. ಮೂನ್‌ ಮೂನ್ ಸೇನ್ ಅವರು ನಿಮಗೆ ಹೇಗೆ ಸ್ಪರ್ಧೆ ಒಡ್ಡಬಲ್ಲರು?
ಅವರನ್ನು ಸ್ಟಾರ್ ಎಂದು ನೀವು ಏಕೆ ಕರೆಯುತ್ತೀರೋ ಗೊತ್ತಾಗುತ್ತಿಲ್ಲ. ಅವರಿಗೆ ತಾರಾ ವರ್ಚಸ್ಸು ಇದ್ದದ್ದೇ ಆದಲ್ಲಿ, ಅವರು ತಮ್ಮ ತಾಯಿ, ಪ್ರಸಿದ್ಧ ಬಂಗಾಳಿ ನಟಿ ಸುಚಿತ್ರಾ ಸೇನ್ ಅವರ ಖ್ಯಾತಿಯನ್ನು ಬಂಡವಾಳ ಮಾಡಿಕೊಳ್ಳುವ ಅಗತ್ಯವಿರಲಿಲ್ಲ. ಪೋಸ್ಟರ್‌ಗಳಲ್ಲಿ ತಾಯಿಯ ಚಿತ್ರ ಬಳಸಿಕೊಳ್ಳುತ್ತಿರುವುದನ್ನು ಕಂಡು ನನಗೆ ಅಚ್ಚರಿಯಾಯಿತು. ತಾಯಿಯ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ತಮಗೆ ಮತ ನೀಡಿ ಎಂದು ಸೇನ್ ಕೇಳುತ್ತಿದ್ದಾರೆ. ಇದು ಹಾಸ್ಯಾಸ್ಪದ ಅಲ್ಲವೇ? ತಮ್ಮ ಪುತ್ರಿಯು ಮಾಫಿಯಾ ಪಕ್ಷ ಟಿಎಂಸಿಯ ಅಭ್ಯರ್ಥಿಯಾಗಿದ್ದಾರೆ ಎಂದು ತಿಳಿದಿದ್ದರೆ ಸುಚಿತ್ರಾ ಸೇನ್ ತಲೆತಗ್ಗಿಸುತ್ತಿದ್ದರು. ನನ್ನ ವಿರುದ್ಧ ಮಾಡುತ್ತಿರುವ ವೈಯಕ್ತಿಕ ನಿಂದನೆಯನ್ನು ಗಮನಿಸಿದರೆ, ಪದವಿ ಪಡೆದ ಮಾತ್ರಕ್ಕೆ ವ್ಯಕ್ತಿಯೊಬ್ಬ ಸುಶಿಕ್ಷಿತ ಎಂದೆನಿಸಿಕೊಳ್ಳಲಾರ ಎಂಬುದು ಸ್ಪಷ್ಟವಾಗುತ್ತದೆ.

* 2014ರಲ್ಲಿ ಬಂಕುರಾ ಕ್ಷೇತ್ರದಿಂದ ಗೆದ್ದಿದ್ದ ಮೂನ್‌ ಮೂನ್‌ ಅವರನ್ನು ಈ ಬಾರಿ ಅಸನ್‌ಸೋಲ್‌ ಕ್ಷೇತ್ರದಿಂದ ಕಣಕ್ಕಿಳಿಸುವ ಹಿಂದಿನ ಉದ್ದೇಶ ಏನಿರಬಹುದು?
ಅವರನ್ನೇ ಕೇಳಿನೋಡಿ, ಇಲ್ಲಿಗೇಕೆ ಓಡಿಬಂದರು ಎಂದು. ಬಂಕುರಾಕ್ಕೆ ಮತ್ತೆ ಹೋಗಿ ಮುಖ ತೋರಿಸಲು ಅವರಿಗೆ ಆಗುತ್ತದೆಯೇ? ಆಕ್ಷೇಪಾರ್ಹ ಮಾತುಗಳಿಂದ ಅಲ್ಲಿನ ಜನರ ವಿರೋಧ ಕಟ್ಟಿಕೊಂಡಿದ್ದಾರೆ. ಬಿಹಾರಿಗಳು ಪೊಲೀಸ್‌ ಮಾಹಿತಿದಾರರು ಎಂದು ಒಮ್ಮೆ ಹೇಳುವ ಅವರು, ತಾವು ಸೇವಕಿ ಎಂದು ಹೇಳಿಕೊಳ್ಳುತ್ತಾರೆ. ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿರುವ ಅವರಿಗೆ ಶ್ರಮಿಕರ ಕಷ್ಟ ಗೊತ್ತಿಲ್ಲ.

* ರಾಮನವಮಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಟಿಎಂಸಿ, ಹಿಂದುತ್ವವನ್ನು ಹೈಜಾಕ್ ಮಾಡಿದೆ ಅನ್ನಿಸುವುದಿಲ್ಲವೇ?
ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಕಲಿ ಹಾಗೂ ಭ್ರಷ್ಟ ಜನರು ಗೆಲುವಿಗಾಗಿ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಬಂಗಾಳದ ಸ್ಥಿತಿಯನ್ನೇ ನೋಡಿ. ದೇಶದೆಲ್ಲೆಡೆ ಚುನಾವಣೆ ನಡೆಯುತ್ತಿದ್ದರೂ ಇಲ್ಲಿಯಷ್ಟು ಹಿಂಸಾಚಾರ ಬೇರೆ ಎಲ್ಲಾದರೂ ನಡೆದಿದೆಯೇ? ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಿದರಷ್ಟೇ ಮುಕ್ತವಾಗಿ ಮತದಾನ ಮಾಡಲು ಸಾಧ್ಯ ಎಂದು ಜನರೇ ಬೇಡಿಕೆಯಿಟ್ಟಿದ್ದಾರೆ. ಇದಕ್ಕೆ ಮಮತಾ ನೇರ ಹೊಣೆ.

* ಅಕ್ರಮ ಗಣಿಗಾರಿಕೆಯೇ ಅಸನ್‌ಸೋಲ್‌ನ ಪ್ರಮುಖ ವಿಷಯ. ಇದನ್ನು ಹೇಗೆ ಬಗೆಹರಿಸುತ್ತೀರಿ?
ಅಧಿಕಾರಿಗಳನ್ನು ವರ್ಗಾವಣೆ ಮಾಡುವುದೇ ಇದಕ್ಕೆ ಪರಿಹಾರ. ಅಸನ್‌ಸೋಲ್‌ನಲ್ಲಿ ಯಾವ ಗಣಿ ಕಂಪನಿಯು ಟಿಎಂಸಿಯ ಯಾವ ನಾಯಕರಿಗೆ ಹಣ ನೀಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ನಾನು ದೃಢ ನಿಲುವು ಹೊಂದಿದ್ದೇನೆ. ನನ್ನನ್ನ ಕಂಡರೆ ಮಾಫಿಯಾದವರು ಅಲ್ಲಿಂದ ಕಾಲ್ಕೀಳುತ್ತಾರೆ.

* ಅಲ್ಪಸಂಖ್ಯಾತರ ಮತಗಳನ್ನು ಪಡೆಯುವ ವಿಶ್ವಾಸ ನಿಮಗಿದೆಯೇ?
ಅಲ್ಪಸಂಖ್ಯಾತರು ದೊಡ್ಡ ಸಂಖ್ಯೆಯಲ್ಲಿ ನನಗೆ ಮತ ನೀಡಲಿದ್ದಾರೆ. ಕಪಟಿ ಮುಖ್ಯಮಂತ್ರಿಯಿಂದ ಆ ಸಮುದಾಯ ವಂಚನೆಗೆ ಒಳಗಾಗಿದೆ. ಅಧಿಕಾರಕ್ಕೆ ಬರಲು ಮಮತಾ ಅವರು ತಮ್ಮನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬ ಅರಿವು ಆ ಸಮುದಾಯಗಳ ಜನರಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT