ಬುಧವಾರ, ಸೆಪ್ಟೆಂಬರ್ 22, 2021
25 °C

ಬಂಧನ ಪರ್ವ: ಪೊಲೀಸರ ವಶದಲ್ಲಿರುವವರ ಇತ್ಯೋಪರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಪುಣೆ ಪೊಲೀಸರು ಮಂಗಳವಾರ ದೇಶದ ವಿವಿಧೆಡೆ ಒಟ್ಟು 10 ಚಳವಳಿಗಾರರ ಮನೆ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಕೆಲ ಸುದ್ದಿ ಚಾನೆಲ್‌ಗಳು ಈ ಬಂಧನವನ್ನು ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚಿಗೆ ತಳಕುಹಾಕಿವೆ. ಆದರೆ ಮನೆ ತಪಾಸಣೆ ಮತ್ತು ಸಾಕ್ಷಿಯ ದಾಖಲೆಗಳ ಪ್ರಕಾರ ಈ ದಾಳಿಗಳು ಪುಣೆ ಸಮೀಪ ಜನವರಿ 1ರಂದು ಸಂಭವಿಸಿದ ಭೀಮ–ಕೊರಗಾಂವ್ ಹಿಂಸಾಚಾರದ ಹಿನ್ನೆಲೆಯಲ್ಲಿ ನಡೆದಿವೆ ಎಂದು ತಿಳಿದುಬರುತ್ತದೆ.

ಪ್ರತಿವರ್ಷ ಜನವರಿ 1ರಂದು ದಲಿತರು ಭಾರಿ ಸಂಖ್ಯೆಯಲ್ಲಿ ಭೀಮಾ–ಕೊರೆಗಾಂವ್‌ಗೆ ತೆರಳಿ, 1818ರಲ್ಲಿ ಬ್ರಿಟಿಷ್‌ ಸೇನೆಯಲ್ಲಿದ್ದ ಮಹರ್ ಯೋಧರು ಮರಾಠ ಸಂಸ್ಥಾನದ ಪೇಶ್ವೆಗಳ ವಿರುದ್ಧದ ಹೋರಾಟದಲ್ಲಿ ಜಯಗಳಿಸಿದ್ದನ್ನು ನೆನಪಿಸಿಕೊಳ್ಳುವುದು ವಾಡಿಕೆ. ಈ ವರ್ಷ ಭೀಮ–ಕೋರೆಗಾಂವ್‌ನ 200ನೇ ವರ್ಷಾಚರಣೆ ಇತ್ತು. ವಿಜಯೋತ್ಸವ ಆಚರಣೆ ಸಂದರ್ಭ ಜಾತಿಸಂಘರ್ಷಗಳೂ ನಡೆದವು.

ಭೀಮಾ ಕೊರೆಗಾಂವ್‌ನಲ್ಲಿ ಹಿಂಸಾಚಾರಕ್ಕೆ ಪ್ರೇರಣೆ ನೀಡಿದ ಆರೋಪದ ಮೇಲೆ ಜೂನ್‌ನಲ್ಲಿ ಐವರು ಚಳವಳಿಗಾರರನ್ನು ಬಂಧಿಸಿ, ‘ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ’ಯಡಿ (Unlawful Activities (Prevention) Act) ಪ್ರಕರಣ ದಾಖಲಿಸಲಾಗಿತ್ತು. ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಬಂಧಿಸಿದವರ ಮೇಲೆಯೂ ಇದೇ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತರು ಮತ್ತು ದಾಳಿಗೆ ಒಳಗಾದವರೆಲ್ಲರೂ ಹತ್ತಾರು ವರ್ಷಗಳಿಂದ ಮಾನವ ಹಕ್ಕುಗಳ ಕ್ಷೇತ್ರದಲ್ಲಿ ದುಡಿದಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ. ಪುಣೆ ಪೊಲೀಸರಿಂದ ವಿಚಾರಣೆ ಎದುರಿಸಿದ ಮತ್ತು ಬಂಧನಕ್ಕೊಳಗಾದವರ ಚುಟುಕು ಪರಿಚಯ ಇಲ್ಲಿದೆ.

ಸುಧಾ ಭಾರದ್ವಾಜ್

(ಮಾನವಹಕ್ಕು ಹೋರಾಟಗಾರ್ತಿ, ವಕೀಲೆ, ಗೃಹಬಂಧನದಲ್ಲಿದ್ದಾರೆ)

57 ವರ್ಷದ ಸುಧಾ ಭಾರದ್ವಾಜ್ 30 ವರ್ಷಗಳಿಂದ ಆದಿವಾಸಿಗಳ ಮಾನವ ಹಕ್ಕುಗಳು ಮತ್ತು ಕಾರ್ಮಿಕ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಸರ್ಕಾರದ ವಿವಿಧ ಅಂಗಗಳು ‘ಮಾವೋವಾದಿಗಳು’ ಎಂದು ಹಣೆಪಟ್ಟಿ ಕಟ್ಟಿ ಶೋಷಿಸುವ ಆದಿವಾಸಿಗಳ ಪರ ದನಿಎತ್ತುತ್ತಿದ್ದಾರೆ. ಕಾನ್ಪುರ ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಿರುವ ಸುಧಾ, ಶಂಕರ್ ಗುಹಾ ನಿಯೋಗಿ ಅವರ ಛತ್ತೀಸ್‌ಗಡ ಮುಕ್ತಿ ಮೋರ್ಚಾದ ಮೂಲಕ 1980ರಲ್ಲಿ ಹೋರಾಟಕ್ಕೆ ಧುಮಿಕಿದರು.

‘ಹೇರಳ ಸಂಪನ್ಮೂಲಗಳು ಇರುವ ರಾಜ್ಯ ಛತ್ತೀಸಗಡ. ಇಲ್ಲಿ ನೀರು, ಕಾಡು, ಭೂಮಿ ಬೇಕಾದಷ್ಟು ಇದೆ. ಆದರೂ ಬಹುತೇಕ ಜನರು ಬಡವರಾಗಿಯೇ ಇದ್ದಾರೆ. ಕೆಲವರು ಮಾತ್ರ ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಸಮಾನ ಹಂಚಿಕೆ ಮರೀಚಿಕೆಯಾಗಿದೆ. ಸಮಾಜದ ಅಂಚಿನಲ್ಲಿರುವ ಜನಸಮುದಾಯದ ಪರವಾಗಿ ನಾನು ಹೋರಾಡುತ್ತಿದ್ದೆನೆ. ಅವರಿಗೆ ನ್ಯಾಯವಾದ ವೇತನ, ಸುರಕ್ಷಾ ಉಪಕರಣಗಳನ್ನು ನೀಡದೆ ಶೋಷಿಸುತ್ತಿರುವ ರಾಜಕಾರಿಣಿಗಳು, ಅರಣ್ಯ ಇಲಾಖೆ ಮತ್ತು ಕಂಪನಿಗಳ ವಿರುದ್ಧ ಹೋರಾಡುವುದು ಬಿಟ್ಟು ನನಗೆ ಬೇರೆ ದಾರಿ ಉಳಿದಿಲ್ಲ. ಹೊಸ ಛತ್ತೀಸಗಡ ನಿರ್ಮಾಣಕ್ಕಾಗಿ ನನ್ನ ಹೋರಾಟ’ ಎಂದು 2015ರಲ್ಲಿ ‘ಮಿಂಟ್‌’ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ಪಿ. ವರವರರಾವ್
(ಕ್ರಾಂತಿಕಾರಿ ಬರಹಗಾರ ಮತ್ತು ಕವಿ, ಬಂಧಿತ)

77 ವರ್ಷದ ಪೆಂಡ್ಯಾಲ ವರವರರಾವ್ ಖ್ಯಾತ ತೆಲುಗು ಕವಿ. ‘ವಿಪ್ಲವ ರಚಯಿತಲ ಸಂಘಂ’ನ (ಕ್ರಾಂತಿಕಾರಿ ಬರಹಗಾರರ ಸಂಘ) ಸಹ ಸ್ಥಾಪಕರು. ಈ ಸಂಘವು ‘ವಿರಸಂ’ ಎಂದೇ ಹೆಸರುವಾಸಿಯಾಗಿದೆ. 1966ರಲ್ಲಿ ಆಧುನಿಕ ತೆಲುಗು ಸಾಹಿತ್ಯಕ್ಕಾಗಿ ‘ಸೃಜನ’ ನಿಯತಕಾಲಿಕೆ ಆರಂಭಿಸಿದರು. ಮೂರು ವರ್ಷಗಳ ನಂತರ ನಕ್ಸಲ್ ಚಳವಳಿಯ ಬಗ್ಗೆ ಸಹಾನುಭೂತಿಯಿದ್ದ ‘ತಿರುಗುಬಾಟ ಕವುಲು’ (ತಿರುಗಿಬಿದ್ದ ಕವಿಗಳು) ಒಕ್ಕೂಟದ ಚಾಲನಶಕ್ತಿಯಾದರು.

ರಾವ್ ಅವರು ಈವರೆಗೆ 15 ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಮಾವೊ ಚಳವಳಿ ಮತ್ತು ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಈ ಹಿಂದೆ ಪ್ರತ್ಯೇಕ ರಾಜ್ಯ ಹೋರಾಟಕ್ಕಾಗಿ ನಡೆಯುತ್ತಿದ್ದ ಹೋರಾಟಗಳಲ್ಲಿ ಈಗ ತೆಲಂಗಾಣದ ಮುಖ್ಯಮಂತ್ರಿಯಾಗಿರುವ ಚಂದ್ರಶೇಖರ್ ರಾವ್ ಅವರೊಂದಿಗೆ ವೇದಿಕೆಗಳನ್ನು ಹಂಚಿಕೊಂಡಿದ್ದಾರೆ. ಆದರೆ ಈಗ ಅವರು ಚಂದ್ರಶೇಖರ್‌ ರಾವ್ ಆಡಳಿತದ ಕೆಟ್ಟ ನಡೆಗಳ ಬಗ್ಗೆ ಮುಚ್ಚುಮರೆಯಿಲ್ಲದೆ ಟೀಕಿಸುವ ಟೀಕಾಕಾರರಾಗಿದ್ದಾರೆ.

ವರ್ನಾನ್ ಗೋನ್ಸಾಲ್ವೆಸ್ ಮತ್ತು ಸುಸಾನ್ ಅಬ್ರಾಹಂ
(ನಿವೃತ್ತ ಪ್ರಾಧ್ಯಾಪಕ, ಬಂಧಿತರು)

ಬಾಂಬೆ ವಿವಿಯಿಂದ ಎಂ.ಕಾಂ. ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿರುವ ವರ್ನಾನ್ ಗೋನ್ಸಾಲ್ವೆಸ್ ಪ್ರತಿಷ್ಠಿತ ಎಚ್‌.ಆರ್. ಕಾಲೇಜು ಮತ್ತು ಡಿ.ಜಿ.ರುಪಾರೆಲ್ ಕಾಲೇಜು ಸೇರಿದಂತೆ ಮುಂಬೈನ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಪ್ರದೇಶದಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಸಿಮಾನ್ಸ್‌ನಲ್ಲಿ ಮ್ಯಾನೇಜ್‌ಮೆಂಟ್ ಟ್ರೇನಿಯಾಗಿದ್ದರು.

2007ರಲ್ಲಿ ಮಹಾರಾಷ್ಟ್ರ ಪೊಲೀಸರು ಗೋನ್ಸಾಲ್ವೆಸ್ ಅವರ ಮೇಲೆ ನಕ್ಸಲ್ ಸಂಘಟನೆಯ ಮಹಾರಾಷ್ಟ್ರ ರಾಜ್ಯ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಆರೋಪ ಹೊರಿಸಿ, 20 ಪ್ರಕರಣಗಳನ್ನು ದಾಖಲಿಸಿದ್ದರು. ಈ ಪೈಕಿ 19 ಪ್ರಕರಣಗಳಲ್ಲಿ ಗೋನ್ಸಾಲ್ವೆಸ್ ಆರೋಪಮುಕ್ತರಾಗಿದ್ದಾರೆ. ಒಂದು ಪ್ರಕರಣದ ವಿಚರಣೆ ಇನ್ನೂ ನಡೆಯುತ್ತಿದೆ.

ಭೀಮಾ ಕೊರೆಗಾಂವ್‌ ಹಿಂಸಾಚಾರದ ಮುನ್ನಾದಿನ, ಡಿಸೆಂಬರ್ 31ರಂದು ರಲ್ಲಿ ಪುಣೆಯ ಶನಿವಾರವಾಡೆಯಲ್ಲಿ 260 ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ನಡೆದಿದ್ದ ಏಳ್ಗಾರ್ ಪರಿಷತ್‌ನಲ್ಲಿ ಗೋನ್ಸಾಲ್ವೆಸ್ ಪಾಲ್ಗೊಂಡಿರಲಿಲ್ಲ ಎಂದು ಅವರು ಪತ್ನಿ ಸುಸಾನ್ ಅಬ್ರಾಹಂ ಹೇಳುತ್ತಾರೆ. ಈ ಸಭೆಯಲ್ಲಿ ದಲಿತ ಹಕ್ಕುಗಳ ಹೋರಾಟಗಾರರು ಮಾಡಿದ ಪ್ರಚೋದನಾಕಾರಿ ಭಾಷಣಗಳೇ ಹಿಂಸಾಚಾರಕ್ಕೆ ಮುಖ್ಯ ಕಾರಣ ಎಂಬುದು ಪೊಲೀಸರ ಹೇಳಿಕೆ. ಭೀಮಾ ಕೊರೆಗಾಂವ್‌ ಹಿಂಸಾಚಾರ ಆರೋಪದ ಮೇಲೆ ಜೂನ್‌ನಲ್ಲಿ ಬಂಧಿಸಲಾದ ಸುರೇಂದ್ರ ಗಾಡ್ಲಿಂಗ್ ಅವರನ್ನು ರಕ್ಷಿಸಲು ಸುಸಾನ್ ಯತ್ನಿಸಿದ್ದರು.

ಅರುಣ್ ಫೆರಾರಿಯಾ
(ರಾಜಕೀಯ ಚಿಂತಕ ಮತ್ತು ವಕೀಲ, ಬಂಧಿತರು)

ಮುಂಬೈನ್ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಅರುಣ್ ಫೆರಾರಿಯಾ ವಕೀಲರು ಮತ್ತು ರಾಜಕೀಯ ಚಿಂತಕರು. ಕಾಲೇಜಿನಲ್ಲಿ ಓದುವಾಗಲೇ ಗಾಢ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡಿದ್ದರು. ಶಿಕ್ಷಣ ಸಂಸ್ಥೆಯ ಕ್ಯಾಂಟೀನ್ ನೌಕರರಿಗೆ ಉತ್ತಮ ಕೆಲಸದ ವಾತಾವರಣ ಸಿಗಬೇಕು ಎಂದು ಪ್ರತಿಭಟನೆ ಸಂಘಟಿಸಿದ್ದರು. ವಿದ್ಯಾಭ್ಯಾಸದ ನಂತರ ವಿದರ್ಭ ಪ್ರಾಂತ್ಯದಲ್ಲಿ ಸಮುದಾಯ ಸಂಘಟಕನಾಗಿ ಕೆಲಸ ಆರಂಭಿಸಿದರು.

ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಡಿ ಫೆರಾರಿಯಾ ಅವರನ್ನು 2007ರಲ್ಲಿ ಬಂಧಿಸಲಾಗಿತ್ತು. ಬಿ.ಆರ್.ಅಂಬೇಡ್ಕರ್ ಅವರು ಬೌದ್ಧರಾಗಿ ಮತಾಂತರಗೊಂಡ ನಾಗಪುರದ ದೀಕ್ಷಾಭೂಮಿಯನ್ನು ಸ್ಫೋಟಿಸಲು ಸಂಚು ನಡೆಸಿದ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿತ್ತು. 2014ರಲ್ಲಿ ಫೆರಾರಿಯಾ ಅವರು ಆರೋಪಮುಕ್ತರಾದರು. ತಮ್ಮ ಜೈಲಿನ ಅನುಭವಗಳ ಕುರಿತು ನಂತರದ ದಿನಗಳಲ್ಲಿ ಪುಸ್ತಕವೊಂದನ್ನು ಬರೆದರು. ಇದು ಹಲವು ಭಾಷೆಗಳಿಗೆ ಅನುವಾದವಾಯಿತು. ಬಿಡುಗಡೆಯ ನಂತರ ಫೆರಾರಿಯಾ ಕಾನೂನು ಅಭ್ಯಾಸ ಮಾಡಿ ವಕೀಲರಾದರು. ಜೂನ್ ತಿಂಗಳಲ್ಲಿ ಬಂಧನಕ್ಕೊಳಗಾಗಿರುವ ಐವರು ಹೋರಾಟಗಾರರ ಬಿಡುಗಡೆಗೆ ಪ್ರಯತ್ನಿಸುತ್ತಿರುವ ದೊಡ್ಡ ವಕೀಲ ಸಮೂಹದ ಭಾಗವಾಗಿ ಅವರು ಶ್ರಮಿಸುತ್ತಿದ್ದಾರೆ.

ಜೂನ್ ಬಂಧನದ ನಂತರ ಫೆರಾರಿಯಾ ಮತ್ತು ಗೋನ್ಸಾಲ್ವೆಸ್ ‘ಡೈಲಿ ಒ’ ಮಾಧ್ಯಮಕ್ಕೆ ಲೇಖನ ಬರೆದಿದ್ದರು. ಮೋದಿ ಅವರ ಹತ್ಯೆಗೆ ನಕ್ಸಲೀಯರು ಸಂಚುರೂಪಿಸಿದ್ದಾರೆ ಎನ್ನುವ ಪೊಲೀಸರ ಆರೋಪವನ್ನು ಹಾಸ್ಯಾಸ್ಪದ ಎಂದು ತಳ್ಳಿಹಾಕಿದ್ದರು.

ಗೌತಮ್ ನವಲಖಾ
(ಮಾನವ ಹಕ್ಕುಗಳ ಹೋರಾಟಗಾರರು, ಬಂಧಿತರು)

ದೆಹಲಿ ಮೂಲದ ಗೌತಮ್ ನವಲಖಾ ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ ಮತ್ತು ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್‌ ಸಂಘಟನೆಯ ಸ್ಥಾಪಕ. ಅನೇಕ ವರ್ಷಗಳಿಂದ ಪ್ರತಿಷ್ಠಿತ ನಿಯತಕಾಲಿಕೆ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ಯ ಸಂಪಾದಕೀಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಲವು ದಶಕಗಳಿಂದ ಕಾಶ್ಮೀರ ಮತ್ತು ಛತ್ತೀಸಗಡದ ಮಾನವ ಹಕ್ಕು ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ. ಜೂನ್ ತಿಂಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯ ವಿರುದ್ಧ ಹೋರಾಟವನ್ನು ಸಂಘಟಿಸಿದ್ದರು. ವಿಪರ್ಯಾಸವೆಂದರೆ ಈಗ ಅದೇ ಕಾಯ್ದೆಯಡಿ ಅವರನ್ನು ಬಂಧಿಸಲಾಗಿದೆ.

ಪುಣೆ ಪೊಲೀಸರು ನೀಡಿರುವ ದಾಖಲೆಗಳಲ್ಲಿ ಅಗತ್ಯ ಮಾಹಿತಿ ಇಲ್ಲ ಎನ್ನುವ ಕಾರಣಕ್ಕೆ ದೆಹಲಿ ಹೈಕೋರ್ಟ್ ಮಂಗಳವಾರ ಅವರ ಬಂಧನಕ್ಕೆ ತಡೆಯಾಜ್ಞೆ ನೀಡಿತು. ಬುಧವಾರ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು. 

ಪೊಲೀಸರಿಂದ ಗೃಹಶೋಧನೆ

ಭೀಮ–ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಮಂಗಳವಾರ ಹಲವೆಡೆ ಗೃಹಶೋಧನೆ ನಡೆಸಿದ್ದರು. ಗೃಹಶೋಧನೆಗೆ ಒಳಪಟ್ಟವರ ವಿವರ ಇಲ್ಲಿದೆ.

ಸ್ಟಾನ್ ಸ್ವಾಮಿ
ಕ್ಯಾಥೊಲಿಕ್ ಪಾದ್ರಿ ಮತ್ತು ಮಾನವಹಕ್ಕುಗಳ ಕಾರ್ಯಕರ್ತ

ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸ್ವಾಮಿ (83) ಜಾರ್ಖಂಡ್‌ನ ಮಾನವ ಹಕ್ಕು ಹೋರಾಟಗಾರರಾಗಿ ಅನೇಕ ದಶಕಗಳಿಂದ ಶ್ರಮಿಸುತ್ತಿದ್ದಾರೆ. ವಿಸ್ತಾಪನ್ ವಿರೋಧಿ ಜನ್ ವಿಕಾಸ್ ಆಂದೋಲನ್‌ನ ಸ್ಥಾಪಕ ಸದಸ್ಯರು. ‘ದೇಶದಾದ್ಯಂತ ನಡೆಯುತ್ತಿರುವ ಆದಿವಾಸಿಗಳು, ದಲಿತರು, ರೈತರು ಮತ್ತು ಕಾರ್ಮಿಕರ ಸ್ಥಳಾಂತರ ವಿರೋಧಿ ಹೋರಾಟಗಳ ವೇದಿಕೆ’ ಎಂಬುದು ಈ ಸಂಘಟನೆಗೆ ಇರುವ ವಿವರಣೆ.

ಖುಂಟಿ ಜಿಲ್ಲೆಯ ಪಠಾಲ್‌ಗಡಿ ಚಳವಳಿಯನ್ನು ಸ್ವಾಮಿ ಬೆಂಬಲಿಸಿದ್ದರು. ಈ ಚಳವಳಿಯಲ್ಲಿ ಆದಿವಾಸಿಗಳು ಗ್ರಾಮ ಆಡಳಿತಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿರುವ ಅಂಶಗಳನ್ನು ಶಿಲಾಶಾಸನ ರೂಪದಲ್ಲಿ ಪಟ್ಟಿ ಮಾಡಿದ್ದರು. ಸ್ವಾಮಿ ಅವರ ಮನೆ ರಾಂಚಿಯಲ್ಲಿದೆ. ಅದನ್ನು ಪೊಲೀಸರು ಶೋಧಿಸಿದ್ದರು.

ಕೆ.ಸತ್ಯನಾರಾಯಣ
ಹೈದರಾಬಾದ್‌ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಕಲ್ಚರ್ ಸ್ಟಡೀಸ್ ವಿಭಾಗದಲ್ಲಿ ಸತ್ಯನಾರಾಯಣ ಪಾಠ ಮಾಡುತ್ತಾರೆ. ದಲಿತ ಚಿಂತಕ ಎಂದು ಗುರುತಿಸಿಕೊಂಡಿರುವ ಸತ್ಯನಾರಾಯಣ ಜಾತಿಪದ್ಧತಿ, ಸಾಹಿತ್ಯ ಚರಿತ್ರೆ ಮತ್ತು ಕ್ರಿಟಿಕಲ್ ಥಿಯರಿ ಕುರಿತು ಸಾಕಷ್ಟು ಬರೆದಿದ್ದಾರೆ.

ಎರಡು ಸಂಪುಟಗಳಲ್ಲಿ ದಕ್ಷಿಣ ಭಾರತದ ದಲಿತ ಬರಹಗಾರರ ಪ್ರಾತಿನಿಧಿಕ ಬರಹಗಳನ್ನು ಸಂಗ್ರಹಿಸಿದ್ದಾರೆ. ‘ಕುಲ ನಿರ್ಮೂಲನ ಪೋರಾಟ ಸಮಿತಿ’ಯ ಕಾರ್ಯದರ್ಶಿಯಾಗಿ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ವರವರರಾವ್ ಅವರ ಮಗಳಾದ ಪವನ ಅವರನ್ನು ಮದುವೆಯಾಗಿದ್ದಾರೆ. ಸತ್ಯನಾರಾಯಣ ಅವರ ಮನೆಯನ್ನು ಪೊಲೀಸರು ಶೋಧಿಸಿದ್ದರು.

ಕೆ.ವಿ.ಕುರ್ಮನಾಥ್, ಪತ್ರಕರ್ತ
ಹೈದರಾಬಾದ್‌ನಲ್ಲಿ ವಾಸವಿರುವ ಕುರ್ಮನಾಥ್ ಅವರಿಗೆ ಪತ್ರಿಕೋದ್ಯಮದಲ್ಲಿ 20 ವರ್ಷಗಳ ಅನುಭವ. ಆಂಧ್ರಪ್ರದೇಶ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ. ‘ದಿ ಹಿಂದೂ’ ಪತ್ರಿಕಾ ಸಮೂಹದ ‘ಬ್ಯುಸಿನೆಸ್‌ಲೈನ್‌’ನ ಡೆಪ್ಯುಟಿ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನ, ನವೋದ್ಯಮಗಳು, ಕೃಷಿ ಮತ್ತು ಜಿಎಸ್‌ಟಿ ಕುರಿತು ನಿಯಮಿತವಾಗಿ ಬರೆಯುತ್ತಾರೆ. ತೆಲುಗಿನಲ್ಲಿ ಸಣ್ಣಕಥೆಗಳು ಮತ್ತು ಪದ್ಯಗಳನ್ನು ಬರೆದಿದ್ದಾರೆ. ಪಿ.ವರವರರಾವ್ ಅವರ ಪುತ್ರಿ ಅನಲಾ ಅವರನ್ನು ಮದುವೆಯಾಗಿದ್ದಾರೆ. ಕುರ್ಮನಾಥ್ ಅವರ ಮನೆಯನ್ನೂ ಪೊಲೀಸರು ಶೋಧಿಸಿದ್ದರು.  

ಆನಂದ್ ತೆಲ್ತುಂಬೆ
ಗೋವಾ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅಹಮದಾಬಾದ್‌ನ ಐಐಎಂನಿಂದ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಸೈಬರ್‌ನೆಟಿಕ್ಸ್ ನಿರ್ವಹಣೆಯಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ನಾಗರಿಕ ಹಕ್ಕುಗಳ ಸಂರಕ್ಷಣೆ ಹೋರಾಟ ಸಮಿತಿಯಲ್ಲಿ ಸಕ್ರಿಯರಾಗಿರುವ ತೇಲ್ತುಂಬೆ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಪೊಲೀಸರು ಬಂದಾಗ ತೇಲ್ತುಂಬೆ ತಮ್ಮ ಗೋವಾ ನಿವಾಸದಲ್ಲಿ ಇರಲಿಲ್ಲ. ಆದರೂ ಪೊಲೀಸರು ಸೆಕ್ಯುರಿಟಿ ಗಾರ್ಡ್‌ನಿಂದ ಮನೆಯ ಕೀಲಿ ಪಡೆದುಕೊಂಡು ಶೋಧ ಕಾರ್ಯ ನಡೆಸಿದ್ದರು.

ಇನ್ನಷ್ಟು...

ಪ್ರಧಾನಿ ಮೋದಿ ಹತ್ಯೆ ಸಂಚು ಆರೋಪ: ತೆಲುಗು ಲೇಖಕ ವರವರ ರಾವ್‌ ಬಂಧನ

ಕೊರೆಗಾಂವ್ ದಲಿತರ ಹೋರಾಟಕ್ಕೆ 200 ವರ್ಷ: ಪುಣೆಯಲ್ಲಿ ಬೃಹತ್ ಜಾಥಾ

ಭೀಮಾ ಕೋರೆಗಾಂವ್‌ ಯುದ್ಧದ 200ನೇ ವಿಜಯೋತ್ಸವದಲ್ಲಿ ಕಿಡಿಗೇಡಿಗಳಿಂದ ಕಲ್ಲುತೂರಾಟ; ನಿಷೇಧಾಜ್ಞೆ ಜಾರಿ

ಮಹಾರಾಷ್ಟ್ರ ಬಂದ್‌: ಠಾಣೆಯಲ್ಲಿ ಮುಚ್ಚಿದ ಶಾಲೆಗಳು, ಬಸ್‌ಗಳಿಗೆ ಕಲ್ಲು ತೂರಿದ ಪ್ರತಿಭಟನಾಕಾರರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.