ರಾಜ್ಯಸಭೆ ಉಪಸಭಾಪತಿ ಚುನಾವಣೆ: ನವೀನ್ ಪಟ್ನಾಯಕ್‌ ಜತೆ ಮೋದಿ ಮಾತುಕತೆ

7

ರಾಜ್ಯಸಭೆ ಉಪಸಭಾಪತಿ ಚುನಾವಣೆ: ನವೀನ್ ಪಟ್ನಾಯಕ್‌ ಜತೆ ಮೋದಿ ಮಾತುಕತೆ

Published:
Updated:

ನವದೆಹಲಿ: ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದಾರೆ.

ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳದ (ಬಿಜೆಡಿ) ಸಂಸದರು ಎನ್‌ಡಿಎ ಪರ ಮತ ಚಲಾಯಿಸುವಂತೆ ಮೋದಿ ಮನವಿ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಆದರೆ, ದೂರವಾಣಿ ಕರೆ ಬಗ್ಗೆ ಉಭಯ ಪಕ್ಷಗಳು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಒಂದು ತಿಂಗಳ ಅವಧಿಯಲ್ಲಿ ಮೋದಿ ಅವರು ಪಟ್ನಾಯಕ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವುದು ಇದು ಎರಡನೇ ಬಾರಿ. ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ಸಂದರ್ಭದಲ್ಲಿಯೂ ಪಟ್ನಾಯಕ್‌ಗೆ ಮೋದಿ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದರು.

245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಒಂದು ಸ್ಥಾನ ಖಾಲಿ ಇದ್ದು, ಉಪಸಭಾಪತಿ ಆಯ್ಕೆಗೆ ಕನಿಷ್ಠ 123 ಸದಸ್ಯರ ಬೆಂಬಲದ ಅಗತ್ಯವಿದೆ. ಪ್ರತಿಪಕ್ಷ ಕಾಂಗ್ರೆಸ್‌ ಬಳಿ 115 ಸದಸ್ಯರ ಬೆಂಬಲ ಇದೆ. ಆಡಳಿತಾರೂಢ ಎನ್‌ಡಿಎ, ಪ್ರತಿಪಕ್ಷ ಕಾಂಗ್ರೆಸ್‌ ಇವೆರಡರ ಬಳಿಯೂ ಅಗತ್ಯ ಸಂಖ್ಯೆಯ ಸದಸ್ಯರು ಇಲ್ಲದ್ದರಿಂದ, ಚುನಾವಣೆ ಕುತೂಹಲ ಕೆರಳಿಸಿದೆ. 

ಈ ಮಧ್ಯೆ, ಎಐಎಡಿಎಂಕೆಯ 13, ತೆಲಂಗಾಣ ರಾಷ್ಟ್ರೀಯ ಸಮಿತಿಯ (ಟಿಆರ್‌ಎಸ್‌) 6, ಬಿಜು ಜನತಾದಳದ 9 ಸದಸ್ಯರು ಎನ್‌ಡಿಎ ಪರ ಮತ ಚಲಾಯಿಸುವ ಸಾಧ್ಯತೆಗಳಿದ್ದು, ಡಿಎಂಕೆ, ವೈಎಸ್‌ಆರ್‌ ಕಾಂಗ್ರೆಸ್‌, ತೆಲುಗು ದೇಶಂ, ಎನ್‌ಸಿಪಿ, ಆಮ್‌ಆದ್ಮಿ ಪಕ್ಷಗಳು ಕಾಂಗ್ರೆಸ್‌ ಪರ ನಿಲುವು ತಾಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ...

* ರಾಜ್ಯಸಭೆ ಉಪಸಭಾಪತಿ ಚುನಾವಣೆ: ಕನ್ನಡಿಗ ಬಿ.ಕೆ. ಹರಿಪ್ರಸಾದ್‌ ಕಣಕ್ಕೆ

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !