ಭಾನುವಾರ, ಜೂನ್ 20, 2021
28 °C
ಮೋದಿ, ಶಾ ಒಳನುಸುಳುಕೋರರು ಎಂದ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ

ಕ್ಷಮೆಯಾಚನೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಒಳನುಸುಳುಕೋರರು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ವಿರುದ್ಧ ಬಿಜೆಪಿ ಸದಸ್ಯರು ಸೋಮವಾರ ಲೋಕಸಭೆಯಲ್ಲಿ  ಪ್ರತಿಭಟನೆ ನಡೆಸಿದರು. ಇಂಥ ಅವಮಾನಕರ ಹೇಳಿಕೆಯನ್ನು ಸಹಿಸುವುದಿಲ್ಲ, ಚೌಧರಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಕಾಂಗ್ರೆಸ್‌ ನಾಯಕರ ವಿರುದ್ಧ ಸದನದಲ್ಲಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿದೇಶಿ ಮೂಲದ ಬಗ್ಗೆ ಪ್ರಸ್ತಾಪಿಸಿ, ಅವರು ಒಳನುಸುಳುಕೋರರು ಎಂದು ಹೇಳುವ ಮೂಲಕ ಕಾಂಗ್ರೆಸ್‌ ಸದಸ್ಯರ ಕಾಲೆಳೆದರು. ತಮ್ಮ ಪಕ್ಷದಲ್ಲಿ ಒಳನುಸುಳುಕೋರರು ಇರುವುದರಿಂದ ಕಾಂಗ್ರೆಸ್‌ ನಾಯಕರು ಎಲ್ಲ ಪಕ್ಷದವರನ್ನು ಅವರಂತೆ ಕಾಣುತ್ತಾರೆ ಎಂದು ಆರೋಪಿಸಿದರು.

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಷಯ ಕುರಿತು ಸದನದಲ್ಲಿ ಮಾತನಾಡುವಾಗ ಚೌಧರಿ ಅವರು, ಮೋದಿ ಮತ್ತು ಶಾ ಅವರು ಒಳನುಸುಳುಕೋರರು ಎಂದರು. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ ಅವರು, ಇದರಿಂದ ಬಿಜೆಪಿ ಸದಸ್ಯರು ತೃಪ್ತರಾಗದಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿದರು. 

‘ನಮ್ಮ ಕುಟುಂಬವು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದೆ. ನಮ್ಮಲ್ಲಿ ಅನೇಕ ದಾಖಲೆಗಳಿಲ್ಲ. ಯಾರಾದರೂ ನಮ್ಮನ್ನು ಒಳನುಸುಳುಕೋರರು ಎಂದು ಕರೆದರೆ ನಾವು ಏನೂ ಮಾಡಲು ಸಾಧ್ಯವಿಲ್ಲ’ ಎಂದ ಚೌಧರಿ, ಎನ್‌ಆರ್‌ಸಿಯನ್ನು ವಿರೋಧಿಸಲು ಈ ಅವಕಾಶ ಬಳಸಿಕೊಂಡರು.

ಆದರೆ, ಬಿಜೆಪಿ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಸದನವನ್ನು ಮುಂದೂಡುವಂತೆ ಸ್ಪೀಕರ್‌ ಓ ಬಿರ್ಲಾ ಅವರನ್ನು ಒತ್ತಾಯಿಸಿದರು.

‘ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ದೊಡ್ಡ ಮಟ್ಟದ ಜನಾದೇಶ ಸಿಕ್ಕಿದೆ. ಕಾಂಗ್ರೆಸ್‌ ತನ್ನ ಸೋಲಿನಿಂದ ಇನ್ನೂ ಹೊರಗೆ ಬರಲು ಸಾಧ್ಯವಾಗಿಲ್ಲ. ಮೋದಿಯವರ ನಾಯಕತ್ವದಲ್ಲಿ ಜಗತ್ತಿನಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಾಗಿದೆ. ಇಂಥವರ ಬಗ್ಗೆ ಅವಮಾನಕರ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ’ ಎಂದ ಸಚಿವ ಜೋಶಿ, ಚೌಧರಿ ಅವರು ಪಶ್ಚಿಮ ಬಂಗಾಳದವರಾಗಿರುವುದರಿಂದ ಅವರನ್ನು ಒಳನುಸುಳುಕೋರರು ಎಂದು ಕರೆಯಬಹುದೇ? ಎಂದು ಕೇಳಿದರು.

ಬಾಂಗ್ಲಾದೇಶದ ಒಳನುಸುಳುಕೋರರಿಗೆ ಭಾರತದ ಪೌರತ್ವ ಒದಗಿಸುವಲ್ಲಿ ಚೌಧರಿ ಅವರು ಪಶ್ಚಿಮ ಬಂಗಾಳದಲ್ಲಿ ‘ಸಿಂಡಿಕೇಟ್‌’ ನಡೆಸುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು