ಶನಿವಾರ, ಸೆಪ್ಟೆಂಬರ್ 18, 2021
21 °C
ವಿಶ್ವ ಹಿಂದೂ ಪರಿಷತ್ ಬೇಡಿಕೆಗೆ ಬೆಂಬಲ ನೀಡಿದ ಹಿಮಾಚಲ ಪ್ರದೇಶ ಸರ್ಕಾರ

‘ಶ್ಯಾಮಲಾ’ ಎಂದಾಗಲಿದೆಯೇ ಶಿಮ್ಲಾ?

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾವನ್ನು ‘ಶ್ಯಾಮಲಾ’ ಎಂದು ಮರುನಾಮಕರಣ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಇದನ್ನೂ ಓದಿ: ಅಲಹಾಬಾದ್‌ ಇನ್ನು ಪ್ರಯಾಗ್‌ರಾಜ್: ಯೋಗಿ ಆದಿತ್ಯನಾಥ್ ಸಂಪುಟ ಸಮ್ಮತಿ

ಶಿಮ್ಲಾವನ್ನು ಶ್ಯಾಮಲಾ ಎಂದು ಬದಲಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಹಲವು ಹಿಂದೂಪರ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಾರದಿಂದ ಅಭಿಯಾನ ನಡೆಸುತ್ತಿವೆ. ಅಲಹಾಬಾದ್‌ನ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಈ ಅಭಿಯಾನ ಆರಂಭವಾಗಿದೆ.

ಇದನ್ನೂ ಓದಿ: ಮುಘಲ್‌ಸರೈ ರೈಲು ನಿಲ್ದಾಣ ಈಗ ದೀನ್‌ ದಯಾಳ್‌ ಉಪಾಧ್ಯಾಯ ಜಂಕ್ಷನ್‌

ಹೆಸರು ಬದಲಾವಣೆಗೆ ಒತ್ತಾಸೆಯಾಗಿ ರಾಜ್ಯ ಸರ್ಕಾರವೂ ಈ ಬಗ್ಗೆ ಮಾತನಾಡಿದೆ.

‘ಜನರು ಬಯಸುವುದಾದರೆ ಶಿಮ್ಲಾಗೆ ಮರುನಾಮಕರಣ ಮಾಡುವ ಪ್ರಸ್ತಾವವನ್ನು ಪರಿಗಣಿಸುತ್ತೇವೆ’ ಎಂದು ರಾಜ್ಯ ಆರೋಗ್ಯ ಸಚಿವ ವಿಪಿನ್ ಸಿಂಗ್ ಪರ್ಮಾರ್ ಹೇಳಿದ್ದಾರೆ.

ಹೆಸರು ಬದಲಾವಣೆಗೆ ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಭಿಯಾನದ ಪರ ಮತ್ತು ವಿರುದ್ಧ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ.

‘ಜಗತ್ತಿನ ಖ್ಯಾತ ಪ್ರವಾಸಿ ಸ್ಥಳಗಳಲ್ಲಿ ಶಿಮ್ಲಾ ಸಹ ಸ್ಥಾನ ಪಡೆದಿದೆ. ಹೆಸರು ಬದಲಿಸುವುದರಿಂದ ಅದರ ಖ್ಯಾತಿಗೆ ಧಕ್ಕೆಯಾಗಲಿದೆ’ ಎಂದು ಹಲವರು ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸಣ್ಣ ಹಳ್ಳಿಯಾಗಿದ್ದ ಶಿಮ್ಲಾದಲ್ಲಿ ಬ್ರಿಟಿಷ್ ಅಧಿಕಾರಿ ಚಾರ್ಲ್ಸ್ ಕೆನಡಿ 1824ರಲ್ಲಿ ಮನೆಯೊಂದನ್ನು ನಿರ್ಮಿಸಿದ. ಅದು ಕೆನಡಿ ಹೌಸ್ ಎಂದೇ ಪ್ರಸಿದ್ಧವಾಗಿದೆ. ಶಿಮ್ಲಾವನ್ನು ಪಟ್ಟಣವಾಗಿ ಅಭಿವೃದ್ಧಿಪಡಿಸಿದವರಲ್ಲಿ ಕೆನಡಿಯ ಕೊಡುಗೆ ಮಹತ್ವದ್ದು. 1864ರಲ್ಲಿ ಬ್ರಟಿಷರು ಇದನ್ನು ತಮ್ಮ ಬೇಸಿಗೆ ರಾಜಧಾನಿಯನ್ನಾಗಿ ಘೋಷಿಸಿಕೊಂಡಿದ್ದರು. 1947ರವರೆಗೂ ಶಿಮ್ಲಾಗೆ ಆ ಸ್ಥಾನ ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು