ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ನೋಂದಣಿ ಮಸೂದೆಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಮುಸ್ಲಿಂ ಲೀಗ್ ಅರ್ಜಿ

Last Updated 13 ಡಿಸೆಂಬರ್ 2019, 2:19 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆಯ ವಿರುದ್ಧ ಮುಸ್ಲಿಂ ಲೀಗ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಈ ಮಸೂದೆಯು ಸಂವಿಧಾನಕ್ಕೆ ವಿರುದ್ಧವಾಗಿದ್ದು, ಮಸೂದೆಯನ್ನು ಜಾರಿಗೊಳಿಸದಂತೆ ಮಧ್ಯಂತರ ತಡೆ ನೀಡಿ ಎಂದು ಅರ್ಜಿಯಲ್ಲಿ ಕೋರಲಾಗಿದೆ.

‘ಧರ್ಮದ ಅಧಾರದಲ್ಲಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮದ ಅಕ್ರಮ ವಲಸಿಗರಿಗೆ ಮಾತ್ರ ಭಾರತದ ಪೌರತ್ವ ನೀಡಲಾಗುತ್ತದೆ. ಆದರೆ, ಮುಸ್ಲಿಮರನ್ನು ಇದರಿಂದ ಹೊರಗೆ ಇಡಲಾಗಿದೆ. ಇದು ಧಾರ್ಮಿಕ ಅಸಮಾನತೆಯಾಗುತ್ತದೆ ಮತ್ತು ಸಂವಿಧಾನದ ಉಲ್ಲಂಘನೆಯಾಗುತ್ತದೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

‘ಈ ಮಸೂದೆ ಕಾಯ್ದೆಯಾದ ನಂತರ ಸರ್ಕಾರವು ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ನಡೆಸುತ್ತದೆ. ಆಗ ಯಾವುದೇ ದಾಖಲೆ ಇಲ್ಲದಿದ್ದರೂ ಮುಸ್ಲಿಮೇತರರು ಪೌರತ್ವ ಪಡೆಯುತ್ತಾರೆ. ಆದರೆ, ಮುಸ್ಲಿಮರು ಮಾತ್ರ ತಮ್ಮ ಪೌರತ್ವವನ್ನು ಸಾಬೀತು ಮಾಡಬೇಕಾಗುತ್ತದೆ. ಇದು ಧಾರ್ಮಿಕ ಅಸಮಾನತೆಯಾಗುತ್ತದೆ’ ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸ
ಲಾಗಿದೆ.

‘ಯಾವ ಧರ್ಮದವರಿಗೂ ಪೌರತ್ವ ನೀಡುವುದನ್ನು ನಾವು ವಿರೋಧಿಸುತ್ತಿಲ್ಲ. ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಲ್ಲಿ ಅಹಮದೀಯರು, ಶಿಯಾ ಮತ್ತು ಹಜಾರಾ ಸಮುದಾಯದವರೂ ಧಾರ್ಮಿಕ ಕಿರುಕುಳ ಅನುಭವಿಸುತ್ತಿದ್ದಾರೆ. ಈ ಜನರನ್ನು ಮಸೂದೆಯಿಂದ ಹೊರಗೆ ಇಡಲಾಗಿದೆ. ಅಲ್ಲದೆ ಭೂತಾನ್, ಮ್ಯಾನ್ಮಾರ್‌, ನೇಪಾಳ ಮತ್ತು ಶ್ರೀಲಂಕಾದ ನಿರಾಶ್ರಿತರನ್ನು ಈ ಮಸೂದೆಯಿಂದ ಕೈಬಿಡಲಾಗಿದೆ. ಇವರನ್ನು ಕೈಬಿಟ್ಟಿದ್ದು ಏಕೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಕಾಂಗ್ರೆಸ್‌ ಸಿದ್ಧತೆ:ಈ ಮಸೂದೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಕಾಂಗ್ರೆಸ್ ಸಹ ಸಿದ್ಧತೆ ನಡೆಸಿದೆ. ‘ಈಶಾನ್ಯ ಭಾರತದ 10ಕ್ಕೂ ಹೆಚ್ಚು ಸಂಘಟನೆಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿವೆ. ಆ ರಾಜ್ಯಗಳಲ್ಲಿನ ಕಾಂಗ್ರೆಸ್‌ನ ಕಾನೂನು ಘಟಕವನ್ನು ಈ ಸಂಘಟನೆಗಳು ಸಂಪರ್ಕಿಸಿವೆ’ ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಹೇಳಿದ್ದಾರೆ.

ಪ್ರತಿಭಟನೆಗೆ ಸಿದ್ಧತೆ:ಈ ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ಸರಣಿ ಪ್ರತಿಭಟನೆ ನಡೆಸುತ್ತೇವೆ ಎಂದು ಮುಸ್ಲಿಂ ಲೀಗ್ ಹೇಳಿದೆ.

- ಮಸೂದೆ ಜಾರಿ ಮಾಡುವುದಿಲ್ಲ: ಕೇರಳ, ತಮಿಳುನಾಡು ಮತ್ತು ಪಂಜಾಬ್‌ ಮುಖ್ಯಮಂತ್ರಿಗಳ ಘೋಷಣೆ

- ಮಸೂದೆಯನ್ನು ವಿರೋಧಿಸಿ, ಡಿಸೆಂಬರ್ 19ರಂದು ದೇಶದಾದ್ಯಂತ ಬಂದ್ ಆಚರಿಸಲು ಎಡಪಕ್ಷಗಳು ನಿರ್ಧರಿಸಿವೆ

- ಮಸೂದೆಗೆ ಅನುಮೋದನೆ ನೀಡದಂತೆ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಮುಸ್ಲಿಂ ಲೀಗ್ ನಿರ್ಧಾರ

- ಭಾರತ ಪ್ರವಾಸವನ್ನು ರದ್ದುಪಡಿಸಿದ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ಮತ್ತು ಗೃಹ ಸಚಿವ ಅಸಾದುಸ್ಸಮಾನ್ ಖಾನ್. ‘ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ’ ಎಂಬ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಭೇಟಿ ರದ್ದತಿ ಸಾಧ್ಯತೆ

- ಬಾಂಗ್ಲಾದೇಶದಲ್ಲಿ ಈಗ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಸರ್ಕಾರ ಹೇಳಿಲ್ಲ. ಬಾಂಗ್ಲಾ ಸಚಿವರ ಭೇಟಿ ರದ್ದತಿಗೆ ಈ ಹೇಳಿಕೆ ಕಾರಣವಲ್ಲ: ವಿದೇಶಾಂಗ ಸಚಿವಾಲಯ

- ‘ಈಶಾನ್ಯ ಭಾರತದಲ್ಲಿ ಹಿಂಸಾಚಾರಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ’ ಎಂದು ಲೋಕಸಭೆಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯರು ಸದನದಿಂದ ಹೊರನಡೆದರು


ಅಸ್ಸಾಂ: ಪೊಲೀಸ್‌ ಅಧಿಕಾರಿಗಳ ತಲೆದಂಡ

ಅಸ್ಸಾಂನಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ, ಕೆಲವು ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಬದಲಾಯಿಸಲಾಗಿದೆ. ಗುವಾಹಟಿ ಪೊಲೀಸ್‌ ಆಯುಕ್ತ ದೀಪಕ್‌ ಕುಮಾರ್‌ ಅವರನ್ನು ತೆಗೆದು ಮುನ್ನಾ ಪ್ರಸಾದ್‌ ಗುಪ್ತಾ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ. ಇವರು ಎಸ್‌ಪಿಜಿಗೆ ನಿಯೋಜನೆಗೊಂಡಿದ್ದರು. ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಎಡಿಜಿಪಿ) (ಕಾನೂನು–ಸುವ್ಯವಸ್ಥೆ) ಮುಕೇಶ್‌ ಅಗರ್‌ವಾಲ್‌ ಅವರನ್ನು ವರ್ಗಾಯಿಸಲಾಗಿದೆ. ಈ ಹುದ್ದೆಗೆ ಸಿಐಡಿ ಎಡಿಜಿಪಿ ಜಿ.ಪಿ. ಸಿಂಗ್‌ ಅವರನ್ನು ನೇಮಿಸಲಾಗಿದೆ.

***

ಇಮ್ರಾನ್ ಖಾನ್ ಅವರು ಭಾರತದ ಬಗ್ಗೆ ಮಾತನಾಡುವ ಬದಲು, ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಲಿ
- ಭಾರತದ ವಿದೇಶಾಂಗ ಸಚಿವಾಲಯ

***

ಈಶಾನ್ಯ ರಾಜ್ಯಗಳಲ್ಲಿ ವಿರೋಧದ ಬೆಂಕಿ ಹೊತ್ತಿ ಉರಿಯುತ್ತಿದೆ. ಈ ಮಸೂದೆಗೆ ಅಲ್ಲಿನ ಜನರ ಒಪ್ಪಿಗೆ ಇಲ್ಲ ಎಂಬುದನ್ನು ಈ ಹೋರಾಟಗಳು ಸಾಬೀತುಮಾಡಿವೆ
- ಮನೀಷ್ ತಿವಾರಿ, ಕಾಂಗ್ರೆಸ್ ನಾಯಕ

***

ಪ್ರಧಾನಿ ನರೇಂದ್ರ ಮೋದಿ ಅವರ ಆಳ್ವಿಕೆಯಲ್ಲಿ ಭಾರತವು, ‘ಹಿಂದೂಗಳೇ ಸರ್ವೋತ್ತಮ’ ಎಂಬ ಕಾರ್ಯಸೂಚಿಯತ್ತ ವ್ಯವಸ್ಥಿತವಾಗಿ ಸರಿಯುತ್ತಿದೆ
- ಇಮ್ರಾನ್‌ ಖಾನ್, ಪಾಕಿಸ್ತಾನದ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT