ಶುಕ್ರವಾರ, ಏಪ್ರಿಲ್ 23, 2021
32 °C

ಭೀಮಾ ಕೋರೆಗಾಂವ್‌ ಪ‍್ರಕರಣ: ಮೂವರು ಸಾಮಾಜಿಕ ಕಾರ್ಯಕರ್ತರಿಗೆ ಜಾಮೀನು ನಿರಾಕರಣೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಪುಣೆ: ಭೀಮಾ ಕೋರೆಗಾಂವ್‌ ಹಿಂಸಾಚಾರ ಪ‍್ರಕರಣಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಮೂವರು ಸಾಮಾಜಿಕ ಕಾರ್ಯಕರ್ತರಾದ ಅರುಣ್‌ ಫೆರೇರಾ, ವರ್ನನ್‌ ಗೊನ್ಸಾಲ್ವೆಸ್‌, ಸುಧಾ ಭಾರದ್ವಾಜ್‌ ಅವರಿಗೆ ಜಾಮೀನು ನೀಡಲು ಪುಣೆ ವಿಶೇಷ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ. 

ಈ ಮೂವರು ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ವಿಶೇಷ ನ್ಯಾಯಾಧೀಶರಾದ ಕೆ.ಡಿ.ವದನೆ ಜಾಮೀನು ನೀಡಲು ನಿರಾಕರಿಸಿದರು. 

ಕಳೆದ ಆಗಸ್ಟ್‌ 28ರಂದು ಕವಿ ವರವರ ರಾವ್‌ ಸೇರಿದಂತೆ ಗೌತಮ್ ನವ್‌ಲಖಾ, ಅರುಣ್‌ ಫೆರೇರಾ, ವರ್ನನ್‌ ಗೊನ್ಸಾಲ್ವೆಸ್‌, ಸುಧಾ ಭಾರದ್ವಾಜ್‌ ಅವರನ್ನು ಬಂಧಿಸಲಾಗಿತ್ತು. ಗೌತಮ್ ನವ್‌ಲಖಾ ಅವರಿಗೆ ದೆಹಲಿ ಹೈಕೋರ್ಟ್‌ ಜಾಮೀನು ನೀಡಲಾಗಿದ್ದು, ಕವಿ ವರವರರಾವ್ ಅವರ ಗೃಹಬಂಧನವನ್ನು ವಿಸ್ತರಣೆ ಮಾಡಲಾಗಿದೆ. 

ಅರುಣ್‌ ಫೆರೇರಾ, ವರ್ನನ್‌ ಗೊನ್ಸಾಲ್ವೆಸ್‌, ಸುಧಾ ಭಾರದ್ವಾಜ್‌ ಅವರು ಪ್ರಸ್ತುತ ಗೃಹ ಬಂಧನದಲ್ಲಿದ್ದು ಇವರ ಬಂಧನ ಅವಧಿ ಇಂದಿಗೆ ಮುಕ್ತಯಗೊಳ್ಳಲಿದೆ.  ಇದೇ ವೇಳೆ ಸಾಮಾಜಿಕ ಕಾರ್ಯಕರ್ತರ ಪರ ವಾದ ಮಂಡಿಸಿರುವ ವಕೀಲ ರಾಹುಲ್ ದೇಶಪಾಂಡೆ ಜಾಮೀನಿಗೆ ಬಾಂಬೆ ಹೈಕೋರ್ಟ್‌ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಸರ್ಕಾರಿ ಪರ ವಕೀಲರು ಗೃಹ ಬಂಧನವನ್ನು ಮತ್ತೊಂದು ವಾರ ವಿಸ್ತರಿಸುವಂತೆ ಪುಣೆ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. 

ಅರುಣ್‌ ಫೆರೇರಾ, ವರ್ನನ್‌ ಗೊನ್ಸಾಲ್ವೆಸ್‌, ಸುಧಾ ಭಾರದ್ವಾಜ್‌ ಅವರು ಆಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ಪುಣೆಯ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. 

ಪ್ರಕರಣದ ಹಿನ್ನೆಲೆ

ಮಹಾರಾಷ್ಟ್ರದ ಭೀಮಾ ಕೋರೆಗಾಂವ್‌ ಗ್ರಾಮದಲ್ಲಿ ವಿವಿಧ ದಲಿತ ಸಂಘಟನೆಗಳು ಜತೆಯಾಗಿ ಎಲ್ಗಾರ್‌ ಪರಿಷತ್‌ ಎಂಬ ಹೆಸರಿನಲ್ಲಿ 2017ರ ಡಿಸೆಂಬರ್‌ 31ರಂದು ಸಮಾವೇಶವನ್ನು ಏರ್ಪಡಿಸಿದ್ದವು. ಬಳಿಕ ಅಲ್ಲಿ ಹಿಂಸಾಚಾರ ಸಂಭವಿಸಿತ್ತು. ಈ ಹಿಂಸೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಆಗಸ್ಟ್‌ 28ರಂದು ತೆಲುಗು ಕವಿ ವರವರ ರಾವ್‌, ಸಾಮಾಜಿಕ ಹೋರಾಟಗಾರರಾದ ಅರುಣ್‌ ಫೆರೇರಾ, ವರ್ನನ್‌ ಗೊನ್ಸಾಲ್ವೆಸ್‌, ಸುಧಾ ಭಾರದ್ವಾಜ್‌ ಮತ್ತು ಗೌತಮ್‌ ನವ್‌ಲಖಾ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು.

ಸುಪ್ರೀಂ ಕೋರ್ಟ್ ಆದೇಶದಂತೆ ಇವರೆಲ್ಲರನ್ನೂ ಗೃಹಬಂಧನಕ್ಕೆ ಒಳಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು 2–1 ಬಹುಮತದಲ್ಲಿ ಸೆಪ್ಟೆಂಬರ್‌ 28ರಂದು ತೀರ್ಪು ನೀಡಿತ್ತು. 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು