ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಮಕ್ಕಳ ಸಾವಿನ ಪ್ರಕರಣ

Last Updated 21 ಜೂನ್ 2019, 20:01 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರದ ಮುಜಪ್ಫರ್‌ಪುರದಲ್ಲಿ ಶಂಕಿತ ಮಿದುಳಿನ ತೀವ್ರ ಉರಿಯೂತ ಕಾಯಿಲೆ(ಎಇಎಸ್‌)ಗೆ 130 ಮಕ್ಕಳು ಬಲಿಯಾಗಿರುವ ವಿಷಯ ರಾಜ್ಯಸಭೆಯಲ್ಲಿ ಶುಕ್ರವಾರ ಪ್ರತಿಧ್ವನಿಸಿತು.

ಕೇಂದ್ರ ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ವಿರೋಧಪಕ್ಷಗಳು ಆಗ್ರಹಿಸಿವೆ.

ರಾಜ್ಯಸಭೆಯಲ್ಲಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ನ್ಯೂಜಿಲೆಂಡ್‌ ಮತ್ತು ಶ್ರೀಲಂಕಾದಲ್ಲಿ ಭಯೋತ್ಪಾದಕರ ದಾಳಿಗೆ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ವಿರೋಧ ಪಕ್ಷದ ಸದಸ್ಯರು ಬಿಹಾರದಲ್ಲಿ ಮೃತಪಟ್ಟಿರುವ ಮಕ್ಕಳಿಗೂ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಅನಂತರ ಎಲ್ಲರೂ ಎದ್ದು ನಿಂತು ಮೌನವಾಗಿ ಮೃತ ಮಕ್ಕಳಿಗೆ ಸಂತಾಪ ಸೂಚಿಸುವಂತೆ ಸಭಾಧ್ಯಕ್ಷರು ಸೂಚಿಸಿದರು.

ಬಿನೋಯ್‌ ವಿಶ್ವಂ (ಸಿಪಿಐ) ಮಾತನಾಡಿ, ‘ಮಕ್ಕಳ ಸಾವು ಆಕಸ್ಮಿಕ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇದನ್ನು ಕೊಲೆ ಎನ್ನಬೇಕು’ ಎಂದಿದ್ದಾರೆ.

‘130 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ಹೇಳಲಾಗುತ್ತಿದೆ. ಆದರೆ 180ಕ್ಕೂ ಹೆಚ್ಚು ಮಕ್ಕಳು ಈ ರೋಗಕ್ಕೆ ಬಲಿಯಾಗಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ಮಕ್ಕಳ ಸಾವಿನ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ಕೋರಿದ್ದವು. ಆದರೆ ಸಭಾಪತಿ ಇದಕ್ಕೆ ಅವಕಾಶ ನೀಡಲಿಲ್ಲ.

ತನಿಖೆಗೆ ಆಗ್ರಹ: ಬಿಹಾರದ ಮುಜಪ್ಫರ್‌ಪುರದಲ್ಲಿ ಶಂಕಿತ ಮಿದುಳಿನ ತೀವ್ರ ಉರಿಯೂತ ಕಾಯಿಲೆಗೆ(ಎಇಎಸ್‌) ಮಕ್ಕಳು ಬಲಿಯಾಗಿರುವುದಕ್ಕೆ ಲಿಚಿ ಹಣ್ಣುಗಳನ್ನು ತಿಂದಿರುವುದೇ ಕಾರಣ ಎಂಬ ಆರೋಪದ ಬಗ್ಗೆ ತನಿಖೆ ನಡೆಯಬೇಕು ಎಂದು ಬಿಹಾರದ ಸಂಸದ ರಾಜೀವ್‌ ಪ್ರತಾಪ್‌ ರೂಡಿ ಸರ್ಕಾರವನ್ನು ಕೋರಿದ್ದಾರೆ.

ಕಲಾಪದ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ಲಿಚಿ ಹಣ್ಣಿನ ಉದ್ಯಮಕ್ಕೆ ಕೆಟ್ಟ ಹೆಸರು ತರುವ ಪಿತೂರಿ ನಡೆದಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT