ಗುರುವಾರ , ಫೆಬ್ರವರಿ 20, 2020
27 °C

ಕೈಹಿಡಿದಾಕೆ ಹಳೇ ಪ್ರಿಯಕರನ ಜೊತೆ ಸುಖವಾಗಿರಲು ವಿಚ್ಛೇದನ ನೀಡಿದ ಪತಿರಾಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್: ಬಾಲಿವುಡ್‌ನ ಹಮ್ ದಿಲ್ ಸೇ ಚುಕೇ ಸನಂ ಸಿನಿಮಾವನ್ನು ನೀವೀಗ ನೆನಪಿಸಿಕೊಳ್ಳಲೇಬೇಕು. ಐಶ್ವರ್ಯಾ ಐಶ್ವರ್ಯ ರೈ, ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್ ನಟನೆಯ ಚಿತ್ರದಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ನಡುವೆ ಪ್ರೀತಿ ಅಂಕುರವಾಗಿರುತ್ತದೆ. ಆದರೆ ಐಶ್ವರ್ಯಾ ತಂದೆ, ಅಜಯ್ ದೇವಗನ್ ಅವರೊಂದಿಗೆ ಮದುವೆ ಮಾಡುತ್ತಾರೆ. ಈ ವಿಚಾರ ತಿಳಿದ ಅಜಯ್ ಮತ್ತೆ ಅವರಿಬ್ಬರನ್ನು ಒಂದು ಮಾಡಲು ನಿರ್ಧರಿಸುತ್ತಾರೆ. ಆದರೆ ಕೊನೆಗೆ ಐಶ್ವರ್ಯಾ ತಾನು ಅಜಯ್‌ಯೊಂದಿಗೆ ಪ್ರೀತಿಯಲ್ಲಿ ಬಿದ್ದಿರುವುದು ತಿಳಿದು ಆತನೊಂದಿಗೆ ನೆಲೆಸುತ್ತಾಳೆ. 1999ರಲ್ಲಿ ತೆರೆಕಂಡ ಈ ಬಾಲಿವುಡ್ ಸಿನಿಮಾ ಅದ್ಭುತ ಯಶಸ್ಸು ಗಳಿಸಿತ್ತು

ಈಗ ಇಂತದ್ದೇ ಒಂದು ಪ್ರಕರಣವೊಂದು ಭೋಪಾಲ್‌ನಲ್ಲಿ ನಡೆದಿದ್ದು  ಕ್ಲೈಮ್ಯಾಕ್ಸ್ ಮಾತ್ರ ಕೊಂಚ ಭಿನ್ನವಾಗಿದೆ.

ಭೋಪಾಲ್‌ನ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಏಳು ವರ್ಷದ ಹಿಂದೆ ಪ್ರೀತಿಸುತ್ತಿದ್ದ ಪ್ರಿಯಕರನೊಂದಿಗೆ ಸೇರಿಸಲು ನಿರ್ಧರಿಸಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಭೋಪಾಲ್‌ನ ಕೋಲಾರ ನಗರದ ಮಹೇಶ್ (ಹೆಸರು ಬದಲಾಯಿಸಲಾಗಿದೆ) ಸಾಫ್ಟ್‌ವೇರ್ ಎಂಜಿನಿಯರ್. ಪತ್ನಿ ಸಂಗೀತಾ (ಹೆಸರು ಬದಲಾಯಿಸಲಾಗಿದೆ) ಫ್ಯಾಷನ್ ಡಿಸೈನರ್. ಇಬ್ಬರು ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಮದುವೆಯಾಗುವ ಮುನ್ನ ಸಂಗೀತಾ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸಿ ಆತನನ್ನು ಮದುವೆಯಾಗಲು ಬಯಸಿದ್ದಳು. ಆದರೆ ಆಕೆಯ ತಂದೆ ಅದಕ್ಕೆ ವಿರೋಧ ವ್ಯಕ್ತಪಡಿಸಿ ಮಹೇಶ್ ಎಂಬುವರೊಂದಿಗೆ ವಿವಾಹ ಮಾಡಿದ್ದರು.

ಮದುವೆಯಾದ ಕೆಲ ವರ್ಷದ ಬಳಿಕ ತನ್ನ ಪ್ರಿಯಕರ ಇನ್ನೂ ವಿವಾಹವಾಗದೆ ಉಳಿದಿದ್ದ ಮತ್ತು ಯಾರನ್ನೂ ವಿವಾಹವಾಗುವುದು ಬೇಡ ಎಂದು ನಿರ್ಧರಿಸಿರುವ ಸಂಗತಿ ತಿಳಿದು ಸಂಗೀತಾಳ ಮನಸ್ಸು ಆತನತ್ತ ತುಡಿದಿದೆ.

ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ಉಂಟಾಗಿದೆ ಮತ್ತು ಸಂಗೀತಾ ತನ್ನ ಪ್ರಿಯಕರನನ್ನು ಮದುವೆಯಾಗುವುದಾಗಿ ನಿರ್ಧರಿಸಿದ್ದಾಳೆ. ಈ ವಿಚಾರ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ಇಬ್ಬರನ್ನು ಸಮಾಲೋಚನೆಗಾಗಿ ಕರೆದಾಗ ಪತ್ನಿ ಆಕೆಯ ಪ್ರಿಯಕರನನ್ನು ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ.ಆಕೆಯ ಮನವೊಲಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಮಹೇಶ್ ಹೇಳಿದ್ದಾರೆ. ಇತ್ತ  ತಾನು ತನ್ನ ಗಂಡನನ್ನು ಬಿಟ್ಟು ಪ್ರಿಯಕರನ ಜತೆ ಬದುಕಲು ನಿರ್ಧರಿಸಿರುವುದಾಗಿ ಸಂಗೀತಾ ತಿಳಿಸಿದ್ದಾಳೆ.

ಬಳಿಕ ಈ ಎಲ್ಲ ಬೆಳವಣಿಗೆಗಳು ತನ್ನ ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುವುದು ಬೇಡ ಎಂದಿರುವ ಮಹೇಶ್, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಆದಾಗ್ಯೂ, ಸಂಗೀತಾ ಒಪ್ಪುವುದಾದರೆ ಇಬ್ಬರು ಮಕ್ಕಳನ್ನು ತನ್ನ ವಶಕ್ಕೆ ನೀಡುವಂತೆ ಮಹೇಶ್ ಕೋರಿದ್ದಾರೆ. ಅಲ್ಲದೆ ಮಕ್ಕಳನ್ನು ನೋಡಬೇಕು ಎಂದೆನಿಸಿದಾಗಲೆಲ್ಲ ಸಂಗೀತಾ ಬಂದು ನೋಡಬಹುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು