ಮಂಗಳವಾರ, ಅಕ್ಟೋಬರ್ 22, 2019
21 °C

ಮಹಾರಾಷ್ಟ್ರ: ಬಿಜೆಪಿ ಪಟ್ಟಿ ಜತೆಗೇ ಅತೃಪ್ತಿಯ ಅಲೆ

Published:
Updated:
Prajavani

ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಲಿರುವ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಿದೆ. ಕೆಲವು ಹಿರಿಯ ನಾಯಕರಿಗೆ ಪಟ್ಟಿಯಲ್ಲಿ ಸ್ಥಾನ ಲಭಿಸದಿರುವುದು ಪಕ್ಷದೊಳಗೆ ಅಸಮಾಧಾನಕ್ಕೂ ಕಾರಣವಾಗಿದೆ.

ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಮಂಗಳವಾರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ರಾಜ್ಯದಲ್ಲಿ ಶಿವಸೇನಾ ಮತ್ತು ಇತರ ಕೆಲವು ಸಣ್ಣ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದಾಗಿ ಪಕ್ಷ ಸ್ಪಷ್ಟಪಡಿಸಿದೆ.

ಸಚಿವರಾದ ಏಕನಾಥ ಖಡಸೆ, ವಿನೋದ್‌ ತಾವ್ಡೆ ಹಾಗೂ ಚಂದ್ರಶೇಖರ ಬಾವನ್‌ಕುಳೆ ಅವರ ಹೆಸರು ಮೊದಲ ಪಟ್ಟಿಯಲ್ಲಿ ಕಾಣಿಸಲಿಲ್ಲ. ಇವರಲ್ಲಿ ಒಂದಿಬ್ಬರಿಗೆ ಎರಡನೇ ಪಟ್ಟಿಯಲ್ಲಿ ಸ್ಥಾನ ಲಭಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.  ಮರಾಠ ಸಮುದಾಯದ ತಾವ್ಡೆ ಅವರು ಹಿಂದೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೂ ಆಗಿದ್ದರು.

ಮಹಾರಾಷ್ಟ್ರದಲ್ಲಿ ಬಿಜೆಪಿಯ ಗುಜರಾತಿ ಸಮುದಾಯದ ಪ್ರತಿನಿಧಿ ಪ್ರಕಾಶ್‌ ಮೆಹತಾ, ಮಾರ್ವಾಡಿ ಸಮುದಾಯದ ನಾಯಕ ರಾಜ್‌ ಪುರೋಹಿತ್‌ ಅವರಿಗೂ ಟಿಕೆಟ್‌ ನೀಡಿಲ್ಲ.

ಪಕ್ಷಾಂತರಿಗಳಿಗೆ ಮಣೆ: ಕಾಂಗ್ರೆಸ್‌ ತ್ಯಜಿಸಿ ಇತ್ತೀಚೆಗಷ್ಟೇ ಬಿಜೆಪಿಗೆ ಬಂದಿರುವ ರಾಧಾಕೃಷ್ಣ ವಿಖೆಪಾಟೀಲ ಸೇರಿದಂತೆ ಬೇರ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದ ಹೆಚ್ಚಿನವರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಬಹುತೇಕ ಎಲ್ಲರಿಗೂ ಈಗಾಗಲೇ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ನೀಡಲಾಗಿದೆ. ಆದರೆ ನವಿ ಮುಂಬೈಯ ಮುಖಂಡ ಗಣೇಶ್‌ ನಾಯ್ಕ್‌ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲ.

ಸಿಎಂ ಸಹಾಯಕನಿಗೆ ಟಿಕೆಟ್‌: ಮುಖ್ಯಮಂತ್ರಿ ಫಡಣವೀಸ್‌ ಅವರ ಆಪ್ತ ಸಹಾಯಕ ಅಭಿಮನ್ಯ ಪವಾರ್‌ ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸಲಾಗಿದೆ. ಅವರು ಔಸಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಹಿಂದೆ ಈ ಕ್ಷೇತ್ರವನ್ನು ಶಿವಸೇನಾದ ಅಭ್ಯರ್ಥಿ ಪ್ರತಿನಿಧಿಸುತ್ತಿದ್ದರು.

ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಎ), ರಾಷ್ಟ್ರೀಯ ಸಮಾಜ ಪ್ರಕಾಶ್‌, ಶಿವ ಸಂಗ್ರಾಮ ಸಂಘಟನಾ ಮತ್ತು ರೈತ ಕ್ರಾಂತಿ ಸೇನಾ ಬಿಜೆಪಿ– ಸೇನಾ ಮಹಾ ಮೈತ್ರಿಯಲ್ಲಿ ಒಳಗೊಂಡಿರುವ ಇತರ ಪಕ್ಷಗಳಾಗಿವೆ.

ಟಿಕೆಟ್‌ ವಂಚಿತರಿಗೆ ಸಾಂತ್ವನ

‘ಹರಿಯಾಣ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್‌ ಲಭಿಸದಿರುವ ಹಾಲಿ ಶಾಸಕರು, ಪಕ್ಷವನ್ನು ತಮ್ಮ ತಾಯಿ ಎಂದು ಭಾವಿಸಿ ಸಮಾಧಾನದಿಂದ ಇರಬೇಕು’ ಎಂದು ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಹೇಳಿದ್ದಾರೆ.

ಟಿಕೆಟ್‌ ವಂಚಿತ ಶಾಸಕರನ್ನು ಸಮಾಧನಪಡಿಸುವ ನಿಟ್ಟಿನಲ್ಲಿ ಮಾತನಾಡಿದ ಅವರು, ‘ಇಂಥ ನಾಯಕರ ಗೌರವವನ್ನು ಕಾಪಾಡುವ ಕೆಲಸವನ್ನು ಚುನಾವಣೆಯ ನಂತರವೂ ಪಕ್ಷ ಮಾಡಲಿದೆ’ ಎಂದು ಭರವಸೆ ನೀಡಿದ್ದಾರೆ.

ಬಿಜೆಪಿಯು ಸೋಮವಾರ 78 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇಬ್ಬರು ಸಚಿವರು ಸೇರಿದಂತೆ ಏಳು ಮಂದಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿದೆ.

ನಾಮಪತ್ರ ಸಲ್ಲಿಸಿದ ಖಡಸೆ

ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಪಕ್ಷದೊಳಗಿನ ಅಸಮಾಧಾನವೂ ಬಹಿರಂಗವಾಗಿದೆ.

ಫಡಣವೀಸ್‌ ನೇತೃತ್ವದ ಸರ್ಕಾರದಲ್ಲಿ ಒಂದು ಕಾಲದಲ್ಲಿ, ಕಂದಾಯ ಮತ್ತು ಕೃಷಿ ಸೇರಿದಂತೆ ಒಂಬತ್ತು ಖಾತೆಗಳನ್ನು ನಿರ್ವಹಿಸುತ್ತಾ, ಎರಡನೇ ಸ್ಥಾನದಲ್ಲಿದ್ದ ಪಕ್ಷದ ಹಿರಿಯ ನಾಯಕ ಏಕನಾಥ ಖಡಸೆ (67) ಅವರ ಹೆಸರು ಪಟ್ಟಿಯಲ್ಲಿ ಕಾಣಿಸಲಿಲ್ಲ. ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಇರುವುದೇ ಅವರನ್ನು ಕೈಬಿಡಲು ಕಾರಣ ಎನ್ನಲಾಗಿದೆ.

ಪಟ್ಟಿಯಲ್ಲಿ ತನ್ನ ಹೆಸರು ಇಲ್ಲದಿದ್ದರೂ ಖಡಸೆ ಅವರು ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರ ಮುಕ್ತಾಯೀನಗರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಆರು ಬಾರಿ ಶಾಸಕರಾಗಿರುವ ಖಡಸೆ ಅವರು ಮಹಾರಾಷ್ಟ್ರದಲ್ಲಿ ಬಿಜೆಪಿಯ ಅತಿ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ಎರಡನೇ ಪಟ್ಟಿಯಲ್ಲಿ ಇವರು ಸ್ಥಾನ ಪಡೆಯುವರೇ ಎಂಬುದು ಇನ್ನೂ ಖಚಿತವಾಗಿಲ್ಲ.

ಶಿವಾಜಿ, ತಿಲಕ್‌ ವಂಶಸ್ಥರಿಗೆ ಟಿಕೆಟ್‌

ಬಾಲಗಂಗಾಧರ ತಿಲಕ್‌ ಅವರ ಮರಿಮೊಮ್ಮಗ ಶೈಲೇಶ್‌ ತಿಲಕ್‌ ಅವರ ಪತ್ನಿ, ಪುಣೆಯ ಮೇಯರ್‌ ಮುಕ್ತಾ ತಿಲಕ್‌ ಅವರು ಪುಣೆಯ ಕಸಬಾಪೀಠ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಇತ್ತೀಚೆಗಷ್ಟೇ ಎನ್‌ಸಿಪಿ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿರುವ ಛತ್ರಪತಿ ಶಿವಾಜಿ ಅವರ ವಂಶಸ್ಥ ಶಿವೇಂದ್ರಸಿನ್ಹರಾಜೆ ಭೋಸಲೆ ಅವರಿಗೆ ಸಾತಾರ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)