ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್ಇ: 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳೆಲ್ಲರೂ ಪಾಸ್ 

ಸಿಬಿಎಸ್‌ಇಗೆ ಮಾನವ ಸಂಪನ್ಮೂಲ ಸಚಿವಾಲಯ ನಿರ್ದೇಶನ
Last Updated 1 ಏಪ್ರಿಲ್ 2020, 17:05 IST
ಅಕ್ಷರ ಗಾತ್ರ

ನವದೆಹಲಿ: 1ರಿಂದ 8ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿ ಮುಂದಿನ ತರಗತಿಯ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ನಿರ್ದೇಶನ ನೀಡಿದೆ.

ದೇಶದಲ್ಲಿ ಕೊರೊನಾ ವೈರಸ್‌ ಕಾಣಿಸಿಕೊಂಡಿರುವುದರಿಂದ ಸಚಿವಾಲಯ ಈ ನಿರ್ದೇಶನ ನೀಡಿದೆ.

9 ಮತ್ತು 11ನೇ ತರಗತಿ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಇದುವರೆಗೆ ನಡೆಸಿದ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಉತ್ತೀರ್ಣಗೊಳಿಸಲಾಗುವುದು. ಈ ಬಾರಿ ಉತ್ತೀರ್ಣರಾಗದವರು ಶಾಲೆಗಳಲ್ಲಿ ಆನ್‌ಲೈನ್‌ ಅಥವಾ ಆಫ್‌ಲೈನ್‌ ಆಧಾರಿತ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಬಹುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೊಖ್ರಿಯಾಲ್‌ ನಿಶಾಂಕ್‌ ಟ್ವೀಟ್‌ ಮಾಡಿದ್ದಾರೆ.

29 ವಿಷಯಗಳಿಗೆ ಮಾತ್ರ ಪರೀಕ್ಷೆ: 10 ಮತ್ತು 12ನೇ ತರಗತಿಯ ಮುಖ್ಯ ವಿಷಯಗಳಿಗೆ ಮಾತ್ರ ಸಿಬಿಎಸ್‌ಇ ಪರೀಕ್ಷೆ ನಡೆಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅಗತ್ಯವಿರುವ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು. ಉಳಿದ ವಿಷಯಗಳಿಗೆ ಪರೀಕ್ಷೆ ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ.

ವಿದೇಶದಲ್ಲಿ 10 ಮತ್ತು 12ನೇ ತರಗತಿಯ ಬಾಕಿ ಉಳಿದಿರುವ ವಿಷಯಗಳಿಗೆ ಪರೀಕ್ಷೆ ನಡೆಸುವುದಿಲ್ಲ ಎಂದು ಸಿಬಿಎಸ್‌ಇ ಕಾರ್ಯದರ್ಶಿ ಅನುರಾಗ್‌ ತ್ರಿಪಾಠಿ ತಿಳಿಸಿದ್ದಾರೆ.

25 ದೇಶಗಳಲ್ಲಿ ಸಿಬಿಎಸ್‌ಇ ಶಾಲೆಗಳಿವೆ. ಈ ಎಲ್ಲ ದೇಶಗಳು ಲಾಕ್‌ಡೌನ್‌ ಆಗಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅನ್ವಯಿಕ ಗಣಿತ ಐಚ್ಛಿಕ ವಿಷಯ
ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್ಇ) 11 ಮತ್ತು 12ನೇ ತರಗತಿಗಳಿಗೆ ‘ಅನ್ವಯಿಕ ಗಣಿತ’ವನ್ನು ಐಚ್ಛಿಕ ವಿಷಯವನ್ನಾಗಿ ಪರಿಚಯಿಸಿದೆ.

ಉನ್ನತ ಅಧ್ಯಯನಕ್ಕೆ ಗಣಿತವನ್ನು ಮುಖ್ಯ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಲು ಬಯಸದವರು, ಈ ಅನ್ವಯಿಕ ಗಣಿತ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.

11ನೇ ತರಗತಿಗೆ ಪ್ರಸಕ್ತ ವರ್ಷದಿಂದ, 12ನೇ ತರಗತಿಗೆ ಮುಂದಿನ ವರ್ಷದಿಂದ ಇದು ಅನ್ವಯವಾಗಲಿದೆ. 10ನೇ ತರಗತಿಯಲ್ಲಿ ‘ಬೇಸಿಕ್‌’ ಗಣಿತ ಅಧ್ಯಯನ ಮಾಡಿದವರಿಗೆ ಅನ್ವಯಿಕ ಗಣಿತದ ಅಧ್ಯಯನಕ್ಕೆ ಅವಕಾಶ ನೀಡಲಾಗುವುದು.

ಜೆಇಇ–ಅಡ್ವಾನ್ಸ್‌ಡ್‌ ಮುಂದೂಡಿಕೆ
ನವದೆಹಲಿ (ಪಿಟಿಐ):
ಐಐಟಿಗಳಲ್ಲಿ ಪ್ರವೇಶಕ್ಕಾಗಿ ಮೇ 17ರಂದು ನಡೆಯಬೇಕಿದ್ದಜೆಇಇ–ಅಡ್ವಾನ್ಸ್‌ಡ್‌ ಮುಂದೂಡಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಕೋವಿಡ್‌–19 ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ನಡೆಯಬೇಕಿದ್ದಜೆಇಇ(ಮೇನ್‌) ಅನ್ನೂ ಮುಂದೂಡಲಾಗಿದೆ. ಹೀಗಾಗಿ ಮೇನ್‌ ಪರೀಕ್ಷೆ ನಂತರಜೆಇಇ–ಅಡ್ವಾನ್ಸ್‌ಡ್‌ ನಡೆಯುವ ದಿನಾಂಕವನ್ನು ನಿರ್ಧರಿಸಲಾಗುವುದು’ ಎಂದು ಈ ಎರಡೂ ಪರೀಕ್ಷೆಗಳನ್ನು ಸಂಘಟಿಸುವ ಐಐಟಿ–ದೆಹಲಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT