ಆಸೆಗೆ ಸೋತ ಮನಸ್ಸು

ಗುರುವಾರ , ಜೂನ್ 27, 2019
23 °C

ಆಸೆಗೆ ಸೋತ ಮನಸ್ಸು

ಗುರುರಾಜ ಕರಜಗಿ
Published:
Updated:

ಒಂದಾನೊಂದು ಕಾಲದಲ್ಲಿ ಬ್ರಹ್ಮದತ್ತ ರಾಜ್ಯಭಾರಮಾಡುತ್ತಿದ್ದಾಗ ಬೋಧಿಸತ್ವ ಅವನ ಮಗನಾಗಿ ಹುಟ್ಟಿದ್ದ. ಆತ ಕಾಶಿಗೆ ಶ್ರೇಷ್ಠಗುರುಗಳ ಕಡೆಗೆ ಹೋಗಿ ಸಕಲ ವಿದ್ಯೆಗಳಲ್ಲಿ ಪಾರಂಗತನಾಗಿ ಮರಳಿದ. ಸರಿಯಾದ ಸಮಯದಲ್ಲಿ ರಾಜ ಅವನಿಗೆ ಮದುವೆಯನ್ನು ಮಾಡಿದ. ಯುವರಾಜನಾಗಿ ಬೋಧಿಸತ್ವ ರಾಜ್ಯಭಾರವನ್ನು ಹೇಗೆ ಮಾಡುವುದೆಂಬುದನ್ನು ಕಲಿತುಕೊಂಡ. ನಂತರ ಬ್ರಹ್ಮದತ್ತ ಕಾಲವಾದ ಮೇಲೆ ಅವನೇ ರಾಜನಾಗಿ ಅತ್ಯಂತ ಧರ್ಮದಿಂದ ರಾಜ್ಯವನ್ನು ನಡೆಸುತ್ತಿದ್ದ. ಆತ ರಾಜ್ಯದ ಎಲ್ಲ ವರ್ಗದ ಜನತೆಗೆ ಸಮಾನವಾದ ವಿಶ್ವಾಸವನ್ನು ತೋರುತ್ತ ಅವರ ಪ್ರೀತಿಯನ್ನು ಗಳಿಸಿದ.

ಒಂದು ದಿನ ರಾಜ ತನ್ನ ಪರಿವಾರದೊಂದಿಗೆ ಉದ್ಯಾನವನದಲ್ಲಿದ್ದ ಪುಷ್ಕರಿಣಿಗೆ ಬಂದು ಕುಳಿತ. ರಾಜ ಬಂದದ್ದನ್ನು ಕಂಡು ಸಂಗೀತಕಾರರು ಸಂಗೀತ ನುಡಿಸಿದರು, ನರ್ತಕರು ನೃತ್ಯಮಾಡಿ ಅವನ ಮನಸ್ಸನ್ನು ರಂಜಿಸಿದರು. ರಾಜ ನಿಧಾನವಾಗಿ ಪುಷ್ಕರಿಣಿಯ ಸುತ್ತ ನಡೆಯತೊಡಗಿದ. ಆಗ ಅವನು ಒಂದು ಆಶ್ಚರ್ಯವನ್ನು ಗಮನಿಸಿದ. ನೀರಿನಲ್ಲಿದ್ದ ಮೀನುಗಳು ಗುಂಪುಗುಂಪಾಗಿ ಅವನನ್ನೇ ಅನುಸರಿಸಿಕೊಂಡು ಬರುತ್ತಿದ್ದವು. ಕ್ಷಣಮಾತ್ರದಲ್ಲಿ ಅತ್ಯಂತ ದೊಡ್ಡ ದೊಡ್ಡ ಮೀನುಗಳು ಮತ್ತು ಆಮೆಗಳೂ ಗುಂಪುಗುಂಪಾಗಿ ಬರಹತ್ತಿದವು. ಇದಕ್ಕೆ ಕಾರಣವೇನು ಎಂದು ಮಂತ್ರಿಗಳಿಗೆ ಕೇಳಿದಾಗ, ‘ಪ್ರಭುಗಳೇ ಈ ಜಲಚರಗಳೂ ತಮ್ಮ ಸೇವೆಯಲ್ಲಿರುವುದರಿಂದ ತಮ್ಮೊಂದಿಗೇ ಬರುತ್ತಿವೆ’, ಎಂದರು. ರಾಜ ಸಂತೋಷದಿಂದ ಮೀನುಗಳಿಗೆ ದಿನವೂ ಆಹಾರದ ವ್ಯವಸ್ಥೆ ಮಾಡಿದ. ನಿತ್ಯವೂ ಮಧ್ಯಾಹ್ನ ಹದಿನಾರು ಸೇರು ಆಹಾರವನ್ನು ಮೀನುಗಳಿಗೆ ನೀಡಲಾಗುತ್ತಿತ್ತು. ಆದರೆ ಆಹಾರವನ್ನು ಹಾಕಿದಾಗ ಕೆಲವು ಮೀನುಗಳು ಬರುತ್ತಿದ್ದವು ಮತ್ತೆ ಕೆಲವು ಯಾವಾಗಲಾದರೂ ಬರುತ್ತಿದ್ದವು. ಹೀಗಾಗಿ ಬಹಳಷ್ಟು ಆಹಾರ ನೀರಿನಲ್ಲಿ ಕರಗಿ, ಹರಿದು ಹೋಗಿ ವ್ಯರ್ಥವಾಗುತ್ತಿತ್ತು. ಅದಕ್ಕೆ ಮಂತ್ರಿಗಳು ಬಂದು ಉಪಾಯ ಮಾಡಿದರು. ಮಧ್ಯಾನ್ಹ ಆಹಾರ ಹಾಕುವಾಗ ತಮಟೆ ಬಾರಿಸುತ್ತಿದ್ದರು. ಆಗ ಬಂದ ಮೀನುಗಳಿಗೆ ಮಾತ್ರ ಆಹಾರ, ಉಳಿದವುಗಳಿಗೆ ಇಲ್ಲ. ಕೆಲದಿನಗಳಲ್ಲಿ ಮೀನುಗಳಿಗೆ ಇದು ಅರ್ಥವಾಗಿ ತಮಟೆ ಬಾರಿಸಿದ ತಕ್ಷಣ
ರಾಶಿ ರಾಶಿಯಾಗಿ ಬಂದು ಆಹಾರವನ್ನು ಸೇವಿಸುತ್ತಿದ್ದವು.

ಇದನ್ನು ಕಂಡ ಮೊಸಳೆಯೊಂದು ಎಲ್ಲ ಮೀನುಗಳು ಒಂದೆಡೆಗೆ ಬಂದ ಕೂಡಲೇ ತಾನು ರಭಸದಿಂದ ಬಂದು ಹೊಟ್ಟೆ ತುಂಬ ಮೀನುಗಳನ್ನು ತಿಂದು ಹೋಗುತ್ತಿತ್ತು. ಆಹಾರವನ್ನು ಹಾಕುತ್ತಿದ್ದ ಸೇವಕ ಈ ವಿಷಯವನ್ನು ರಾಜನಿಗೆ ಹೇಳಿದ. ಆಗ ರಾಜ, “ಆ ಮೊಸಳೆ ಬಂದಾಗ ಬಾಣದಿಂದ ಅದರ ಬೆನ್ನಿಗೆ ಹೊಡೆ. ಅದು ಇನ್ನೊಮ್ಮೆ ಈ ಕಡೆಗೆ ಬರುವ ಧೈರ್ಯ ಮಾಡಬಾರದು” ಎಂದ. ಅದರಂತೆ ಮೊಸಳೆ ನುಗ್ಗಿ ಬಂದಾಗ ಸೇವಕ ಬಾಣವನ್ನು ಸರಿಯಾಗಿ ಅದರ ಬೆನ್ನಿಗೆ ಹೊಡೆದ. ಅದು ನೋವಿನಿಂದ ಗಾಬರಿಯಾಗಿ ತನ್ನ ಸ್ಥಳಕ್ಕೆ ಸರಿದುಹೋಯಿತು. ನಂತರ ಸ್ವಲ್ಪ ಹೊತ್ತಿಗೆ ಸತ್ತು ಹೋಯಿತು. ಆಗ ಬೋಧಿಸತ್ವ ಒಂದು ಗಾಧೆಯನ್ನು ಹೇಳಿದ:

“ಎವಂಪಿ ಲೋಕಾಮಿಸಂ ಓಪತಂತೊ | ವಿಹಜ್ಞಾತಿ ಚಿತ್ತವಸಾನುಏತ್ತಿ ; ಸೋಹ  ಜ್ಞಾತಿ ಸಖಾನಮಜ್ಝೆ | ಮಚ್ಛಾನುಕೊ ಸೊರಿವ ಸುಂಸುಮಾರೊ ||” “ಈ ರೀತಿ ಲೌಕಿಕ ಲಾಭದ ಹಿಂದೆ ಓಡುತ್ತ, ತನ್ನ ಚಿತ್ತಕ್ಕೆ ಶರಣಾದ ಮನುಷ್ಯ ಕೊಲ್ಲಲ್ಪಡುತ್ತಾನೆ. ಅವನು ಮೀನುಗಳನ್ನು ಹಿಂಬಾಲಿಸಿ ಹೋಗುವ ಮೊಸಳೆಯಂತೆ ತನ್ನ ನೆಂಟರು ಮತ್ತು ಗೆಳೆಯರ ಮಧ್ಯದಲ್ಲಿ ಕೊಲ್ಲಲ್ಪಡುತ್ತಾನೆ”ಇದು ಗೊತ್ತಿದ್ದೂ ಮನಸ್ಸು ಅನ್ಯಾಯದ ಕಡೆಗೆ ಓಡುತ್ತದಲ್ಲ !

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !