ಗುರುವಾರ , ಡಿಸೆಂಬರ್ 3, 2020
20 °C
ಹಗ್ಗಜಗ್ಗಾಟಕ್ಕೆ ಕೊನೆ , ಲೋಕ ಜನಶಕ್ತಿ ಪಕ್ಷಕ್ಕೆ ಆರು ಕ್ಷೇತ್ರ

ಬಿಹಾರ: ಲೋಕಸಭಾ ಚುನಾವಣೆ ಸ್ಥಾನ ಹಂಚಿಕೆ, ಜೆಡಿಯು–ಬಿಜೆಪಿಗೆ ಸಮಪಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಿಹಾರದಲ್ಲಿ ಲೋಕಸಭಾ ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿದಂತೆ ಎನ್‌ಡಿಎ ಮಿತ್ರ ಪಕ್ಷಗಳಲ್ಲಿ ಅನೇಕ ತಿಂಗಳಿಂದ ನಡೆದಿದ್ದ ಹಗ್ಗಜಗ್ಗಾಟ ಕೊನೆಗೂ ಸುಸೂತ್ರವಾಗಿ ಬಗೆಹರಿದಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಸಂಯುಕ್ತ ಜನತಾದಳ (ಜೆಡಿಯು) ಮತ್ತು ಬಿಜೆಪಿ ಸಮನಾಗಿ ಸ್ಥಾನ ಹಂಚಿಕೊಂಡಿವೆ.

ಬಿಹಾರದ ಒಟ್ಟು 40 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಯು ಮತ್ತು ಬಿಜೆಪಿ ತಲಾ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಇನ್ನುಳಿದ ಆರು ಕ್ಷೇತ್ರಗಳನ್ನು ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷಕ್ಕೆ (ಎಲ್‌ಜೆಪಿ)ಬಿಟ್ಟು ಕೊಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಜೆಡಿಯು ಅಧ್ಯಕ್ಷ ನಿತೀಶ್‌ ಕುಮಾರ್‌, ಎಲ್‌ಜೆಪಿ ಮುಖಂಡ ರಾಂ ವಿಲಾಸ್‌ ಪಾಸ್ವಾನ್‌ ಮತ್ತು ಅವರ ಪುತ್ರ ಚಿರಾಗ್‌ ಪಾಸ್ವಾನ್‌ ಭಾನುವಾರ ಸ್ಥಾನ ಹೊಂದಾಣಿಕೆ ಕುರಿತು ಚರ್ಚಿಸಿದ ಬಳಿಕ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ.

ದೆಹಲಿಯ ಶಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಥಾನ ಹೊಂದಾಣಿಕೆ ವಿಷಯವನ್ನು ಪ್ರಕಟಿಸಲಾಯಿತು.

ಪಾಸ್ವಾನ್‌ ಈ ಬಾರಿ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಬದಲಾಗಿ ಎನ್‌ಡಿಎ ಅಭ್ಯರ್ಥಿಯಾಗಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಶಾ ತಿಳಿಸಿದರು.

ಕಳೆದ ಲೋಕಸಭಾ ಚುನಾವಣೆಗಿಂತ ಈ ಸಲ ಎನ್‌ಡಿಎ ಬಿಹಾರದಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಮಿತ್ರಪಕ್ಷಗಳ ಜತೆ ಸಮಾಲೋಚನೆ ಬಳಿಕ ಯಾವ ಕ್ಷೇತ್ರಗಳಲ್ಲಿ ಯಾರು ಸ್ಪರ್ಧಿಸಬೇಕು ಎನ್ನುವ ಸೂತ್ರ ಅಂತಿಮಗೊಳ್ಳಲಿದೆ.
ಶೀಘ್ರ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ’ ಎಂದು ನಿತೀಶ್‌ ಕುಮಾರ್‌ ತಿಳಿಸಿದರು.

ಮಿತ್ರಪಕ್ಷಗಳ ಒತ್ತಡಕ್ಕೆ ಮಣಿಯಿತೆ ಬಿಜೆಪಿ?

ಎರಡು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದ ರಾಂ ವಿಲಾಸ್‌ ಪಾಸ್ವಾನ್‌ ಮತ್ತು ಅವರ ಪುತ್ರ ಚಿರಾಗ್‌ ಪಾಸ್ವಾನ್‌ಸ್ತಾನ ಹೊಂದಾಣಿಕೆ ಬಗ್ಗೆ ಶೀಘ್ರ ಅಂತಿಮ ನಿರ್ಧಾರಕ್ಕೆ ಬರುವಂತೆ ಒತ್ತಡ ಹೇರಿದ್ದರು.

ಡಿಸೆಂಬರ್‌ 31ರೊಳಗಾಗಿ ಸ್ಥಾನ ಹೊಂದಾಣಿಕೆ ಅಂತಿಮಗೊಳಿಸುವಂತೆ ಗಡುವು ನೀಡಿದ್ದ ಅವರು, ಇಲ್ಲದಿದ್ದರೆ ತಮ್ಮ ದಾರಿ ತಮಗೆ ಎಂದು ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ. ಎನ್‌ಡಿಎ ಸೇರಲು ಪುತ್ರ ಚಿರಾಗ್‌ ಒತ್ತಡ ಕಾರಣ ಎಂದು ಪಾಸ್ವಾನ್‌ ಸೂಚ್ಯವಾಗಿ ಹೇಳಿದ್ದರು. ಸಿಂಹಪಾಲು ಬಯಸಿದ್ದ ಬಿಜೆಪಿ ಮಿತ್ರಪಕ್ಷಗಳಾದ ಜೆಡಿಯುಗೆ 12, ಎಲ್‌ಜೆಪಿಗೆ 5, ಆರ್‌ಎಲ್‌ಎಸ್‌ಪಿಗೆ ಎರಡು ಸ್ಥಾನ ನೀಡುವ ಪ್ರಸ್ತಾಪ ಮುಂದಿಟ್ಟಿತ್ತು. ಈ ಸೂತ್ರಕ್ಕೆ ಜೆಡಿಯು ಸೇರಿದಂತೆ ಇತರ ಮಿತ್ರಪಕ್ಷಗಳು ಒಪ್ಪಿರಲಿಲ್ಲ. ಒಂದು ಹಂತದಲ್ಲಿ ಜೆಡಿಯು ಜತೆ ಸಂಬಂಧ ಕಡಿದುಕೊಂಡು ಎಲ್ಲ ಸ್ಥಾನಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸುವುದು ಬಿಜೆಪಿಯ ತಂತ್ರವಾಗಿತ್ತು ಎಂದು ಹೇಳಲಾಗಿತ್ತು.

ಹೆಚ್ಚು ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದ್ದ ಬಿಜೆಪಿ ಐದು ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಪಟ್ಟು ಸಡಿಸಿದೆ ಎಂದು ವಿಶ್ಲೇಷಿಸಲಾಗುತ್ತದೆ.

ಎನ್‌ಡಿಎದಿಂದ ಹೊರಬಂದಿದ್ದ ಜೆಡಿಯು
ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯು ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ಮುನಿಸಿಕೊಂಡಿದ್ದ ಜೆಡಿಯು ಎನ್‌ಡಿಎದಿಂದ ಹೊರಬಂದಿತ್ತು.

ಬಿಹಾರದ ಎಲ್ಲ 40 ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸಿ ಹೀನಾಯ ಸೋಲು ಕಂಡಿದ್ದ ಜೆಡಿಯು ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿತ್ತು.

30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 22 ಕಡೆ ಜಯಗಳಿಸಿತ್ತು. ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಲ್‌ಜೆಪಿ ಆರು ಸ್ಥಾನ ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಮೂರರಲ್ಲಿ ಗೆಲುವು ಸಾಧಿಸಿದ್ದವು.

ಈ ಬಾರಿ ಚುನಾವಣೆಯಲ್ಲಿ ಆರ್‌ಎಲ್‌ಎಸ್‌ಪಿ ಹೆಚ್ಚು ಸ್ಥಾನಗಳಿಗೆ ಪಟ್ಟು ಹಿಡಿದಿದ್ದರಿಂದ ಎನ್‌ಡಿಎ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು.

ಸ್ಥಾನ ಹಂಚಿಕೆ ಕುರಿತು ಮುನಿಸಿಕೊಂಡಿದ್ದ ಆರ್‌ಎಲ್‌ಎಸ್‌ಪಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ಇತ್ತೀಚೆಗೆ ಎನ್‌ಡಿಎ ತೊರೆದು ಕಾಂಗ್ರೆಸ್‌ ನೇತೃತ್ವದ ಮಹಾಮೈತ್ರಿ ಕೂಟ ಸೇರಿದ್ದಾರೆ.

* ಸದ್ಯದ ರಾಜಕೀಯ ಪರಿಸ್ಥಿತಿ ಮತ್ತು ಬಿಹಾರದಲ್ಲಿಯ ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಾನ ಹೊಂದಾಣಿಕೆ ಅಂತಿಮಗೊಳಿಸಲಾಗಿದೆ

ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

* ಎನ್‌ಡಿಎ ಅಂಗಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯಗಳಿಲ್ಲ. ಸ್ಥಾನ ಹೊಂದಾಣಿಕೆ ಕುರಿತು ಎಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದೇವೆ

–ರಾಂ ವಿಲಾಸ್‌ ಪಾಸ್ವಾನ್‌, ಕೇಂದ್ರ ಸಚಿವ ಮತ್ತು ಎಲ್‌ಜೆಪಿ ಮುಖಂಡ

* ಲೋಕಸಭಾ ಚುನಾವಣಾ ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಯು ನಡುವೆ ಸಂಘರ್ಷ ನಡೆದಿಲ್ಲ. ಚಿಕ್ಕಪುಟ್ಟ ಭಿನ್ನಾಭಿಪ್ರಾಯ ಬಗೆಹರಿದಿವೆ. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗಳಿಸಲಿವೆ ‌
– ನಿತೀಶ್‌ ಕುಮಾರ್‌ , ಜೆಡಿಯು ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ

‘ಮಹಾಮೈತ್ರಿ’ ವೈಯಕ್ತಿಕ ಹಿತಾಸಕ್ತಿ ಕೂಟ: ಮೋದಿ ಟೀಕೆ
ಚೆನ್ನೈ: ಲೋಕಸಭಾ ಚುನಾವಣೆಗೆ ಮಹಾಮೈತ್ರಿ ರಚಿಸುವ ವಿರೋಧ ಪಕ್ಷಗಳ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

‘ಇದು ವೈಯಕ್ತಿಕ ಉಳಿವಿಗಾಗಿ ನಡೆಯುತ್ತಿರುವ ಅಪವಿತ್ರ ಮೈತ್ರಿ. ಹೊರತು ಸಿದ್ಧಾಂತಕ್ಕಾಗಿ ಅಲ್ಲ. ಇದು ಜನರಿಗೆ ಬೇಕಾಗಿಲ್ಲ. ಆದರೆ, ಅಧಿಕಾರ ಹಿಡಿಯಲು ಕೆಲವರಿಗೆ ಬೇಕಾಗಿದೆ’ ಎಂದು ಕಿಡಿ ಕಾರಿದ್ದಾರೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ತಮಿಳುನಾಡು ಬಿಜೆಪಿ ಪದಾಧಿಕಾರಿಗಳೊಂದಿಗೆ ಸಂವಾದ ನಡೆಸಿದ ಮೋದಿ, ‘ಮುಂದಿನ ದಿನಗಳಲ್ಲಿ ಶ್ರೀಮಂತ ಕುಟುಂಬಗಳ ಅಪವಿತ್ರ ಮೈತ್ರಿಯನ್ನು ಜನರು ನೋಡಬೇಕಿದೆ’ ಎಂದರು.

‘ಕಾಂಗ್ರೆಸ್‌ ವಿರುದ್ಧ ರಾಜಕಾರಣ ಮಾಡುತ್ತಿದ್ದ ಎನ್‌.ಟಿ. ರಾಮರಾವ್‌ ಸ್ಥಾಪಿಸಿದ್ದ ತೆಲುಗು ದೇಶಂ ಪಕ್ಷ (ಟಿಡಿಪಿ) ಈಗ ಕಾಂಗ್ರೆಸ್‌ ಜತೆ ಮೈತ್ರಿಗೆ ಮುಂದಾಗಿದೆ’ ಎಂದು ಟೀಕಿಸಿದರು.

ಸಮಾಜವಾದಿ ರಾಮಮನೋಹರ ಲೋಹಿಯಾ ಅವರಿಂದ ಸ್ಫೂರ್ತಿ ಪಡೆದು ಮಹಾಮೈತ್ರಿ ಕೂಟ ರಚಿಸುತ್ತಿದ್ದೇವೆ ಎಂದು ಕೆಲವು ಮುಖಂಡರು ಹೇಳುತ್ತಿದ್ದಾರೆ. ಆದರೆ, ಲೋಹಿಯಾ ಅವರೇ ಕಾಂಗ್ರೆಸ್‌ ಸಿದ್ಧಾಂತ ವಿರೋಧಿಸುತ್ತಿದ್ದರು ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು