ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಬಿಎಸ್‌ಎಫ್‌ನಿಂದ ವಜಾ ಆಗಿರುವ ಯೋಧ ತೇಜ್ ಬಹಾದ್ದೂರ್ ಯಾದವ್ ಆರೋಪ

ಮೋದಿ ವಿರುದ್ಧ ನನ್ನ ಸ್ಪರ್ಧೆಗೆ ಬಿಜೆಪಿ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾರಾಣಸಿ (ಪಿಟಿಐ): ‘ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ನಾನು ಸ್ಪರ್ಧೆಗೆ ಇಳಿಯುವುದನ್ನು ತಡೆಯಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಬಿಎಸ್‌ಪಿ–ಎಸ್‌ಪಿ ಅಭ್ಯರ್ಥಿ ಹಾಗೂ ಬಿಎಸ್‌ಎಫ್‌ನ ಮಾಜಿ ಯೋಧ ತೇಜ್ ಬಹಾದ್ದೂರ್ ಯಾದವ್ ಆರೋಪಿಸಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿ ಸೇವೆಯಲ್ಲಿರುವ ಬಿಎಸ್‌ಎಫ್ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗತ್ತಿದೆ ಎಂದು 2017ರಲ್ಲಿ ತೇಜ್ ಬಹಾದ್ದೂರ್ ಯಾದವ್ ಅವರು ಫೇಸ್‌ಬುಲ್ ಲೈವ್‌ ವಿಡಿಯೊ ಮೂಲಕ ಆರೋಪಿಸಿದ್ದರು. ಆನಂತರ ಅವರನ್ನು ಸೇವೆಯಿಂದ ಬಿಎಸ್ಎಫ್‌ ವಜಾ ಮಾಡಿತ್ತು. ಈಗ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ಕಣಕ್ಕೆ ಇಳಿದಿದ್ದಾರೆ.

ತೇಜ್ ಅವರು ಮೊದಲು ಸ್ವತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಂತರ ಎಸ್‌ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಎರಡೂ ನಾಮಪತ್ರಗಳಲ್ಲಿ ಇರುವ ಕೆಲವು ವಿವರಗಳಲ್ಲಿ ವ್ಯತ್ಯಾಸವಿದೆ. ಈ ಸಂಬಂಧ ವಿವರಣೆ ನೀಡಿ ಎಂದು ಚುನಾವಣಾ ಆಯೋಗವು ತೇಜ್ ಅವರಿಗೆ ನೋಟಿಸ್ ನೀಡಿತ್ತು. ನೋಟಿಸ್‌ಗೆ ಬುಧವಾರ ಬೆಳಿಗ್ಗೆ 11ರ ಒಳಗೆ ಉತ್ತರ ನೀಡಿ ಎಂದೂ ಸೂಚಿಸಿತ್ತು. 

ಈ ನೋಟಿಸ್‌ಗೆ ತೇಜ್ ಮತ್ತು ಮಹಾಮೈತ್ರಿಕೂಟದ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನಾನು ಮೊದಲ ನಾಮತ್ರವನ್ನು ಏಪ್ರಿಲ್ 24ರಂದು, ಎರಡನೇ ನಾಮಪತ್ರವನ್ನು ಏಪ್ರಿಲ್ 29ರಂದು ಸಲ್ಲಿಸಿದ್ದೇನೆ. ಇಷ್ಟು ದಿನ ಬಿಟ್ಟು ಈಗ ವಿವರ ಸರಿಯಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮೋದಲೇ ಏಕೆ ವಿವರಣೆ ಕೇಳಲಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಎಸ್‌ಎಫ್ ಸೇವೆಯಿಂದ ತೇಜ್ ಅವರನ್ನು ವಜಾ ಮಾಡಿದ್ದು ಏಕೆ ಎಂಬುದರ ಬಗ್ಗೆ ಸಲ್ಲಿಸಲಾಗಿರುವ ವಿವರದಲ್ಲಿ ಭಿನ್ನತೆ ಇದೆ. ಈ ಸಂಬಂಧ ಅವರು ನೀಡುವ ಉತ್ತರವು ಅವರ ಉಮೇದುವಾರಿಕೆಯ ಭವಿಷ್ಯವನ್ನು ನಿರ್ಧರಿಸಲಿದೆ. ಅವರ ವಿವರಣೆಯು ಸಮರ್ಪಕವಾಗಿ ಇರದಿದ್ದಲ್ಲಿ, ಅವರ ಸ್ಪರ್ಧೆ ರದ್ದುಗೊಳ್ಳುವ ಸಾಧ್ಯತೆ ಇದೆ.

‘ನೋಟಿಸ್‌ಗೆ ಉತ್ತರ ನೀಡಲು ನನಗೆ ಅತ್ಯಂತ ಕಡಿಮೆ ಸಮಯ ನೀಡಲಾಗಿತ್ತು. ಬಹಳ ಕಷ್ಟಪಟ್ಟು ದಾಖಲೆಗಳನ್ನು ಸಲ್ಲಿಸಿದ್ದೇವೆ. ನ್ಯಾಯಕ್ಕಾಗಿ ಹೋರಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.