ಶನಿವಾರ, ಫೆಬ್ರವರಿ 29, 2020
19 °C
ಮಾಜಿ ಸಚಿವ ಯಶವಂತ ಸಿನ್ಹಾ ಹೇಳಿಕೆ: ಸಿಎಎ ವಿರುದ್ಧ ಪಶ್ಚಿಮ ಬಂಗಾಳ ನಿರ್ಣಯ

‘ಪೌರತ್ವ ಬಿಕ್ಕಟ್ಟು, ರಾಜ್ಯಗಳ ಕಡೆಗಣನೆ ಬೇಡ: ಯಶವಂತ ಸಿನ್ಹಾ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಬಿಜೆಪಿಯೇತರ ಪಕ್ಷಗಳ ನೇತೃತ್ವದ ಸರ್ಕಾರವಿರುವ ರಾಜ್ಯ ಗಳು ರಾಷ್ಟ್ರೀಯ ಪೌರತ್ವ ಕಾಯ್ದೆ (ಸಿಎಎ) ವಿರೋಧಿಸಿ ಅಂಗೀಕರಿಸಿರುವ ನಿರ್ಣಯವನ್ನು ಕಡೆಗಣಿಸಲಾಗದು ಎಂದು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಸೋಮವಾರ ಅಭಿಪ್ರಾಯಪಟ್ಟರು.

‘ಇದು, ಪ್ರಜಾಪ್ರಭುತ್ವ ವಿರೋಧಿ ಮತ್ತು ಧರ್ಮದ ಆಧಾರದಲ್ಲಿ ಜನರನ್ನು ವಿಂಗಡಿಸಲಿದೆ. ಇದನ್ನು ಕಾಯ್ದೆಯಾಗಿ ರೂಪಿಸುವ ಅಗತ್ಯವಿರಲಿಲ್ಲ’ ಎಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

‘ಈಗ ಸಾಂವಿಧಾನಿಕ ಬಿಕ್ಕಟ್ಟು ಮೂಡಿದೆ. ಕೇಂದ್ರವು ರಾಜ್ಯ ಸರ್ಕಾರಗಳನ್ನು ಕಡೆಗಣಿಸಲಾಗದು. ಅವುಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದರು.

ಒಂದು ವೇಳೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗದಿದ್ದರೆ ಕೇಂದ್ರ ಸರ್ಕಾರ, ಸಂಬಂಧಿತ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬಹುದು ಎಂದೂ ಆತಂಕ ವ್ಯಕ್ತಪಡಿಸಿದರು. ‘ಅವರು ಮಾಡಲೂ ಬಹುದು. ಅವರು ಹುಚ್ಚು ಜನ’ ಎಂದರು.

ಭಾರತದಲ್ಲಿ ಗೆಲ್ಲುತ್ತಿದೆ ಜಿನ್ಹಾ ಚಿಂತನೆ (ಜೈಪುರ ವರದಿ): ‘ಪೌರತ್ವ (ತಿದ್ದುಪಡಿ) ಕಾಯ್ದೆಯು ದೇಶದಲ್ಲಿ ಎನ್‌ಪಿಆರ್‌ ಮತ್ತು ಎನ್‌ಆರ್‌ಸಿಗೂ ಕಾರಣವಾಗುತ್ತಿದೆ. ಇದು, ಪಾಕಿಸ್ತಾನದ ಜನಕ ಮಹಮ್ಮದ್‌ ಅಲಿ ಜಿನ್ಹಾಗೆ ದೊರೆತ ಸಂಪೂರ್ಣ ಗೆಲುವು‘ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್ ಭಾನುವಾರ ಹೇಳಿದರು.

ಇಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಪೌರತ್ವ ಪಡೆಯಲು ಧರ್ಮ ಆಧಾರವಾಗಿರಬೇಕು ಎಂದು ಜಿನ್ಹಾ ಬಯಸಿದ್ದರು. ಅವರು  ಗೆದ್ದಿದ್ದಾರೆ ಎನ್ನುವುದಿಲ್ಲ. ಗೆಲುವಿನ ಹಾದಿಯಲಿದ್ದಾರೆ. ದೇಶದ ಎದುರು ಈಗಲೂ ಜಿನ್ಹಾ ಮತ್ತು ಗಾಂಧೀಜಿ ಚಿಂತನೆಯ ಆಯ್ಕೆಗಳಿವೆ’ ಎಂದು ಸೂಚ್ಯವಾಗಿ ಹೇಳಿದರು.

ಮಾನವ ಸರಪಳಿ (ನವದೆಹಲಿ ವರದಿ): ಇದೇ 30ರಂದು ರಾಜ್‌ಘಾಟ್‌ನಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರುದ್ಧ ಪ್ರತಿಭಟಿಸಲು ಎಡಪಂಥೀಯ ಸಂಘಟನೆಗಳು ನಿರ್ಧರಿಸಿವೆ. ‘ಜನ್‌ ಏಕ್ತಾ ಜನ್‌ ಆಂದೋಲನ್‌’ ಶೀರ್ಷಿಕೆಯಡಿ ಎಡಪಂಥೀಯ ಸಂಘಟನೆಗಳು ಪ್ರತಿಭಟನೆಗೆ ನಿರ್ಧರಿಸಿವೆ.

ಜ.26ರಂದು ಕೋಲ್ಕತ್ತದಲ್ಲಿ 11 ಕಿ.ಮೀ ಉದ್ದ ಹಾಗೂ ಕೇರಳದಲ್ಲೂ ಸಿಎಎ ವಿರುದ್ಧ 620 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಗಿತ್ತು. 

ಅಂತರ ಕಾಯ್ದುಕೊಂಡ ಇ.ಸಿ

ಐರೋಪ್ಯ ಒಕ್ಕೂಟದ ಸಂಸತ್ತಿನಲ್ಲಿ ಸಿಎಎ ವಿರುದ್ಧ ಮಂಡಿಸಿರುವ ನಿಲುವಳಿಗೆ ಸಂಬಂಧಿಸಿದಂತೆ ಐರೋಪ್ಯ ಒಕ್ಕೂಟದ ಕಾರ್ಯನಿರ್ವಹಣಾ ಘಟಕವಾದ ಐರೋಪ್ಯ ಆಯೋಗವು (ಇ.ಸಿ) ಅಂತರ ಕಾಯ್ದುಕೊಂಡಿದೆ.

ಇನ್ನೊಂದೆಡೆ ಇದರ ಪರಿಣಾಮಗಳನ್ನು ತಡೆಯಲು ಇ.ಸಿ ಮುಂದಾಗಿದೆ. ‘ಸಂಸತ್ತು ಮತ್ತು ಅದರ ಸದಸ್ಯರ ಅಭಿಪ್ರಾಯಗಳು ಒಕ್ಕೂಟದ ಅಧಿಕೃತ ಅಭಿಪ್ರಾಯಗಳಲ್ಲ’ ಎಂದು ಹೇಳಿದೆ. ಸಂಸತ್ತಿನ 751 ಸದಸ್ಯರ ಪೈಕಿ 626 ಸದಸ್ಯರು ಖಂಡನಾ ನಿಲುವಳಿ ಬೆಂಬಲಿಸಿದ್ದಾರೆ.

ಮುಂಬೈನಲ್ಲಿ ಶಾಹೀನ್‌ ಬಾಗ್‌ ಮಾದರಿ ಪ್ರತಿಭಟನೆ
ಮುಂಬೈ: ನವದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯಿಂದ ಸ್ಫೂರ್ತಿ ಪಡೆದ ಮುಂಬೈನ ಮಹಿಳೆಯರ ಗುಂಪೊಂದು ಇದೇ ಮಾದರಿಯ ಪ್ರತಿಭಟನೆಯೊಂದನ್ನು ಆರಂಭಿಸಿದೆ.

‘ಮುಂಬೈ ಬಾಗ್’ ಶೀರ್ಷಿಕೆಯಡಿ ಸಿಎಎ–ಎನ್ಆರ್‌ಸಿ–ಎನ್‌ಪಿಆರ್ ವಿರುದ್ಧ ಜನವರಿ 26ರ ಮಧ್ಯರಾತ್ರಿ ಮುಂಬೈನ ಮೊರ್ಲ್ಯಾಂಡ್ ರಸ್ತೆ ಮತ್ತು ಥಂಡಿ ಸಡಕ್‌ನಲ್ಲಿ ಈ ಪ್ರತಿಭಟನೆ ಆರಂಭವಾಯಿತು.

ಜನಸಂದಣಿ ಹೆಚ್ಚುತ್ತಿದ್ದಂತೆ, ಅರೇಬಿಯಾ ಹೋಟೆಲ್‌ನ ಹೊರಗೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ತನಿಖೆಗೆ ಕಾಂಗ್ರೆಸ್‌ ಆಗ್ರಹ

ನವದೆಹಲಿ (ಪಿಟಿಐ): ಉತ್ತರ ಪ್ರದೇಶದಲ್ಲಿ ನಡೆದ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಮಾನವ ಹಕ್ಕು ಆಯೋಗದ ಅಧಿಕಾರಿಗಳನ್ನು ಸೋಮವಾರ ಭೇಟಿ ಮಾಡಿದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ನಿಯೋಗವು, ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ದೌರ್ಜನ್ಯದ ಹಾಗೂ ಪ್ರತಿಭಟನೆ ವೇಳೆ ಸಂಭವಿಸಿದ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

ಪೌರತ್ವಕ್ಕಾಗಿ ಅರ್ಜಿಧರ್ಮ ಸಾಬೀತಿಗೆ ದಾಖಲೆ ಸಲ್ಲಿಕೆ ಕಡ್ಡಾಯ

ನವದೆಹಲಿ: ದೇಶದ ಪೌರತ್ವ ಬಯಸಿ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಅರ್ಜಿ ಸಲ್ಲಿಸುವಾಗ ತಮ್ಮ ಧರ್ಮ ಮತ್ತು 2014ರ ಡಿಸೆಂಬರ್‌ಗೂ ಮೊದಲು ದೇಶಕ್ಕೆ ಬಂದಿದ್ದೇವೆ ಎಂಬುದನ್ನು ಸಾಬೀತುಪಡಿಸುವ ದಾಖಲೆಯನ್ನು ಒದಗಿಸುವುದು ಕಡ್ಡಾಯ.

ಸೋಮವಾರ ಅಧಿಕಾರಿಗಳು ಇದನ್ನು ದೃಢಪಡಿಸಿದ್ದು, ಕಾಯ್ದೆ ಆಧರಿಸಿ ನಿಯಮಾವಳಿ ರೂಪಿಸಲಾಗುತ್ತಿದೆ. ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದು ಪೌರತ್ವಕ್ಕೆ ಅರ್ಜಿ ಸಲ್ಲಿಸುವವರು ಈ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದ್ದಾರೆ.

ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಮುನ್ನ 11 ವರ್ಷ ನೆಲೆಸಿರಬೇಕು ಎಂಬುದಕ್ಕೆ ತಿದ್ದುಪಡಿ ತರಲಾಗಿದ್ದು, ಹೊಸ ಕಾಯ್ದೆಯಲ್ಲಿ ಐದು ವರ್ಷಗಳಿಗೆ ಇಳಿಸಲಾಗಿದೆ. ತಾವಿದ್ದ ರಾಷ್ಟ್ರ, ಧರ್ಮ, ಎಷ್ಟು ವರ್ಷದಿಂದ ದೇಶದಲ್ಲಿ ನೆಲೆಸಿದ್ದೇವೆ ಎಂಬ ಮಾಹಿತಿಗಳನ್ನು ಒದಗಿಸಬೇಕು.

ಸಂಸತ್ತಿನ ಜಂಟಿ ಸಮಿತಿಯ ವರದಿಯನುಸಾರ, ಈ ಮೂರು ರಾಷ್ಟ್ರಗಳಿಂದ 31,313 ಧಾರ್ಮಿಕ ಅಲ್ಪಸಂಖ್ಯಾತರು ವಲಸೆ ಬಂದಿದ್ದು, ಧಾರ್ಮಿಕ ಕಿರುಕುಳದ ಕಾರಣ ನೀಡಿದ್ದಾಗಿ ಇವರಿಗೆ ದೀರ್ಘಾವಧಿಯ ವೀಸಾ ನೀಡಲಾಗಿದೆ. ಹೀಗೆ ವಲಸೆ ಬಂದವರಲ್ಲಿ 31,313 ಹಿಂದೂಗಳು, 5,807 ಸಿಖ್ಖರು, 55 ಮಂದಿ ಕ್ರೈಸ್ತರು ಮತ್ತು ಬೌದ್ಧ ಮತ್ತು ಪಾರ್ಸಿ ಧರ್ಮದ ಒಬ್ಬರು ಸೇರಿದ್ದಾರೆ.

ಸಿಎಎ ರದ್ದತಿಗೆ ಆಗ್ರಹ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಿರ್ಣಯ

ಕೋಲ್ಕತ್ತ: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ವಿರೋಧಿಸಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸೋಮವಾರ ನಿರ್ಣಯ ಅಂಗೀಕರಿಸಲಾಯಿತು. ಕಾಯ್ದೆ ರದ್ದುಪಡಿಸಬೇಕು. ಅಲ್ಲದೆ, ಎನ್‌ಪಿಆರ್ ಮತ್ತು ಉದ್ದೇಶಿತ ಎನ್‌ಆರ್‌ಸಿ ಅನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ.

ನಿರ್ಣಯ ಕುರಿತು ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪೌರತ್ವ (ತಿದ್ದುಪಡಿ) ಕಾಯ್ದೆಯು ಸಂವಿಧಾನ ಮತ್ತು ಮಾನವೀಯತೆಗೆ ವಿರುದ್ಧವಾದುದು. ಸಿಎಎ ಮತ್ತು ಎನ್‌ಪಿಆರ್‌ ಎರಡನ್ನೂ ರದ್ದುಪಡಿಸಬೇಕು ಎಂದು ಹೇಳಿದರು.

ಈ ನಿರ್ಣಯಕ್ಕೆ ವಿರೋಧಪಕ್ಷಗಳಾದ ಕಾಂಗ್ರೆಸ್‌ ಮತ್ತು ಸಿಪಿಎಂ ಬೆಂಬಲ ವ್ಯಕ್ತಪಡಿಸಿದವು. ಪಶ್ಚಿಮ ಬಂಗಾಳವು ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ನಾಲ್ಕನೇ ರಾಜ್ಯವಾಗಿದೆ. ಹಿಂದೆ ಕೇರಳ, ರಾಜಸ್ಥಾನ, ಪಂಜಾಬ್‌ ರಾಜ್ಯಗಳು ನಿರ್ಣಯವನ್ನು ಅಂಗೀಕರಿಸಿದ್ದವು.

ಈ ಹಿಂದೆ ಸೆಪ್ಟೆಂಬರ್ 2019ರಲ್ಲಿ ಎನ್‌ಆರ್‌ಸಿ ವಿರೋಧಿಸಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಬಿಜೆಪಿ ಸಹಜವಾಗಿ ನಿರ್ಣಯವನ್ನು ವಿರೋಧಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು